×
Ad

ಮೆಕ್ಸಿಕೋದಲ್ಲಿ ಆಗಸದಿಂದ ನಿಗೂಢವಾಗಿ ನೆಲಕ್ಕುರುಳಿ ಸತ್ತ ನೂರಾರು ಹಕ್ಕಿಗಳು !

Update: 2022-02-16 14:05 IST
photo: nypost

ಹೊಸದಿಲ್ಲಿ: ಪಕ್ಷಿಗಳ ಹಿಂಡೊಂದು ಆಗಸದಿಂದ ನಿಗೂಢವಾಗಿ ಭೂಮಿಗೆ ಬಿದ್ದ ಘಟನೆ ಮೆಕ್ಸಿಕೋದ ಚಿಹುವಾಹುವಾ ಎಂಬಲ್ಲಿಂದ ವರದಿಯಾಗಿದ್ದು ಈ ವೇಳೆ ಹಲವಾರು ಪಕ್ಷಿಗಳು ನೆಲಕ್ಕೆ ಬಿದ್ದ ರಭಸಕ್ಕೆ ಮೃತಪಟ್ಟಿವೆ. ಈ ಕುರಿತಾದ ಸೀಸಿಟಿವಿ ಕ್ಯಾಮರಾ ದೃಶ್ಯಾವಳಿಗಳು ವೈರಲ್ ಆಗಿದ್ದು ನೂರಾರು ಹಳದಿ ಬಣ್ಣದ ತಲೆಯಿರುವ ಕಪ್ಪು ಪಕ್ಷಿಗಳು ನೆಲಕ್ಕುರುಳಿದ ಘಟನೆ ಫೆಬ್ರವರಿ 7ರಂದು ನಡೆದಿದೆ.

ಫುಟ್ಪಾತಿನಲ್ಲಿ ಹಲವಾರು ಪಕ್ಷಿಗಳು ಸತ್ತು ಬಿದ್ದಿರುವುದನ್ನು ಕಂಡ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹಲವಾರು ಪಕ್ಷಿಗಳು ಮನೆಗಳ ಛಾವಣಿಗಳ ಮೇಲೆ ಬಿದ್ದಿವೆ. ಕೆಲ ಪಕ್ಷಿಗಳು ಎದ್ದು ಮತ್ತೆ ಹಾರಿದರೆ ಇನ್ನೂ ಹಲವು ಹಾಗೆಯೇ ಸತ್ತು ಬಿದ್ದವು.

ಟ್ವಿಟ್ಟರ್ ಹಾಗೂ ಫೇಸ್ಬುಕ್‍ನಲ್ಲಿ ಈ ವೀಡಿಯೋ ವೈರಲ್ ಆಗಿದೆ ಆದರೆ ಹಕ್ಕಿಗಳು ಹೀಗೆ ಹಠಾತ್ತನೆ ನೆಲಕ್ಕೆ ಬಿದ್ದು ಹೇಗೆ ಸಾವನ್ನಪ್ಪಿದವೆಂಬುದು ಇನ್ನೂ ನಿಗೂಢವಾಗಿದೆ.

ಈ ಪಕ್ಷಿಗಳು ವಿಷಕಾರಕ ಹೊಗೆಗಳ ಪ್ರಭಾವದಿಂದ ಅಥವಾ ವಿದ್ಯುತ್ ತಂತಿಯ ಮೇಲೆ ಕುಳಿತ ಕಾರಣ ಹೀಗಾಗಿರಬಹುದೆಂದು ಕೆಲವರು ಅಂದಾಜಿಸಿದ್ದರೆ ಇನ್ನು ಕೆಲವರು ಈ ನಿಗೂಢ ಸಾವುಗಳ ಹಿಂದೆ 5ಜಿ ಇರಬಹುದು ಎಂದು ಶಂಕಿಸಿದ್ದಾರೆ.

ಸಣ್ಣ ಹಕ್ಕಿಗಳ ಮೇಲೆ ದಾಳಿ ನಡೆಸುವ ಬೇರೆ ಹಕ್ಕಿಗಳಿಂದಾಗಿಯೂ ಈ ರೀತಿ ಆಗಿರುವ ಸಾಧ್ಯತೆಯಿದೆ ಎಂದು ಕೆಲ ತಜ್ಞರು ಊಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News