×
Ad

ಉ.ಪ್ರದೇಶ,ಬಿಹಾರದ ಭಯ್ಯಾಗಳಿಗೆ ಪಂಜಾಬ್ ಪ್ರವೇಶಿಸಲು ಬಿಡುವುದಿಲ್ಲ: ವಿವಾದ ಸೃಷ್ಟಿಸಿದ ಸಿಎಂ ಚನ್ನಿ ಹೇಳಿಕೆ

Update: 2022-02-16 21:30 IST

ಹೊಸದಿಲ್ಲಿ,ಫೆ.16: ಪಂಜಾಬ್ ವಿಧಾನಸಭಾ ಚುನಾವಣೆಗೆ ಮತದಾನಕ್ಕೆ ಕೆಲವೇ ದಿನಗಳು ಬಾಕಿಯಿರುವಂತೆ ಮುಖ್ಯಮಂತ್ರಿ ಚರಣಜಿತ ಸಿಂಗ್ ಚನ್ನಿ ಅವರು ಉ.ಪ್ರದೇಶ,‌ ಬಿಹಾರದ ಭಯ್ಯಗಳಿಗೆ ಪಂಜಾಬ್ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ರೋಡ್ಶೋ ಒಂದರಲ್ಲಿ ಚನ್ನಿ ಈ ಹೇಳಿಕೆ ನೀಡಿದಾಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪಕ್ಕದಲ್ಲಿಯೇ ಇದ್ದರು.

‘ಪ್ರಿಯಾಂಕಾ ಪಂಜಾಬಿನ ಸೊಸೆಯಾಗಿದ್ದಾರೆ,ಅವರು ಪಂಜಾಬಿಗಳ ಸೊಸೆಯಾಗಿದ್ದಾರೆ. ಉ.ಪ್ರದೇಶ,ಬಿಹಾರ ಮತ್ತು ದಿಲ್ಲಿಗಳಿಂದ ಭಯ್ಯಾಗಳು ಇಲ್ಲಿಗೆ ಬಂದು ಆಡಳಿತ ನಡೆಸುವಂತಿಲ್ಲ. ಪಂಜಾಬಿನಲ್ಲಿ ಪ್ರವೇಶಿಸಲು ಉ.ಪ್ರದೇಶದ ಭೈಯ್ಯಾಗಳಿಗೆ ನಾವು ಅವಕಾಶ ನೀಡುವುದಿಲ್ಲ ’ ಎಂದು ಚನ್ನಿ ಹೇಳಿದಾಗ ಪ್ರಿಯಾಂಕಾ ಮುಗುಳ್ನಗುತ್ತ ಚಪ್ಪಾಳೆ ತಟ್ಟುತ್ತಿದ್ದರು.

ತನ್ನ ಆಮ್ ಆದ್ಮಿ ಪಾರ್ಟಿಗಾಗಿ ಪಂಜಾಬಿನಲ್ಲಿ ವ್ಯಾಪಕ ಪ್ರಚಾರದಲ್ಲಿ ತೊಡಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ಗುರಿಯಾಗಿಸಿಕೊಂಡು ಚನ್ನಿ ಈ ಮಾತುಗಳನ್ನಾಡಿದ್ದಾರೆ ಎಂದು ಭಾವಿಸಲಾಗಿದೆ.

‘ಇದು ಅತ್ಯಂತ ನಾಚಿಕೆಗೇಡು. ಯಾವುದೇ ವ್ಯಕ್ತಿ ಅಥವಾ ನಿರ್ದಿಷ್ಟ ಸಮುದಾಯವನ್ನು ಉದ್ದೇಶಿಸಿ ಇಂತಹ ಹೇಳಿಕೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ ’ಎಂದು ಕೇಜ್ರಿವಾಲ್ ಹೇಳಿದರೆ,ಆಪ್ನ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ ಮಾನ್ ಅವರು,ಪ್ರಿಯಾಂಕಾ ಉ.ಪ್ರದೇಶಕ್ಕೆ ಸೇರಿದವರಾಗಿದ್ದಾರೆ ಎಂದು ಬೆಟ್ಟು ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್,ಹಾಗಿದ್ದರೆ ಅವರೂ ಭಯ್ಯ ಆಗಿದ್ದಾರೆ ಎಂದರು.

ಹಲವರು ಈ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ ಮತ್ತು ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ್ದಾರೆ. ಪ್ರಿಯಾಂಕಾರನ್ನು ಗುರಿಯಾಗಿಸಿಕೊಂಡು ಟ್ವೀಟಿಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ,‘‘ಪ್ರಿಯಾಂಕಾ ಗಾಂಧಿ ಉ.ಪ್ರದೇಶಕ್ಕೆ ಹೋಗಿ ತನ್ನನ್ನು ‘ಉ.ಪ್ರದೇಶದ ಮಗಳು’ಎಂದು ಬಣ್ಣಿಸಿಕೊಳ್ಳುತ್ತಾರೆ. ಪಂಜಾಬಿನಲ್ಲಿ ಉ.ಪ್ರದೇಶ ಮತ್ತು ಬಿಹಾರದ ಜನರನ್ನು ಅವಮಾನಿಸುತ್ತಿದ್ದರೆ ಅವರು ಚಪ್ಪಾಳೆ ತಟ್ಟುತ್ತಾರೆ. ಇದು ಅವರ ಇಬ್ಬಗೆ ಮುಖ ’’ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News