‘ಎಲ್ಲರ ಕನ್ನಡ’ ಎಂದರೆ ಯಾವ ಕನ್ನಡ?

Update: 2022-02-18 05:16 GMT

ಕನ್ನಡದ ಹೆಗಲೇರಿರುವ ಸಂಸ್ಕೃತವನ್ನು ಕೆಳಗಿಳಿಸಬೇಕು; ಹಲವಾರು ಸಂಸ್ಕೃತ ಪದಗಳನ್ನು ಗುಡಿಸಿಹಾಕಿ ಭಾಷೆಯನ್ನು ಸರಳಗೊಳಿಸಬೇಕು ಎಂಬ ಕುರಿತು ಎರಡು ಮಾತಿಲ್ಲ. ಅದರೆ, ಕೆಲವರು ಮುನ್ನೆಲೆಗೆ ತರಲು ಹೆಣಗುತ್ತಿರುವ ಕನ್ನಡದ ರೂಪವನ್ನು ‘ಎಲ್ಲರ ಕನ್ನಡ’ ಎನ್ನಲು ಸಾಧ್ಯವೆ? ಎಲ್ಲರು ಎಂದರೆ ಯಾರ್ಯಾರು? ಈ ಕಲ್ಪನೆಯಲ್ಲೇ ತಪ್ಪಿದೆಯೆ?

ಸಂಸ್ಕೃತವೇ ತುಂಬಿದ ‘ಶಿಷ್ಟ’ ಕನ್ನಡವನ್ನು ಸರಳಗೊಳಿಸಿ, ಸಂಸ್ಕೃತದ ಬದಲು ಕನ್ನಡ ಪದಗಳನ್ನು ಬಳಸಿ ಬರೆಯುವ ಒಂದು ಕನ್ನಡವನ್ನು ಕೆಲವರು ಚಾಲ್ತಿಗೆ ತರುತ್ತಿದ್ದಾರೆ. ಕೆಲವು ಮಹಾಪ್ರಾಣಗಳು, ಅನುಸ್ವಾರ, ವಿಸರ್ಗ, (ಅಂ, ದುಃ ಇತ್ಯಾದಿ), ಐ, ಔ ಇತ್ಯಾದಿಗಳನ್ನು ಬಿಟ್ಟು, ಬರೆಯುವ ಶೈಲಿಯನ್ನೂ ಬದಲಿಸಿ ತಮಗೆ ಸರಿಕಂಡಂತೆ ಕನ್ನಡ ಬರೆಯಲು ಆರಂಭಿಸಿದ್ದಾರೆ. ಕೆಲವರು ಯಾರಿಗೂ ಪರಿಚಯವಿಲ್ಲದ, ಸತ್ತುಹೋದ ಹಳೆಗನ್ನಡ ಪದಗಳನ್ನೂ, ಸ್ಥಳೀಯವಾಗಿ ಮಾತ್ರ ಬಳಕೆಯಲ್ಲಿರುವ ಆಡುನುಡಿಗಳನ್ನೂ ಬಳಸುತ್ತಿದ್ದಾರೆ. ಇದು ಸಾಮಾನ್ಯವಾಗಿ ಕಂಡುಬರುತ್ತಿರುವುದು ಇಲೆಕ್ಟ್ರಾನಿಕ್ ಸಾಮಾಜಿಕ ಮಾಧ್ಯಮಗಳಲ್ಲಿ. ಇದನ್ನು ಅವರು ‘ಎಲ್ಲರ ಕನ್ನಡ’ ಎಂದು ಕರೆಯುತ್ತಿದ್ದಾರೆ. ಹಳೆರೀತಿಯಲ್ಲಿ ಅಂದರೆ, ಈಗ ಚಾಲ್ತಿಯಲ್ಲಿರುವ ರೀತಿಯಲ್ಲಿ ಬರೆಯುತ್ತಿರುವವರಿಗೆ ಇದನ್ನು ಓದುವುದು ಬರೆಯುವುದು ಕಷ್ಟವಾಗುತ್ತಿದೆ. ಹಾಗಿರುವಾಗ ಇದು ‘ಎಲ್ಲರ ಕನ್ನಡ’ ಹೇಗಾಗುತ್ತದೆ? ನಾವು ಕನ್ನಡವನ್ನು ಸಂಸ್ಕೃತದ ಬಿಗಿ ಹಿಡಿತದಿಂದ ಬಿಡಿಸಿ, ಅದನ್ನು ಸರಳಗೊಳಿಸಬೇಕು ನಿಜ; ಆದರೆ, ಹೀಗೊಂದು ‘ಎಲ್ಲರ ಕನ್ನಡ’ ಸಾಧ್ಯವೆ?

ಉದಾಹರಣೆಗೆ ಮಾವನ್ನೇ ತೆಗೆದುಕೊಳ್ಳೋಣ. ಮಾವಿನಲ್ಲಿ ನೆಕ್ಕರೆ, ಮುಂಡಪ್ಪ, ಅಲ್ಫೋನ್ಸೊ, ನೀಲಂ, ಆಪೂಸು, ರಸಪುರಿ, ತೋತಾಪುರಿ ಎಂದು ಸಾವಿರ ಸಾವಿರ ಜಾತಿಗಳಿವೆ. ಹೇಳಲು ಹೆಸರೇ ಇಲ್ಲದ, ಹುಳಿ, ಸಿಹಿ, ವಾಸನೆ, ಘಾಟು, ಸೊನೆಯ ಕಾಟುಮಾವುಗಳೂ ಇವೆ. ಬಣ್ಣ, ಗಾತ್ರ, ಆಕಾರ, ರುಚಿ, ವಾಸನೆ, ಒಗರು ಇವೆಲ್ಲವೂ ಒಂದಕ್ಕಿಂತ ಒಂದು ಬೇರೆಯೇ! ಇವುಗಳಲ್ಲಿ ಯಾವುದು ಎಲ್ಲರ ಮಾವು? ತೊನ್ನೂರು, ಕಜೆ, ಜಯ, ಐಆರ್, ದೀರ್ಸಾಲೆ, ಗಂಧಸಾಲೆ, ಬಾಸ್‌ಮತಿ... ಜೊತೆಗೆ ಬೆಳ್ತಿಗೆ, ಕುಚ್ಚಲು, ಅರೆ ಬೆಳ್ತಿಗೆ ಹೀಗೆ... ಯಾವುದು ಎಲ್ಲರ ಅಕ್ಕಿ, ಎಲ್ಲರ ಭತ್ತ?

 ಯಾವುದೇ ಭಾಷೆಯೂ ಅಷ್ಟೇ. ಅದು ಪ್ರದೇಶದಿಂದ ಪ್ರದೇಶಕ್ಕೆ, ಕೆಲವೇ ಮೈಲಿಗಳ ಅಂತರದಲ್ಲಿ ಕೊಂಚಕೊಂಚವೇ ಬದಲಾಗುತ್ತಾ, ಎರಡು ದೂರ ಪ್ರದೇಶಗಳ ಮಾತುಗಳು ಒಬ್ಬರಿನ್ನೊಬ್ಬರಿಗೆ ಅರ್ಥವೇ ಆಗದಿರುವುದನ್ನು ನೋಡುತ್ತೇವೆ. ಅದರ ರಾಗ, ಲಯ, ಬಳಸುವ ಪದಗಳು, ಅವುಗಳ ಬಳಕೆಯ ಕ್ರಮ, ವಾಕ್ಯ ರಚನೆ ಅಷ್ಟೇ ಏಕೆ ಮೂಲ ವ್ಯಾಕರಣವೂ ಎದ್ದುಕಾಣುವಷ್ಟು ಬದಲಾಗಿರುತ್ತದೆ. ಕೆಲವೊಮ್ಮೆ ಒಂದು ಕಡೆಯಲ್ಲಿ ಸಾಮಾನ್ಯವಾಗಿ ಬಳಸುವ ಪದಗಳು ಇನ್ನೊಂದು ಕಡೆಯಲ್ಲಿ ಅಶ್ಲೀಲ, ಒರಟು ಅರ್ಥವನ್ನೂ ನೀಡಬಹುದು. ಜೊತೆಗೆ ಒಂದು ಪ್ರದೇಶದ ಭೌಗೋಳಿಕ ಪರಿಸರವು, ಅಲ್ಲಿನ ನಿತ್ಯಜೀವನದ ವ್ಯವಹಾರಗಳು ಅದರದ್ದೇ ಆದ ಪದಗಳ ಕಣಜವನ್ನೇ ಹುಟ್ಟುಹಾಕಿರಬಹುದು. ಮಲೆನಾಡಿನ, ಕರಾವಳಿ, ಬಯಲು ಸೀಮೆಯ ಕಾಡು, ಕಡಲು, ಬಯಲುಗಳೇ ತಮ್ಮದೇ ಆದ ನೂರಾರು ಪದಗಳನ್ನು ಹುಟ್ಟುಹಾಕಿವೆ.

ಅದೇ ರೀತಿಯಲ್ಲಿ ಗಡಿಪ್ರದೇಶಗಳಲ್ಲಿ ಕನ್ನಡವು ನೆರೆಯ ಭಾಷೆಗಳಿಂದ ಕೊಡುಕೊಳ್ಳುವಿಕೆಯನ್ನು ನಡೆಸುತ್ತಲೇ ಇವೆ. ಅವುಗಳ ಪ್ರಭಾವ ದಟ್ಟವಾಗಿ ಕಾಣಬಹುದು. ಉದಾಹರಣೆಗ ಶೈಲಿ ಮತ್ತು ಪದಬಳಕೆಯಿಂದಲೇ ಕಾಸರಗೋಡಿನ ಕನ್ನಡ ಪತ್ರಕರ್ತರನ್ನು ಗುರುತಿಸಬಹುದು. ಅದೇ ರೀತಿಯಲ್ಲಿ ತುಳು, ಕೊಂಕಣಿ, ಬ್ಯಾರಿ, ಅರೆಬಾಸೆ, ಕುಂದಗನ್ನಡ, ಹವ್ಯಕ, ಮಲಯಾಳಂ, ಮುಂಬೈ ಸಂಪರ್ಕದ ಹಿಂದಿ, ಇಂಗ್ಲಿಷ್ ಹೀಗೆ ನಿತ್ಯವೂ ಹಲವು ಭಾಷೆಗಳು ಕಿವಿಗೆ ಬೀಳುವ ಕರಾವಳಿಯ ಜಿಲ್ಲೆಗಳಲ್ಲಿ ಕನ್ನಡದ ಮೇಲೆ ಈ ಭಾಷೆಗಳ ಪ್ರಭಾವ ಎದ್ದು ಕಾಣುತ್ತದೆ. ಮೇಲಾಗಿ ಇಲ್ಲಿ ಕನ್ನಡ ಓದು, ಬರಹ, ಮಾತುಬಲ್ಲವರು ಬಳಸುವ ಕನ್ನಡವು ಹೆಚ್ಚಾಗಿ ಶಾಲೆಗಳಲ್ಲಿ ಕಲಿಸುವ ಸಂಸ್ಕೃತ ತುಂಬಿದ ಪುಸ್ತಕದ ಕನ್ನಡದ ಜೊತೆಗೆಯೇ ತನ್ನದೇ ಆದ ಪ್ರಾದೇಶಿಕ ಸೊಗಡನ್ನು ಬೆಳೆಸಿಕೊಂಡಿದೆ ಎಂಬುದನ್ನು ಗುರುತಿಸಬೇಕು. ಇಲ್ಲಿ ಬಳಸುವ ಕನ್ನಡ ಪದಗಳು ಬೇರೆ ಕಡೆಗಳವರಿಗೆ ಅರ್ಥವಾಗದು. (ಉದಾ: ‘‘ಅವನದ್ದೆಂತ ಸಾವು ಮಾರ್ರೆ? ಒಟ್ರಾಸಿ ಮಾತಾಡ್ತಾನೆ’’)

ಈ ಭಾಷೆಗಳು ಕನ್ನಡದ ಉಚ್ಚಾರಣೆಯಲ್ಲಿಯೂ ಪ್ರಭಾವ ಬೀರಿರುವುದನ್ನು ನೋಡಬಹುದು. ಎಲ್ಲರ ಕನ್ನಡದ ಪ್ರತಿಪಾದಕರ ನ್ಯಾಯಯುತ ದೂರೆಂದರೆ, ಹಳ್ಳಿಗರಿಗೆ ಮಹಾಪ್ರಾಣ ಮತ್ತು ಕೆಲವು ಅಕ್ಷರಗಳನ್ನು ಉಚ್ಚರಿಸಲು ಆಗುವುದಿಲ್ಲ ಎಂಬುದು. ಬ್ರಾಹ್ಮಣರ ತುಳು ಬಿಟ್ಟರೆ ‘ಳ’ ಅಕ್ಷರವನ್ನೇ ಬಳಸದ ಹೆಚ್ಚಿನ ತುಳುವರಿಗೆ ‘ಳ’ ಉಚ್ಚರಿಸಲು ಬರುವುದಿಲ್ಲ. ಅವರು ಮಾತಿನಲ್ಲಿ ‘ಲ’ ಬಳಸುತ್ತಾರೆ. ಅದೇ ರೀತಿ ‘ಶ’ದ ಬದಲು ‘ಸ’, ‘ಣ’ದ ಬದಲು ‘ನ’ ಬಳಸುವುದು ಹೆಚ್ಚು. ಅದೇ ರೀತಿಯಲ್ಲಿ, ಬ್ಯಾರಿಗಳು ಅದಲುಬದಲು ಎಂಬಂತೆ ‘ಲ’ದ ಬದಲು ‘ಳ’ ಮತ್ತು ‘ಸ’ದ ಬದಲು ‘ಶ’, ‘ನ’ದ ಬದಲು ‘ಣ’ ಬಳಸುವುದನ್ನು ಹೆಚ್ಚಾಗಿ ಕಾಣಬಹುದು. ಅಲ್ಲದೆ ಇವರಲ್ಲಿ ಮಹಾಪ್ರಾಣದ ಅನಗತ್ಯ ಬಳಕೆ ಸ್ವಲ್ಪಹೆಚ್ಚು. ಕೊಂಕಣಿಗಳು ಸ್ವಲ್ಪಅತಿ ಎನಿಸುವಷ್ಟು ಪುಸ್ತಕದ ಕನ್ನಡ ಮಾತನಾಡುತ್ತಾರೆ. ಜಿಎಸ್‌ಬಿ, ಸಾರಸ್ವತರು ಮತ್ತು ಕ್ರೈಸ್ತರು ಮಾತಾಡುವ ಕೊಂಕಣಿಯಲ್ಲಿ ಸ್ವಲ್ಪವ್ಯತ್ಯಾಸವಿದ್ದರೂ ಅದರ ದ್ರಾವಿಡವಲ್ಲದ ವ್ಯಾಕರಣದ ಪ್ರಭಾವ ಅವರ ಕನ್ನಡದ ಮೇಲೂ ಆಗುತ್ತದೆ. ಉದಾರಣೆಗೆ, ಕೊಂಕಣಿಯ ವಿಭಕ್ತಿಗಳಲ್ಲಿ ‘ಅವನಿಗೆ’ ಮತ್ತು ‘ಅವನನ್ನು’ ಎಂಬ ವ್ಯತ್ಯಾಸವಿಲ್ಲ. ಆದುದರಿಂದ ಅವರು ‘‘ಅವನನ್ನು ಕರೆ’’ ಎಂದು ಹೇಳುವುದಿಲ್ಲ; ‘‘ಅವನಿಗೆ ಕರೆ’’ ಎಂದೇ ಹೇಳುತ್ತಾರೆ. ಮರಾಠಿ ಪ್ರಭಾವದ ಪ್ರದೇಶಗಳಲ್ಲಿಯೂ ಇದನ್ನೇ ಗಮನಿಸಬಹುದು. ತಮಿಳು, ತೆಲುಗು ಗಡಿಗಳಲ್ಲೂ ಈ ಪ್ರಭಾವ ಇದೆ. ಉದಾಹರಣೆಗೆ ‘ಕೇಳಿದೆ’ ಎಂದು ಹೇಳಬಹುದಾದಲ್ಲಿ ‘ಕೇಳಲ್ಪಟ್ಟೆ’ ಎಂಬ ಪ್ರಯೋಗವನ್ನು ನೋಡಬಹುದು.

ಇಷ್ಟವಾದ ಪುಸ್ತಕಗಳನ್ನು ಮತ್ತೆ ಮತ್ತೆ ಓದುವ ಪರಿಪಾಟದಂತೆ ಇತ್ತೀಚೆಗೆ ಮೂರು ಕನ್ನಡ ಪುಸ್ತಕಗಳನ್ನು ಓದಿದೆ. ಆದರೆ, ಈ ಬಾರಿ ಓದಿದ್ದು ಮಾತ್ರ ಸರಳಗನ್ನಡ ಮತ್ತು ಪ್ರಾದೇಶಿಕ ಭಾಷಾ ವೈವಿಧ್ಯವನ್ನು ಗಮನದಲ್ಲಿ ಇಟ್ಟುಕೊಂಡು. ಅವುಗಳಲ್ಲಿ ಒಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ‘ಪಂಪ ಭಾರತ’ ಅಥವಾ ‘ವಿಕ್ರಮಾರ್ಜುನ ವಿಜಯಂ’. ಇದರ ಜೊತೆಗೆ ಅನಂತ ರಂಗಾಚಾರ್ ಅವರ ಸಂಸ್ಕೃತಮಯ ಕನ್ನಡ ವಿವರಣೆಯಿದೆ.

ಕನ್ನಡದ ಆದಿಕವಿ ಎನ್ನಲಾಗುವ ಪಂಪನ ಕಾವ್ಯದಲ್ಲೇ ಹೇರಳವಾಗಿ ಸಂಸ್ಕೃತ ತುಂಬಿರುವಾಗ ಮೂಲಕನ್ನಡ ಹುಡುಕಲು ನಾವು ಎಷ್ಟು ಹಿಂದೆ ಹೋಗಬೇಕಾದೀತು? ಅವನೇ ತನ್ನನ್ನು ಕವಿತಾಗುಣಾರ್ಣವನೆಂದು ಸಂಸ್ಕೃತದಲ್ಲಿಯೇ ಹೇಳಿಕೊಳ್ಳುತ್ತಾನೆ. ಅವನ ಅಧ್ಯಾಯಗಳೂ ಪ್ರಥಮಾಶ್ವಾಸಂ, ದ್ವಿತೀಯ... ಎಂದು ಸಂಸ್ಕೃತದಲ್ಲಿಯೇ ಆರಂಭವಾಗುತ್ತದೆ. ಪಂಪನು ಉತ್ತಮವಾದ ಕಾವ್ಯದ ತಿರುಳನ್ನೂ, ತನ್ನಕಾವ್ಯದ ಮೂಲತತ್ವವನ್ನೂ ಶ್ರುತಪಡಿಸಿರುವುದು ಹೀಗೆ:

ಮೃದು ಪದಗತಿಯಿಂ ರಸಭಾ

ವದ ಪೆರ್ಚಿಂ ಪಣ್ಯವನಿತೆಯೊಲ್ ಕೃತಿಸೌಂದ

ರ್ಯದ ಚಾತುರ್ಯದ ಕಣಿಯಿನೆ

ವಿದಗ್ಧಬುಧಜನಮನ್, ಆಲೆಯಲೇವೇಡಾ

ಈ ಕನ್ನಡ ನಿಮಗೇನಾದರೂ ಅರ್ಥವಾಯಿತೆ? ಪಂಪ, ರನ್ನ, ಕುಮಾರವ್ಯಾಸ, ರಾಘವಾಂಕ.. ಹೀಗೆ... ಹಳೆಗನ್ನಡ ಕಾವ್ಯಗಳು ಹಲವಾರು ಕುತೂಹಲಕಾರಿಯಾದರೂ, ಈಗ ಮರೆಯಾಗಿರುವ ಕನ್ನಡ ಪದಗಳನ್ನು ಹೊಂದಿವೆಯಾದರೂ, ಸಂಸ್ಕೃತಮಯ ವಿವರಣೆಗಳ ಜೊತೆ, ಬದಿಯಲ್ಲಿ ಡಿಕ್ಷನರಿ ಇಟ್ಟುಕೊಂಡು ಅರ್ಥಮಾಡಿಕೊಳ್ಳಬೇಕಾದ ಕಾವ್ಯಗಳಿಂದ ಕನ್ನಡದ ಪದಗಳನ್ನು ಹೆಕ್ಕಿ ತಂದು, ಸಂಸ್ಕೃತ ಪದಗಳ ಜಾಗದಲ್ಲಿ ಕೂರಿಸಿ ಸಿದ್ಧಪಡಿಸಿದ ಕನ್ನಡವು ‘ಎಲ್ಲರ ಕನ್ನಡ’ ಆಗುವುದಾದರೂ ಹೇಗೆ?

ಇನ್ನೊಂದು ಪುಸ್ತಕ ದೇವನೂರ ಮಹದೇವರ ‘ದ್ಯಾವನೂರು ಮತ್ತು ಒಡಲಾಳ’. ಅವರು ಕುಸುಮಬಾಲೆ ಬರೆದಾಗ, ಅದು ಅರ್ಥವಾಗುವುದಿಲ್ಲ; ಅದನ್ನು ಮತ್ತೆ ಕನ್ನಡದಲ್ಲಿ ಬರೆಯಬೇಕೆಂದು ಹಂಗಿಸಿದವರು ಇದ್ದಾರೆ. ನಂಜನಗೂಡು ಕಡೆಯ ನೆಲದ ಕನ್ನಡ ದ್ಯಾವನೂರು ಮತ್ತು ಒಡಲಾಳದಲ್ಲಿದೆ. ಅದನ್ನು ಕನ್ನಡವಲ್ಲ ಎಂದು ಹೇಳಲಾದೀತೆ? ಅಲ್ಲಿ ಬರುವ ಅದ್ದರಿಸು, ಅವಚವಿ, ಕಲಕೆತ್ತಿ, ಬೆಂಮನ್ಸೆ ಮುಂತಾದ ಅಚ್ಚಗನ್ನಡ ಪ್ರಾದೇಶಿಕ ಪದಗಳನ್ನು ಎತ್ತಿತಂದು ಸಂಸ್ಕೃತ ಪದಗಳ ಜಾಗದಲ್ಲಿ ಕೂರಿಸಿದರೆ ಅದು ‘ಎಲ್ಲರ ಕನ್ನಡ’ ಆಗುವುದೇ?

 ಮೂರನೆಯದು ಯಶವಂತ ಚಿತ್ತಾಲರ ‘ಐವತ್ತೊಂದು ಕತೆಗಳು’. ಉತ್ತರ ಕನ್ನಡ, ಧಾರವಾಡ, ಮುಂಬೈಯಲ್ಲಿ ಮೊದಲು ಕನ್ನಡದಲ್ಲಿ, ನಂತರ ಇಂಗ್ಲಿಷ್‌ನಲ್ಲಿ ತಾಂತ್ರಿಕ ಶಿಕ್ಷಣ ಪಡೆದ, ಕೊಂಕಣಿ ತಾಯಿನುಡಿಯ, ತಾವೇ ಹೇಳಿಕೊಂಡಂತೆ ನಗರದಲ್ಲಿ ಕನ್ನಡ ಮಾತನಾಡುವವರ ಒಡನಾಟಕ್ಕೆ ಸದಾ ಕಾಯುತ್ತಿದ್ದ ಯಶವಂತ ಚಿತ್ತಾಲರ ಕತೆಗಳಲ್ಲಿ ಜೀವತಳೆಯುವ ಉತ್ತರ ಕನ್ನಡದ ಭಾಷೆ ಎಲ್ಲಾ ಪ್ರದೇಶಗಳ ಸಾಮಾನ್ಯ ಕನ್ನಡಿಗರಿಗೆ ಅರ್ಥವಾಗಬಹುದೆ? ಸಲಗಿ, ಚೂಳಿ, ತರ್ತೆ, ಪೇಂಟಿ, ಮೀನ ಆಸೆ, ನಾಣಿಗೆ ಇತ್ಯಾದಿಗಳ ಜೊತೆಗೆ- ಕೊಂಕಣಿ, ಮರಾಠಿ ಪ್ರಭಾವದ ಕನ್ನಡದ ಪದಗಳನ್ನು ಸಂಸ್ಕೃತ ಪದಗಳ ಜಾಗದಲ್ಲಿ ಕೂರಿಸಿದರೆ, ಅದು ಎಲ್ಲರ ಕನ್ನಡವಾದೀತೆ? ಇಲ್ಲಿನ ಕನ್ನಡದಲ್ಲಿ ಮೊದಲೇ ಹೇಳಿದಂತೆ ಅವನಿಗೆ, ‘ಅವನನ್ನು’ ಎಂಬುದಕ್ಕೆ ಒಟ್ಟಾಗಿ ‘ಅವನಿಗೆ’ ಎಂದೇ ಬಳಸಲಾಗುತ್ತದೆ. ಅಲ್ಲದೆ ‘ಅಲ್ಲಿ ಇರುವ’ ಎಂಬುದನ್ನು ಭೂತಕಾಲ ಎಂಬಂತೆ ‘ಅಲ್ಲಿ ಇದ್ದ’ ಎಂದು ಹೇಳಲಾಗುತ್ತದೆ. ಅಂದರೆ ವ್ಯಾಕರಣದಲ್ಲಿಯೂ ಬೇರೆತನ.

 ಈ ರೀತಿಯಾಗಿ ಧಾರವಾಡ-ಹುಬ್ಬಳ್ಳಿ, ಹಾಸನ, ಮೈಸೂರು, ಮಂಡ್ಯ, ಬಳ್ಳಾರಿ, ಕುಂದ, ಅರೆ, ಹವ್ಯಕ ಮತ್ತು ಟಿವಿ, ರೇಡಿಯೋಗಳ ಇಂಗ್ಲಿಷ್ಗನ್ನಡ ಸೇರಿದಂತೆ ನೂರಾರು ಸ್ಥಳೀಯ ಕನ್ನಡ ಭಾಷೆಗಳಿರುವಾಗ, ಸಾವಿರಾರು ನೆಲದ ಪದಗಳು ಇರುವ, ನೂರಾರು ಲಯ, ಶೈಲಿ, ಸ್ವಂತಿಕೆ ಇರುವ ಭಾಷೆಯನ್ನು ಎಲ್ಲರಿಗೂ ಅರ್ಥವಾಗುವ ‘ಎಲ್ಲರ ಕನ್ನಡ’ವಾಗಿಸುವುದು ಹೇಗೆ?

ಹಾಗೆ ನೋಡಿದರೆ ಪ್ರಾದೇಶಿಕ ಸೊಗಡಿನ ಕನ್ನಡ ಆಯಾ ಪ್ರದೇಶಗಳ ಆಡುಮಾತಿನಲ್ಲಿ ತಾನಾಗಿ ಬೆಳೆಯುತ್ತಿದೆ. ಎರಡು ಪ್ರದೇಶಗಳ ಜನರು ಜೊತೆ ಸೇರಿದಾಗ ತಮ್ಮದೇ ಸಂಪರ್ಕ ಭಾಷೆಯೊಂದನ್ನು ಸಹಜ ರೀತಿಯಲ್ಲಿ ಹುಟ್ಟುಹಾಕುತ್ತಾರೆ. ಸಾಹಿತ್ಯದಲ್ಲಿಯೂ ಪ್ರಾದೇಶಿಕ ಸೊಗಡು ಚಂದಗಾಣಾಗಿ ಹರಡುತ್ತಿದೆ. ಹಾಗೆ ನೋಡಿದರೆ, ಸರಳಗನ್ನಡ, ಎಲ್ಲರ ಕನ್ನಡ ಬೇಕಾಗಿರುವುದು ಸಾಮಾನ್ಯ ಜನರು ಸಹಜವಾಗಿ ಮಾತನಾಡುವುದಕ್ಕೆ ಅಲ್ಲ. ನಾವು ಬರೆಯುವ, ಭಾಷಣ ಬಿಗಿಯುವ, ಶಾಲೆಗಳಲ್ಲಿ ಕಲಿಸುವ, ಕಲಿಯುವ, ಸಂವಹನದ ಭಾಷೆಗೆ, ಮಾಧ್ಯಮಗಳ ಭಾಷೆಗೆ, ಮುಖ್ಯವಾಗಿ, ಬರವಣಿಗೆಯ ಅಂದರೆ, ‘ಲಿಖಿತ’ ಭಾಷೆಗೆ, ಪಂಡಿತರ ‘ಸ್ವಯಂ ಘೋಷಿತ ಶಿಷ್ಟ ಭಾಷೆ’ಗೆ ಅದು ಬೇಕಾಗಿರುವುದು.

ಆದುದರಿಂದಲೇ, ಎಲ್ಲರಿಗೂ ಅರ್ಥವಾಗುವ, ಪ್ರಾದೇಶಿಕ ಸೊಗಡನ್ನು ಉಳಿಸಿಕೊಂಡ, ಸಂಸ್ಕೃತದ ನೊಗ ಇಳಿಸಿದ ಸರಳಗನ್ನಡವೊಂದು ಸಂವಹನಕ್ಕಾಗಿ ನಮಗೆ ಬೇಕಾಗಿದೆ. ಇದು ಸಹಜವಾಗಿ ಆಗಬೇಕೇ ಹೊರತು, ಕೇವಲ ಮಹಾಪ್ರಾಣಗಳನ್ನು ಬಿಡುವುದರಿಂದ, ಬರೆಯುವ ಶೈಲಿಯನ್ನೇ ಬದಲಿಸಿ, ಹಳೆಗನ್ನಡ ಪದಗಳನ್ನು ತುಂಬಿ ಹೊಸದೊಂದು ಅಪರಿಚಿತ ಭಾಷೆಯನ್ನು ರೂಪಿಸುವುದರ ಮೂಲಕ ಅಲ್ಲ. ಹೇರಿಕೆ, ಒತ್ತಾಯ, ಅಣಕದಿಂದಲೂ ಆಲ್ಲ! ಕನ್ನಡಿಗರು ಎಂದರೆ, ಸಾಮಾಜಿಕ ತಾಣಗಳನ್ನು ಬಳಸುವವರು ಮಾತ್ರವಲ್ಲ. ಇವುಗಳ ಹೊರಗೆ ಕೋಟ್ಯಂತರ ಕನ್ನಡಿಗರಿದ್ದಾರೆ. ಅವರನ್ನು ಮುಟ್ಟುವುದು ಹೇಗೆ? ಈ ಎಲ್ಲಾ ಆಯಾಮಗಳ ಕುರಿತು ಮುಂದಿನ ಚಿಂತನೆಗಳು ನಡೆಯಬೇಕು. ಇದು ಬಾಣಲೆ ನೀರಿನಲ್ಲಿ ನಡೆಯುವ ಚಂಡಮಾರುತವಾಗಲಿ, ಅಂಗೈ ಒಳಗಿನ ಕ್ರಾಂತಿಯಾಗಲಿ ಅಲ್ಲ. ಜನರಿಗೆ ಒಗ್ಗದಿದ್ದರೆ, ‘ಎಲ್ಲರ ಕನ್ನಡ’ ಯಾರಿಗೂ ಅರ್ಥವಾಗದ ಕನ್ನಡವಾದೀತು.

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News