ಪೊಲೀಸ್ ರಕ್ಷಣೆಯಲ್ಲಿ ದಲಿತ ಐಪಿಎಸ್ ಅಧಿಕಾರಿಯ ಮದುವೆ ಮೆರವಣಿಗೆ
ಜೈಪುರ: ದಲಿತ ಐಪಿಎಸ್ ಅಧಿಕಾರಿಯೊಬ್ಬರ ಮದುವೆಯ ಮೆರವಣಿಗೆಯನ್ನು ಜೈಪುರದಲ್ಲಿ ಶುಕ್ರವಾರ ಪೊಲೀಸ್ ರಕ್ಷಣೆಯೊಂದಿಗೆ ನಡೆಸಲಾಗಿದೆ. ಸವರ್ಣೀಯರು ದಲಿತರ ಇಂತಹ ಕಾರ್ಯಕ್ರಮಗಳಿಗೆ ವಿರೋಧ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ, ಯಾವುದೇ ತೊಂದರೆ ಉಂಟಾಗಬಾರದೆಂದು ಪೊಲೀಸ್ ರಕ್ಷಣೆ ನೀಡಲಾಗಿದೆ ಎಂದು ndtv.com ವರದಿ ಮಾಡಿದೆ.
2020 ರ ಬ್ಯಾಚ್ ಐಪಿಎಸ್ ಅಧಿಕಾರಿ ಸುನಿಲ್ ಕುಮಾರ್ ಧನ್ವಂತ ಅವರು ಮೆರವಣಿಗೆಯ ಸಲುವಾಗಿ ಕುದುರೆ ಸವಾರಿಯನ್ನು ಮಾಡಿದ್ದಾರೆ. ದಲಿತರು ತಮ್ಮ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದರೆ ಮೇಲ್ಜಾತಿಗೆ ಸೇರಿದವರು ಗಲಭೆ ಎಬ್ಬಿಸುವ ಆತಂಕ ಇತ್ತು ಎಂದು ಸ್ಥಳೀಯ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ರಕ್ಷಣೆ ನೀಡಲಾಗಿತ್ತು ಎಂದು ಕೋಟ್‌ಪುಟ್ಲಿ ಹೆಚ್ಚುವರಿ ಎಸ್‌ಪಿ ವಿದ್ಯಾಪ್ರಕಾಶ್ ತಿಳಿಸಿದ್ದಾರೆ.
ಸೂರಜ್‌ಪುರ ಗ್ರಾಮದಲ್ಲಿ ಮಂಗಳವಾರ ನಡೆದ ‘ಬಿಂದೌರಿ’ ಸಮಾರಂಭದ ಅಂಗವಾಗಿ ಐಪಿಎಸ್ ಅಧಿಕಾರಿ ಕುದುರೆ ಸವಾರಿ ಮಾಡುವಾಗಲೂ ಪೊಲೀಸ್ ಕಾವಲು ನೀಡಲಾಗಿತ್ತು.