ನಟ ದೀಪ್ ಸಿಧು ಸಾವಿಗೆ ಪ್ರಕರಣ: ಲಾರಿ ಚಾಲಕನ ಬಂಧನ
ಸೋನೆಪತ್ (ಹರ್ಯಾಣ),ಫೆ.18: ಮಂಗಳವಾರ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಸಾವಿಗೆ ಕಾರಣವಾಗಿದ್ದ ರಸ್ತೆ ಅಪಘಾತವನ್ನುಂಟು ಮಾಡಿದ್ದ ಆರೋಪಿ ಲಾರಿ ಚಾಲಕನನ್ನು ನುಹ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸರಕು ತುಂಬಿದ್ದ ಲಾರಿ ಕುಂಡ್ಲಿ-ಪನೇಸರ್-ಪಲ್ವಾಯಿ ಎಕ್ಸ್‌ಪ್ರೆಸ್‌ವೇದ ಮೊದಲ ಮತ್ತು ಎರಡನೇ ಲೇನ್‌ಗಳ ನಡುವೆ ಸಾಗುತ್ತಿದ್ದಾಗ ಪಿಪ್ಲಿ ಟೋಲ್ ಪ್ಲಾಝಾದ ಬಳಿ ಸಿಧು ಎಡಗಡೆಯಿಂದ ಅದನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಸಿಧು ಕಾರಿನ ವೇಗೆ ಪ್ರತಿಗಂಟೆಗೆ 100 ಕಿ.ಮೀ.ಗೂ ಅಧಿಕವಿದ್ದಿರಬಹುದು ಎಂದು ಬಲ್ಲ ಮೂಲಗಳು ತಿಳಿಸಿವೆ. ಮೇವಾತ್ ಜಿಲ್ಲೆಯ ನುಹ್‌ನ ಶಿಂಗಾರ್ ಗ್ರಾಮದ ನಿವಾಸಿ,ಲಾರಿ ಚಾಲಕ ಕಾಸಿಂ ಖಾನ್ ಅಪಘಾತದ ಬಳಿಕ ಸ್ಥಳದಿಂದ ಪರಾರಿಯಾಗಿದ್ದ. 22 ಚಕ್ರಗಳ ಲಾರಿ ಗುಜರಾತಿನ ಕಾಂಡ್ಲಾದಿಂದ ಉತ್ತರ ಪ್ರದೇಶದ ಮುಝಫ್ಫರ್‌ನಗರಕ್ಕೆ ಸಾಗುತ್ತಿತ್ತು ಎಂದು ಪೊಲೀಸರು ತಿಳಿಸಿದರು.
ಕಾಸಿಂನನ್ನು ಶುಕ್ರವಾರ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಪ್ರಾಥಮಿಕ ತನಿಖಾ ವರದಿಗಳ ಆಧಾರದಲ್ಲಿ ಪೊಲೀಸರು ಸಿಧು ಸಾವಿನ ಹಿಂದೆ ಯಾವುದೇ ಒಳಸಂಚಿನ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.