×
Ad

ಚುನಾವಣೆಗೆ ಮುನ್ನ ದೇರಾ ಮುಖ್ಯಸ್ಥನ ಬಿಡುಗಡೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

Update: 2022-02-19 00:32 IST

ಚಂಡಿಗಡ,ಫೆ.18: ತನ್ನ ಮ್ಯಾನೇಜರ್ ಹತ್ಯೆ,ಪತ್ರಕರ್ತನ ಹತ್ಯೆ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಮೂರು ಜೀವಾವಧಿ ಶಿಕ್ಷೆಗಳನ್ನು ಎದುರಿಸುತ್ತಿರುವ ದೇರಾ ಸಚ್ಚಾ ಸೌಧಾದ ಮುಖ್ಯಸ್ಥ ಗುರ್ಮಿತ್ ರಾಮ ರಹೀಮ್ ಸಿಂಗ್‌ನನ್ನು ಪಂಜಾಬ ವಿಧಾನಸಭಾ ಚುನಾವಣೆಗೆ ಮುನ್ನ ಪೆರೋಲ್‌ನಲ್ಲಿ ಬಿಡುಗಡೆಗೊಳಿಸಿರುವುದನ್ನು ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.

ಬಿಡುಗಡೆ ಆದೇಶವು ಅನಗತ್ಯ,ಕಾನೂನಬಾಹಿರ ಮತ್ತು ಅಸಮರ್ಥನೀಯವಾಗಿದೆ ಎಂದು ಹೇಳಿರುವ ಅರ್ಜಿದಾರರು,ಅದನ್ನು ತಡೆಹಿಡಿಯುವಂತೆ ಉಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ.

ಗುರ್ಮಿತ್ ಬಿಡುಗಡೆಯು ಚುನಾವಣೆಗಳ ಸಂದರ್ಭದಲ್ಲಿ ರಾಜ್ಯದಲ್ಲಿ ಶಾಂತಿಯನ್ನು ಕದಡುತ್ತದೆ ಮತ್ತು ಚುನಾವಣೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

 ದೇರಾದ,ವಿಶೇಷವಾಗಿ ಗುರ್ಮಿತ್ ಅನುಯಾಯಿಗಳು ಪಂಜಾಬಿನ ಮಾಲ್ವಾ ಪ್ರದೇಶದಲ್ಲಿ ಪ್ರಭಾವಿಗಳಾಗಿದ್ದು,ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅವರ ಮತಗಳು ನಿರ್ಣಾಯಕವಾಗಿರುತ್ತವೆ ಎಂದು ಪರಿಗಣಿಸಲಾಗಿದೆ. ಮಾಲ್ವಾ ಪ್ರದೇಶವು ಪಂಜಾಬ್ ವಿಧಾನಸಭೆಯ 117 ಸ್ಥಾನಗಳ ಪೈಕಿ ಅರ್ಧಕ್ಕೂ ಹೆಚ್ಚು,69 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.

ಫೆ.7ರಂದು ಗುರ್ಮಿತ್‌ಗೆ 21 ದಿನಗಳ ಪೆರೋಲ್ ಮಂಜೂರು ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News