ಕೇಜ್ರಿವಾಲ್ ವಿರುದ್ಧದ ಆರೋಪ ಬಗ್ಗೆ 'ಗಂಭೀರ ತನಿಖೆ': ಪಂಜಾಬ್ ಸಿಎಂಗೆ ಅಮಿತ್ ಶಾ ಭರವಸೆ
ಹೊಸದಿಲ್ಲಿ: ಪಂಜಾಬ್ ವಿಧಾನಸಭೆಗೆ ಮತದಾನ ನಡೆಯುವ ಎರಡು ದಿನ ಮೊದಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧದ ಆರೋಪದ ವಿಚಾರದಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ ಅವರಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಸಾಥ್ ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಪ್ರತ್ಯೇಕತಾವಾದಿಗಳ ಪರ ಎಂದು ಚನ್ನಿ ಮಾಡಿರುವ ಆರೋಪದ ಬಗ್ಗೆ "ಗಂಭೀರ ತನಿಖೆ" ನಡೆಸುವುದಾಗಿ ಅಮಿತ್ ಶಾ ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ ಮಾಜಿ ಮುಖಂಡ, ಕವಿ ಕುಮಾರ್ ವಿಶ್ವಾಸ್, ಕೇಜ್ರಿವಾಲ್ ವಿರುದ್ಧ ಮೊದಲು ಈ ಆರೋಪ ಮಾಡಿದ್ದರು.
ಬದ್ಧ ರಾಜಕೀಯ ವಿರೋಧಿಗಳ ನಡುವಿನ ಈ ಸ್ನೇಹಪರತೆಯನ್ನು ’ದೊಡ್ಡ ಕಾಮಿಡಿ’ ಎಂದು ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಬಣ್ಣಿಸಿದ್ದಾರೆ.
"ಕೇಂದ್ರ ಸರ್ಕಾರ ಚನ್ನಿ ಅವರನ್ನು ಕರೆಸಿಕೊಂಡು ನಿನ್ನೆ ಸಂಜೆ ಪತ್ರ ಬರೆಯುವಂತೆ ಮತ್ತು ತನಿಖೆಗೆ ಆಗ್ರಹಿಸುವಂತೆ ಕೇಳಿಕೊಂಡಿತ್ತು. ಮುಂದಿನ ಎರಡು ದಿನಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಿದೆ" ಎಂದು ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.
"ಎಲ್ಲ ಎಫ್‌ಐಆರ್‌ಗಳನ್ನು ನಾನು ಸ್ವಾಗತಿಸುತ್ತೇನೆ. ಆದರೆ ದೇಶದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಹೇಗೆ ವ್ಯವಹರಿಸುತ್ತದೆ ಎನ್ನುವುದಕ್ಕೆ ಇದು ನಿದರ್ಶನ... ಅದನ್ನು ಎಣಿಸಿದಾಗ ನನಗೆ ಭಯವಾಗುತ್ತಿದೆ.. ದೇಶದ ಭದ್ರತೆಯನ್ನು ಅವರು ಹಾಸ್ಯ ಪ್ರಹಸನವಾಗಿಸಿದ್ದಾರೆ. ಹಲವು ಬಾರಿ ನನ್ನ ವಿರುದ್ಧ ದಾಳಿಗಳು ನಡೆದರೂ ಯಾವ ಏಜೆನ್ಸಿಗೂ ಏನೂ ಸಿಕ್ಕಿಲ್ಲ. ಒಬ್ಬ ಕವಿ ಒಂದು ಕವನ ಓದಿದ ಬಳಿಕ ನಾನು ಎಷ್ಟು ದೊಡ್ಡ ಅಪಾಯ ಎನ್ನುವುದು ಪ್ರಧಾನಿಗೆ ಮನವರಿಕೆಯಾಗಿದೆ" ಎಂದು ಲೇವಡಿ ಮಾಡಿದರು.