​ಯುಎಇ ಜತೆ ಭಾರತ ಐತಿಹಾಸಿಕ ಒಪ್ಪಂದ

Update: 2022-02-19 03:45 GMT
(ಫೋಟೊ: Twitter/@PiyushGoyal)

ಹೊಸದಿಲ್ಲಿ: ಭಾರತ ಯುಎಇ ಜತೆ ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಶುಕ್ರವಾರ ಸಹಿ ಮಾಡಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆ ವೇಳೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಮಾಡಿಕೊಳ್ಳಲಾಗಿದೆ. ಕೇವಲ ಮೂರು ತಿಂಗಳ ದಾಖಲೆ ಅವಧಿಯಲ್ಲಿ ಈ ಒಪ್ಪಂದ ಮಾತುಕತೆಗಳನ್ನು ಪೂರ್ಣಗೊಳಿಸಲಾಗಿದೆ. ಇದು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳ ಸೂಚಕವಾಗಿದ್ದು, ರಕ್ಷಣೆ, ವಿದ್ಯುತ್ ಮತ್ತು ಹವಾಮಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಗಮನ ಹರಿಸಲಾಗಿದೆ.

ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರ್‌ಗೆ ಹೆಚ್ಚಿಸಲು ವಿಷನ್ ಸ್ಟೇಟ್‌ಮೆಂಟ್ ಉದ್ದೇಶಿಸಿದೆ. ಇದು ವಿದ್ಯುತ್ ವರ್ಗಾವಣೆ ಮತ್ತು ಕಡಿಮೆ ಇಂಗಾಲದ ಭವಿಷ್ಯದ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದು ಸೇರಿದೆ. ತಂತ್ರಜ್ಞಾನಕ್ಕೆ ಒತ್ತು ನೀಡಲು ಜಂಟಿ ಹೈಡ್ರೋಜನ್ ಟಾಸ್ಕ್ ಫೋರ್ಸ್ ರಚಿಸುವುದು ಮತ್ತು ಯುಎಇನಲ್ಲಿ ಐಐಟಿ ಸ್ಥಾಪನೆ ಇದರ ಪ್ರಮುಖ ಅಂಶಗಳಾಗಿವೆ.

ಈ ಒಪ್ಪಂದವು ಭಾರತದಿಂದ ಎಮಿರೇಟ್ಸ್‌ಗೆ ರಫ್ತಾಗುವ ಬಹುತೇಕ ಸರಕುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ನೆರವಾಗಲಿದೆ. ಜತೆಗೆ ವಿಸ್ತತವಾದ ಅರಬ್ ಹಾಗೂ ಆಫ್ರಿಕನ್ ಮಾರುಕಟ್ಟೆ ಭಾರತೀಯ ರಫ್ತುದಾರರಿಗೆ ಲಭ್ಯವಾಗುವಂತೆ ಮಾಡಲಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್ ಅವರು ಯುಎಇ ಆರ್ಥಿಕತೆ ಸಚಿವ ಅಬ್ದುಲ್ಲಾ ಬಿನ್ ತೌಖ್ ಅಲ್ ಮರ್ರಿ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಥನಿ ಬಿನ್ ಅಹ್ಮದ್ ಅಲ್ ಝೆಯೋದಿ ನೇತೃತ್ವದ ನಿಯೋಗದ ಜತೆ ಮಾತುಕತೆ ನಡೆಸಿದ ಬಳಿಕ ಒಪ್ಪಮದಕ್ಕೆ ಸಹಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News