ಶಿವಾಜಿ ಬಗ್ಗೆ ನಿಮಗೆಷ್ಟು ಗೊತ್ತಿದೆ?
ದಲಿತರು ಮತ್ತು ಮುಸ್ಲಿಮರು ಒಂದಾಗಿ ಶಿವಾಜಿಯ ನೇತೃತ್ವದಲ್ಲಿ ದಿಲ್ಲಿಯ ಮೊಗಲರನ್ನು ಎದುರಿಸಿ ಗೆದ್ದರು. ಮೊಗಲರನ್ನು ಎದುರಿಸುವ ವೇಳೆ ಶಿವಾಜಿ ಮತ್ತು ಆತನ ಸೇನೆಯನ್ನು ವಂಚಿಸಿದವರು ಯಾರು? ಉತ್ತರ ಕೆಳಗಿದೆ.
► ಶಿವಾಜಿ ಮರಾಠ ಮೇಲ್‌ಜಾತಿಯಿಂದ ಬಂದವನಲ್ಲ. ಭೋಸಲೆ ಎನ್ನುವ ಕೆಳ ಜಾತಿಗೆ ಸೇರಿದ ನಾಯಕ. ಆದುದರಿಂದಲೇ ಮೇಲ್‌ಜಾತಿಯ ಜನರಿಗೆ ಶಿವಾಜಿಯ ಮೇಲೆ ಅಸಮಾಧಾನವಿತ್ತು.
► ಶಿವಾಜಿ ಮತ್ತು ಅಫ್ಝಲ್‌ಖಾನ್ ಭೇಟಿಯಾಗುವ ಸಂದರ್ಭದಲ್ಲಿ ಶಿವಾಜಿಯ ನಂಬಿಕಸ್ಥ ಅಂಗರಕ್ಷಕರಲ್ಲಿ ಓರ್ವನ ಹೆಸರು ಇಬ್ರಾಹೀಂ ಖಾನ್. ಇನ್ನೋರ್ವ ದಲಿತ ಸೇನಾನಿ ಜೀವಾ ಮಹಾರ್. ಅಫ್ಝಲ್ ಖಾನ್‌ನ ಅಂಗರಕ್ಷಕನ ಹೆಸರು ಕೃಷ್ಣಜೀ ಭಾಸ್ಕರ್ ಕುಲಕರ್ಣಿ. ಕುಲಕರ್ಣಿ ಹಿಂದುಗಡೆಯಿಂದ ಶಿವಾಜಿಯ ಮೇಲೆ ದಾಳಿ ನಡೆಸಿದಾಗ ಕುಲಕರ್ಣಿಯನ್ನು ಕೊಂದಿರುವುದು ಜೀವಾ ಮಹಾರ್ ಎನ್ನುವ ದಲಿತ ಅಂಗರಕ್ಷಕ. ಇದನ್ನೇ ಮುಂದಿಟ್ಟು ಸಂತ ತುಕಾರಾಮರು ತಮ್ಮ ಹಾಡಿನಲ್ಲಿ ಕೇಳುತ್ತಾರೆ ‘‘ಜೀವಾಜಿ ಇದ್ದುದಕ್ಕೆ ಶಿವಾಜಿ ಬದುಕಿದ’’
► ಇಬ್ರಾಹೀಂ ಖಾನ್, ದೌಲತ್ ಖಾನ್, ಸಿದ್ದಿ ವಾಹ್‌ವಾಹ್, ದಾರ್ಯ ಸಾರಂಗ್ ಮೊದಲಾದ ಮುಸ್ಲಿಮ್ ಸೇನಾನಿಗಳು ಶಿವಾಜಿಯ ದಂಡನಾಯಕರಾಗಿದ್ದರೆ, ಶಿವಾಜಿಯ ವಿರುದ್ಧ ಮೊಗಲರ ಸೇನೆಯ ದಂಡನಾಯಕನ ಹೆಸರು ರಾಜ ಜಯಸಿಂಹ. ಈತ ರಜಪೂತ ಹಿಂದೂ ಆಗಿದ್ದ.
► ಮೊಗಲರ ಪರವಾಗಿ ಸೇನೆಯಲ್ಲಿ ಮರಾಠರು, ಜಾಟರು, ರಜಪೂತರು ಇದ್ದರು. ರಾಜ ರಾಯ ಸಿಂಗ್, ಸುಜನ್ ಸಿಂಗ್, ಹರಿಬಾನ್ ಸಿಂಗ್, ಉದಯಬಾನ್ ಗೌರ, ಶೇರ್ ಸಿಂಹ್ ರಾಥೋಡ್, ಚತುರ್ಭುಜ ಚೌಹಾನ್, ಮಿತ್ರಸೇನ, ಬಾಜಿರಾವ್ ಚಂದ್ರರಾವ್ ಇವರೆಲ್ಲ ಮೊಗಲರ ಸೇನಾನಿಗಳು. ಶಿವಾಜಿಯ ವಿರುದ್ಧ ಯುದ್ಧ ಮಾಡಿದರು.
ಇದೇ ಸಂದರ್ಭದಲ್ಲಿ ದಲಿತರು ಮತ್ತು ಮುಸ್ಲಿಮ್ ದಂಡ ನಾಯಕರು ಶಿವಾಜಿಯ ಪರ ನಿಂತು ಮೊಗಲರ ವಿರುದ್ಧ ಹೋರಾಡಿದರು.
► ರಾಜಾ ಜಯಸಿಂಹ ನೇತೃತ್ವದಲ್ಲಿ ಮೊಗಲರ ಪಡೆ ಶಿವಾಜಿಯ ಮೇಲೆ ಯುದ್ಧ ಹೇರಿದಾಗ, ಮೊಗಲರ ಗೆಲುವಿಗಾಗಿ, ಶಿವಾಜಿಯ ಸೋಲಿಗಾಗಿ ಬ್ರಾಹ್ಮಣರು ಕೋಟಿ ಚಂಡಿ ಹವನ ಮಾಡಿದರು. ಕಾಮನಾರ್ಥಕ್ಕಾಗಿ ಬಗಲಾಮುಖಿ ಕಾಳರಾತ್ರಿ ಪ್ರೀತ್ಯರ್ಥ ಜಪ ಮಾಡಲಾಯಿತು. ನಾನೂರು ಬ್ರಾಹ್ಮಣರು ಇದರಲ್ಲಿ ಭಾಗವಹಿಸಿದರು. ಮೂರು ತಿಂಗಳ ಕಾಲ ಈ ಅನುಷ್ಠಾನ ನಡೆಯಿತು. ಶಿವಾಜಿಯ ಸೋಲಿಗಾಗಿ ಬ್ರಾಹ್ಮಣರಿಗೆ ಭಾರೀ ದಕ್ಷಿಣೆಯನ್ನು ರಾಜಾ ಜಯಸಿಂಹ ನೀಡಿದ. ಇದೇ ಯುದ್ಧದಲ್ಲಿ ಶಿವಾಜಿ ಮತ್ತು ಅವನ ಮಗ ಸಾಂಭಾಜಿ ಮೊಗಲರಿಗೆ ಸೆರೆ ಸಿಕ್ಕರು.
► ಶಿವಾಜಿ ರಾಜನಾಗಿ ಆಳ್ವಿಕೆ ಮಾಡಿದ್ದು ಕೇವಲ ಐದು ವರ್ಷ ಮಾತ್ರ. ಶಿವಾಜಿಗೆ ಪಟ್ಟಾಭಿಷೇಕ ಮಾಡಲು ಬ್ರಾಹ್ಮಣರು ಒಪ್ಪಲಿಲ್ಲ. ಆದುದರಿಂದ ಕಾಶಿಯಿಂದ ಗಾಗಾಭಟ್ಟ ಎಂಬವನನ್ನು ಕರೆಸಿಕೊಳ್ಳಬೇಕಾಯಿತು. ಶಿವಾಜಿ ಕೆಳಜಾತಿಯಾಗಿರುವುದರಿಂದ ಈತ ಶಿವಾಜಿಯನ್ನು ವೈದಿಕ ಪದ್ಧತಿಯಂತೆ ಶುದ್ಧೀಕರಿಸುತ್ತಾನೆ. ಉಪನಯನ ಮಾಡುತ್ತಾನೆ. ಆತನಿಗೆ ಮರುಮದುವೆ ಮಾಡುತ್ತಾನೆ. ಆ ಬಳಿಕ ಶಿವಾಜಿಗೆ ಪಟ್ಟಾಭಿಷೇಕ ಮಾಡುತ್ತಾನೆ. ಗಾಗಾಭಟ್ಟನಿಗೆ ನೀಡಿದ ದಕ್ಷಿಣೆಯನ್ನು ಹೊರಲು ಹಲವು ಗಾಡಿಗಳೇ ಬೇಕಾಯಿತಂತೆ. ಪಟ್ಟಾಭಿಷೇಕ ಸಂದರ್ಭದಲ್ಲಿ ಗಾಗಾ ಭಟ್ಟ ಶಿವಾಜಿಗೆ ತನ್ನ ಎಡ ಕಾಲಿನ ಹೆಬ್ಬೆಟ್ಟಿನಲ್ಲಿ ತಿಲಕ ಇಟ್ಟ ಎಂದು ಭಾಪುಲೆ ತಮ್ಮ ಕೃತಿಯಲ್ಲಿ ಹೇಳುತ್ತಾರೆ. * ಇಷ್ಟಾದರೂ ಶಿವಾಜಿಯ ಪಟ್ಟಾಭಿಷೇಕ ಯಶಸ್ವಿಯಾಗಲಿಲ್ಲ. ಪಟ್ಟಾಭಿಷೇಕದ ಬಗ್ಗೆ ಮತ್ತೆ ಆಕ್ಷೇಪ ವ್ಯಕ್ತವಾಯಿತು. ಮತ್ತೆ ಮೂರೇ ತಿಂಗಳಲ್ಲಿ ಹೊಸದಾಗಿ ಮಗದೊಮ್ಮೆ ಆತನಿಗೆ ಪಟ್ಟಾಭಿಷೇಕ ಮಾಡಲಾಯಿತು.
► ಕೆಳ ಜಾತಿ ಎನ್ನುವ ಕಾರಣಕ್ಕೆ ಶಿವಾಜಿ ರಾಜನಾಗಿಯೂ ಪದೇ ಪದೇ ಅವಮಾನವನ್ನು ಎದುರಿಸಿದ. ರೈತನ ಮಗಳನ್ನು ಬಲಾತ್ಕಾರ ಮಾಡಿದನೆಂಬ ಕಾರಣಕ್ಕೆ ರಾಂಝ್ಯದ ಪಾಟೀಲನೊಬ್ಬನನ್ನು ಹೆಡೆಮುರಿ ಕಟ್ಟಿ ಶಿವಾಜಿಯ ಮುಂದೆ ತರಲಾಯಿತು. ಶಿವಾಜಿ ಪಾಟೀಲನಿಗೆ ಶಿಕ್ಷೆಯನ್ನು ಆದೇಶಿಸಿದ. ಆಗ ಪಾಟೀಲ, ಸಭೆಯಲ್ಲಿ ಹಾಜರಿದ್ದ ದಾದಾಜಿ ಕೊಂಡದೇವನಿಗೆ ‘‘ಪಂತ ಕುಲೀನ ಮನೆತನದವರು ನ್ಯಾಯ ನೀಡಲಿ’’ ಎಂದು ಶಿವಾಜಿಯನ್ನು ನಿಂದಿಸಿದ. ಮರಾಠಾ ಸರದಾರರಿಗೂ ಶಿವಾಜಿಯನ್ನು ರಾಜನೆಂದು ಒಪ್ಪಿಕೊಳ್ಳಲು ಮುಜುಗರವಿತ್ತು. ಆದರೆ ಶಿವಾಜಿಯ ಬೆನ್ನ ಹಿಂದೆ ನಿಂತಿರುವ ದಲಿತರು ಮತ್ತು ಮುಸ್ಲಿಮರ ಸೇನೆಯ ಕುರಿತಂತೆ ಅವರಿಗೆ ಭಯವಿತ್ತು. ಈ ಕಾರಣದಿಂದಲೇ ಶಿವಾಜಿ ತನ್ನೆಲ್ಲ ನಂಬಿಕೆಗೆ ಅರ್ಹವಾಗಿರುವ ಪ್ರಮುಖ ದಂಡನಾಯಕ ಸ್ಥಾನಗಳನ್ನು ಮುಸ್ಲಿಮರಿಗೆ ನೀಡಿದ್ದ.
► ಶಿವಾಜಿಯ ಮಗ ಸಂಭಾಜಿ ಪೇಶ್ವೆಯರ (ಇವರು ಚಿತ್ಪಾವನ ಸಮುದಾಯಕ್ಕೆ ಸೇರಿದವರು) ಸಂಚಿನಿಂದ ಮೊಗಲರಿಗೆ ಸೆರೆ ಸಿಕ್ಕ. ಅವನನ್ನು ಮೊಗಲರು ಕೊಂದು ಎಸೆದಾಗ ಶಿವಾಜಿಯ ಮಂತ್ರಿಗಳಾಗಿರುವ ಪೇಶ್ವೆಗಳು ಶವ ಸಂಸ್ಕಾರವನ್ನೂ ಮಾಡಲಿಲ್ಲ. ಸಂಭಾಜಿಯ ಅಂತಿಮ ಸಂಸ್ಕಾರವನ್ನು ಗೋವಿಂದ್ ಗೋಪಾಲ್ ಎಂಬ ಮಹಾರ್ ದಲಿತನೊಬ್ಬ ಮಾಡಿದ. ಸಂಭಾಜಿಯ ಗೋರಿಯ ಪಕ್ಕದಲ್ಲೇ ಬಳಿಕ ಆ ದಲಿತ ಮಹಾರನ ಅಂತ್ಯ ಸಂಸ್ಕಾರವನ್ನು ಮಾಡಲಾಯಿತು. ಈ ದಲಿತನ ಗೋರಿಯನ್ನು ಸಂಘ ಪರಿವಾರ ಧ್ವಂಸ ಮಾಡಿದ ಕಾರಣಕ್ಕೆ ಕೆಲವು ವರ್ಷಗಳ ಹಿಂದೆ ಕೋರೆಗಾಂವ್‌ನಲ್ಲಿ ಹಿಂಸೆ ಭುಗಿಲೆದ್ದಿತು.
► ಶಿವಾಜಿಯ ಆನಂತರ ಆತನ ವಂಶಸ್ಥರಿಂದ ಅಧಿಕಾರವನ್ನು ವಶಪಡಿಸಿಕೊಳ್ಳುವಲ್ಲಿ, ಶಿವಾಜಿಯ ಮಂತ್ರಿಗಳಾಗಿದ್ದ ಪೇಶ್ವೆಗಳು ಅಂದರೆ ಚಿತ್ಪಾವನ ಬ್ರಾಹ್ಮಣರು ಯಶಸ್ವಿಯಾದರು. ಪೇಶ್ವೆಗಳ ಕಾಲದಲ್ಲಿ ಜಾತೀಯತೆ ಮುಗಿಲು ಮುಟ್ಟಿತು. ಪೇಶ್ವೆ ಎರಡನೇ ಬಾಜೀರಾಯನ ಕಾಲದಲ್ಲಿ ಸೇನಾ ಪಡೆಯಲ್ಲಿದ್ದ ದಲಿತರು ಬಂಡೆದ್ದು ಬ್ರಿಟಿಷರ ಜೊತೆ ಸೇರಿ ಪೇಶ್ವೆಗಳ ಸಾಮ್ರಾಜ್ಯದ ಅವಸಾನಕ್ಕೆ ಕಾರಣವಾದರು. ಶಿವಾಜಿಯು ದಲಿತರು ಮತ್ತು ಮುಸ್ಲಿಮರನ್ನು ಜೊತೆಯಲ್ಲಿಟ್ಟುಕೊಂಡು ಸಾಮ್ರಾಜ್ಯ ಕಟ್ಟಿದ. ಪೇಶ್ವೆಗಳು ತಮ್ಮ ಜಾತೀಯತೆಯ ಕಾರಣದಿಂದ ದಲಿತರನ್ನು ಹೊರಗಿಟ್ಟು ಅಂತಿಮವಾಗಿ ಸಾಮ್ರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಿದರು.
► ಇತಿಹಾಸ ಪುನರಾವರ್ತನೆ ಆಯಿತು. ಮುಂದೆ ಇದೇ ಚಿತ್ಪಾವನ ಸಮುದಾಯದಿಂದ ಗೋಡ್ಸೆ ಹುಟ್ಟಿದ. ಶಿವಾಜಿ ಭರವಸೆ ಇಟ್ಟ ಮಹಾರ್ ದಲಿತರ ಸಮುದಾಯದಿಂದ ಅಂಬೇಡ್ಕರ್ ಹುಟ್ಟಿದರು.
► ಶಿವಾಜಿ ಮಹಾರಾಜರ ಸಮಾಧಿ ಸ್ಥಳವನ್ನು 300 ವರ್ಷಗಳ ಬಳಿಕ ಗುರುತಿಸಿದ್ದು ಮಹಾತ್ಮಾ ಜ್ಯೋತಿಬಾ ಫುಲೆಯವರು.ಮೊತ್ತ ಮೊದಲ ಬಾರಿಗೆ ಶಿವಾಜಿ ಮಹಾರಾಜರ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಿದವರು ಜ್ಯೋತಿಬಾ ಫುಲೆಯವರು. ಇದು ಇತಿಹಾಸದಲ್ಲಿ ಕೂಡ ದಾಖಲಾಗಿದೆ. ಶಿವಾಜಿಯನ್ನು ಶೂದ್ರ ಸಮುದಾಯದ, ಕೃಷಿಕ ಸಮುದಾಯದ ಅರಸ ಎಂದು ಗುರುತಿಸಿದವರೂ ಜ್ಯೋತಿಬಾ ಫುಲೆ.
► 20,000 ಪೇಶ್ವೆ ಸೈನಿಕರ ವಿರುದ್ಧ ಬರಿಯ 500 ಮಂದಿ ದಲಿತರು ಯುದ್ಧ ಗೈದು ವಿಜಯಶಾಲಿಯಾದ ಗಳಿಗೆಯ ಸ್ಮಾರಕ ‘ಕೋರೆಂಗಾವ್ ವಿಜಯ ಸ್ತಂಭ’. ಈ ವಿಜಯ ದಿವಸವನ್ನು ಆಚರಿಸಲು ನಾಂದಿ ಹಾಡಿದ್ದು ಅಂಬೇಡ್ಕರ್.
► ಅಂದ ಹಾಗೆ ಶಿವಾಜಿಯ ಕುರಿತ ಮಾಹಿತಿಯುಳ್ಳ, ‘ದಗಲಬಾಜಿ ಶಿವಾಜಿ’ ಕೃತಿಯನ್ನು ಬರೆದಿರುವುದು ಪ್ರಬೋಧಾಂಕರ್ ಠಾಕ್ರೆ. ಇವರು ಬಾಳಠಾಕ್ರೆಯ ತಂದೆ.
........................
ಆಕರ ಗ್ರಂಥ: ಸರ್ಕಾರ್ ಜೆ.ಎನ್.ಶಿವಾಜಿ ಎಂಡ್ ಹಿಸ್ ಟೈಮ್ಸ್
ಗ್ರಾಂಡ್ ಡಫ್-ಹಿಸ್ಟರಿ ಆಫ್ ಮರಾಠಾಸ್
ಭಾವರೆ ಎನ್. ಜಿ: ಕಾಸ್ಟ್ಸ್ ಫೇವರ್ಸ್, ಪ್ಯಾಟರ್ನೇಜ್ ಆ್ಯಂಡ್ ಪ್ರಿವಿಲೇಜಸ್ ಅಂಡರ್ ಶಿವಾಜಿಸ್ ರೂಲ್ ಶಕಕರ್ತಾ ಶಿವಾಜಿ
ಗೋವಿಂದ ಪನ್ಸಾರೆ ‘‘ಶಿವಾಜಿ ಯಾರು?’’
ಸುಧಾಕರ ಖಾಂಬೆ: ಭೀಮಾ ಕೋರೆಗಾಂವಾಚಾ ವಿಜಯಸ್ತಂಭ
ಶಿವಾಜಿ ಮಹಾರಾಜರ ಎಂಟು ಜನ ರಾಣಿಯರು
1)ಸಯೀ ಬಾಯಿ
2)ಸೋಯಿರಾಬಾಯಿ
3)ಸುಗುಣಬಾಯಿ
4)ಸರವಾರಬಾಯಿ
5)ಕಾಶೀಬಾಯಿ
6)ಗುಣವಂತಾಬಾಯಿ
7)ಲಕ್ಷ್ಮೀಬಾಯಿ
8)ಪುತಳಾಬಾಯಿ