ವಿಚಾರಣೆಯ ವಿಷಯವನ್ನು ಮೀರಿ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತಪಡಿಸದಂತೆ ಹೈಕೋರ್ಟ್ ಗಳಿಗೆ ಸುಪ್ರೀಂ ಸೂಚನೆ

Update: 2022-02-19 08:39 GMT

ಹೊಸದಿಲ್ಲಿ,ಫೆ.18: ತಮ್ಮ ಮುಂದಿರುವ ವಿಷಯದ ವ್ಯಾಪ್ತಿಯನ್ನು ಮೀರಿ ಸಾರ್ವತ್ರಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನಿವಾರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯಗಳಿಗೆ ಸೂಚಿಸಿದೆ ಎಂದು Live Law ವರದಿ ಮಾಡಿದೆ.

ಜ.19ರ ದಿಲ್ಲಿ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಕೇಂದ್ರವು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಈ ನಿರ್ದೇಶವನ್ನು ನೀಡಿದೆ. ಟೆಂಡರ್ಗಳನ್ನು ಅಂಗೀಕರಿಸುವ ಕೇಂದ್ರದ ಪ್ರಕ್ರಿಯೆಯಲ್ಲಿ ತಾರತಮ್ಯವನ್ನು ಆರೋಪಿಸಿ ಭಾರತ ಫ್ರಿಝ್ ವರ್ನರ್ ಲಿ. ಸಲ್ಲಿಸಿದ್ದ ಅರ್ಜಿಯನ್ನು ಉಚ್ಚ ನ್ಯಾಯಾಲಯವು ವಿಚಾರಣೆ ನಡೆಸಿತ್ತು.

ಉಚ್ಚ ನ್ಯಾಯಾಲಯವು ಕೆಲವು ಬಿಡ್ಗಳ ತಪ್ಪು ಮೌಲ್ಯಮಾಪನ ಮತ್ತು ಕೆಲವು ಬಿಡ್ಡರ್ಗಳಿಗೆ ತಾರತಮ್ಯ ಕುರಿತು ಪ್ರಧಾನಿಗಳಿಗೆ ಅಹವಾಲು ಸಲ್ಲಿಸಲು ಕಂಪನಿಗೆ ಅವಕಾಶವನ್ನು ನೀಡಿತ್ತು.

‘ಭಾರತ ಸರಕಾರವು ‘ಮೇಕ್ ಇನ್ ಇಂಡಿಯಾ’ಕ್ಕೆ ಒತ್ತು ನೀಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು,ಅರ್ಜಿದಾರರ ದೂರು ಸರಿಯಾಗಿರುವಂತೆ ಕಂಡು ಬರುತ್ತಿದೆ ಮತ್ತು ನಮ್ಮ ಅಭಿಪ್ರಾಯದಲ್ಲಿ ಉನ್ನತ ಮಟ್ಟದಲ್ಲಿ ಗಂಭೀರ ಪರಿಗಣನೆಯ ಅಗತ್ಯವಿದೆ ’ ಎಂದು ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿತ್ತು.

 ಗುರುವಾರ ಮೇಲ್ಮನವಿಯ ವಿಚಾರಣೆ ಸಂದರ್ಭ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಬಿ.ವಿ.ನಾಗರತ್ನಾ ಅವರ ಪೀಠವು, ಉಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರಲಿಲ್ಲ ಅಥವಾ ಅರ್ಹತೆಯ ಮೇಲೆ ಪ್ರಕರಣವನ್ನು ಪರಿಶೀಲಿಸುತ್ತಿರಲಿಲ್ಲ. ಒಂದು ಪ್ರಕರಣವನ್ನು ಆಧರಿಸಿ ‘ಭಾರತೀಯ ಬಿಡ್ಡರ್ಗಳಿಗೆ ತಾರತಮ್ಯವನ್ನು ಎಸಗಲಾಗುತ್ತಿದೆ’ ಎಂಬ ಸಾರ್ವತ್ರಿಕ ಅಭಿಪ್ರಾಯವನ್ನು ಉಚ್ಚ ನ್ಯಾಯಾಲಯವು ವ್ಯಕ್ತಪಡಿಸಬಾರದಿತ್ತು. ಇಂತಹ ಸಂದರ್ಭಗಳಲ್ಲಿ ಉಚ್ಚ ನ್ಯಾಯಾಲಯಗಳು ಇಂತಹ ಸಾರ್ವತ್ರಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಿಂದ ದೂರವಿರಬೇಕು ಮತ್ತು ಅವು ತಮ್ಮೆದುರು ಇರುವ ಕಕ್ಷಿದಾರರ ನಡುವಿನ ವಿವಾದಕ್ಕೆ ಮಾತ್ರ ಸೀಮಿತವಾಗಿರಬೇಕು. ಪ್ರಕರಣದಲ್ಲಿ ಅನಗತ್ಯವಾದ ಸಾರ್ವತ್ರಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸದಂತೆ ನಾವು ಉಚ್ಚ ನ್ಯಾಯಾಲಯಗಳಿಗೆ ಸಲಹೆ ನೀಡುತ್ತೇವೆ ಎಂದು ಹೇಳಿತು.

ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ಅನುಮತಿಸಿತಾದರೂ ಅದಕ್ಕೂ ಮುನ್ನ ತಾರತಮ್ಯದ ಟೀಕೆಗಳನ್ನು ತೆಗೆದುಹಾಕಿತು.

ಇದನ್ನೂ ಓದಿ: ಕಾಂಗ್ರೆಸ್ ನದ್ದು ಊರಿಗೆ ಮನುಷ್ಯನಲ್ಲ, ಸ್ಮಶಾನಕ್ಕೆ ಹೆಣವೂ ಅಲ್ಲ ಎಂಬ ಸ್ಥಿತಿ - ಸಚಿವ ಅಶೋಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News