×
Ad

ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಭೀತಿ: 25,000 ಕೋಳಿಗಳನ್ನು ಕೊಲ್ಲಲು ಆದೇಶ

Update: 2022-02-19 14:22 IST

ಮುಂಬೈ: ಮಹಾರಾಷ್ಟ್ರದಾದ್ಯಂತ ಹಕ್ಕಿಜ್ವರದ ಭೀತಿ ಎದುರಾಗಿದೆ. ಥಾಣೆ ಜಿಲ್ಲೆಯಲ್ಲಿ ೨೫,೦೦೦ ಕೋಳಿಗಳನ್ನು ಕೊಲ್ಲಲು ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದು, ನಾಗರಿಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾಗಿ ndtv.com ವರದಿ ಮಾಡಿದೆ.

ಇತ್ತೀಚೆಗೆ ತಹಸೀಲ್‌ ನ ವೆಹ್ಲೋಳಿ ಗ್ರಾಮದ ಕೋಳಿ ಫಾರಂನಲ್ಲಿ ಸುಮಾರು ೧೦೦ ಕೋಳಿಗಳು ಸಾವನ್ನಪ್ಪಿದ್ದ ಬಳಿಕ ಶಹಾಪುರದಲ್ಲಿ ಹಕ್ಕಿಜ್ವರ ಭೀತಿ ಪ್ರಾರಂಭವಾಗಿತ್ತು. ಸತ್ತ ಕೋಳಿಗಳಿಂದ ಸಂಗ್ರಹಿಸಿದ್ದ ಮಾದರಿಗಳನ್ನು ಪರೀಕ್ಷೆಗೆಂದು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಈ ವೇಳೆ ಇದು ಎಚ್5ಎನ್1 ಏವಿಯನ್ ಇನ್ಫ್ಲುಯೆನ್ಸದಿಂದ ಸಾವನ್ನಪ್ಪಿವೆ ಎಂದು ತಿಳಿದು ಬಂದಿದ್ದಾಗಿ ಥಾಣೆ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ.ಭೌಸಾಹೇಬ್ ಡಾಂಗ್ಡೆ ಈ ಹಿಂದೆ ತಿಳಿಸಿದ್ದರು.

ಶಹಾಪುರ ಗ್ರಾಮದಲ್ಲಿ ಬಹುತೇಕರಿಗೆ ಕೋಳಿ ಸಾಕಣೆಯೇ ಜೀವನಾಧಾರವಾಗಿದೆ. 1 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಬ್ರಾಯ್ಲರ್ ಕೋಳಿಗಳನ್ನು ಕೊಲ್ಲಲು ಅಧಿಕಾರಿಗಳು ಈಗ ಆದೇಶ ನೀಡಿದ್ದಾರೆ.

ಥಾಣೆ ಜಿಲ್ಲಾಧಿಕಾರಿ ರಾಜೇಶ್ ನಾರ್ವೇಕರ್ ಅವರು 25,000 ಕ್ಕೂ ಹೆಚ್ಚು ಬ್ರಾಯ್ಲರ್ ಪಕ್ಷಿಗಳನ್ನು ಕೊಲ್ಲಲು ಇಂದು ಆದೇಶಿಸಿದ್ದಾರೆ. ಶಹಾಪುರದಿಂದ ವರದಿಯಾಗಿರುವ ಹಕ್ಕಿಜ್ವರ ಪ್ರಕರಣವನ್ನು ಹೊರತುಪಡಿಸಿ ಜಿಲ್ಲೆಯ ಯಾವುದೇ ಭಾಗದಲ್ಲಿ ಪ್ರಕರಣಗಳು ಪತ್ತೆಯಾಗಿಲ್ಲ, ಜನರು ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News