ಹಿಜಾಬ್‌ ಧರಿಸಿ ಮತಗಟ್ಟೆಗೆ ಆಗಮಿಸಿದ ಮಹಿಳೆಯರಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಪೋಲಿಂಗ್‌ ಏಜೆಂಟ್‌ !

Update: 2022-02-19 10:20 GMT

ಮಧುರೈ: ಕರ್ನಾಟಕದಲ್ಲಿ ಕೋಲಾಹಲವೆಬ್ಬಿಸಿರುವ ಹಿಜಾಬ್ ವಿವಾದ ತಮಿಳುನಾಡಿನ ಮಧುರೈ ಜಿಲ್ಲೆಯ ಮೇಲುರು ಮುನಿಸಿಪಾಲಿಟಿಯ ಸ್ಥಳೀಯಾಡಳಿತ ಚುನಾವಣೆಗಳ ವೇಳೆಯೂ ಇಂದು ಪ್ರತಿಧ್ವನಿಸಿದೆ. ಅಲ್ಲಿನ ಮತಗಟ್ಟೆಯೊಂದರಲ್ಲಿ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸಿ ಮತದಾನಕ್ಕೆ ಆಗಮಿಸಿದ್ದನ್ನು ಬಿಜೆಪಿ ಪೋಲಿಂಗ್ ಏಜಂಟ್ ವಿರೋಧಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಆದರೆ ಬಿಜೆಪಿ ಪೋಲಿಂಗ್ ಏಜೆಂಟ್ ಗಿರಿರಾಜನ್ ಎತ್ತಿದ ಆಕ್ಷೇಪಕ್ಕೆ ಮತಗಟ್ಟೆ ಅಧಿಕಾರಿಗಳು ಹಾಗೂ ಅಲ್ಲಿದ್ದ ಇತರ ಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ ಪಕ್ಷದ ಪೋಲಿಂಗ್ ಏಜಂಟರು ಒಪ್ಪಿಲ್ಲ. ಇದರಿಂದ ಮತದಾನ ಪ್ರಕ್ರಿಯೆಗೆ ಸುಮಾರು 30 ನಿಮಿಷಗಳ ತಡೆಯುಂಟಾಯಿತು.

ಹಿಜಾಬ್ ಧರಿಸಿದ ಮಹಿಳೆಯೊಬ್ಬರು ಮತಗಟ್ಟೆಗೆ ಆಗಮಿಸಿದಾಗ ಬಿಜೆಪಿ ಏಜಂಟ್ ತಗಾದೆ ತೆಗೆದಿದ್ದರು. ಅಂತಿಮವಾಗಿ ಪೊಲೀಸರ ಹಸ್ತಕ್ಷೇಪದ ನಂತರ ಗಿರಿರಾಜನ್ ಅವರನ್ನು ಮತಗಟ್ಟೆಯಿಂದ ಹೊರಕಳುಹಿಸಿ ಅವರ ಸ್ಥಾನಕ್ಕೆ ಅವರ ಪಕ್ಷದ ಇನ್ನೊಬ್ಬರನ್ನು ಕರೆಸಲಾಯಿತು.

ಗಿರಿರಾಜನ್ ತನ್ನ ಕೈಯ್ಯಲ್ಲಿ ಮತದಾರರ ಪಟ್ಟಿಯನ್ನು ಹಿಡಿದುಕೊಂಡು  ಹಿಜಾಬ್ ಧರಿಸಿದ ಮಹಿಳೆಯರಿಗೆ ಮತದಾನಕ್ಕೆ ಅವಕಾಶ ನೀಡಿದ ಕುರಿತು ಮತಗಟ್ಟೆ ಅಧಿಕಾರಿಗಳ ಜತೆ ಜೋರು ಸ್ವರದಲ್ಲಿ ಮಾತನಾಡುವ ವೀಡಿಯೋವೊಂದು ಹರಿದಾಡುತ್ತಿದೆ.

"ಅವರ ಮುಖವನ್ನು ಹೇಗೆ ಗುರುತು ಹಚ್ಚುವುದು, ಮತದಾರ ಪಟ್ಟಿಯಲ್ಲಿರುವ ಫೋಟೋದಲ್ಲಿರುವವರೇ ಮತದಾನಕ್ಕೆ ಆಗಮಿಸಿದ ಜನರು (ಮಹಿಳೆಯರನ್ನು) ಎಂದು ಹೇಗೆ ತಿಳಿಯುವುದು?" ಎಂದು ಗಿರಿರಾಜನ್ ಹೇಳುವುದು ಕೇಳಿಸುತ್ತದೆ.

ಅಲ್ಲಿದ್ದ ಅಧಿಕಾರಿಗಳು ಮತ್ತು ಇತರ ಏಜಂಟ್‍ಗಳು ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ವಿಫಲರಾದಾಗ ಪೊಲೀಸರು ಅವರಿಗೆ ಅಲ್ಲಿಂದ ತೆರಳುವಂತೆ ಸೂಚಿಸಿದರು. ನಂತರ ಮತದಾನ ಮುಂದುವರಿದಿದೆ.

ಈ ನಿರ್ದಿಷ್ಟ ವಾರ್ಡ್ ಸಂಖ್ಯೆ 8ರ ಮತಗಟ್ಟೆಯ ಹೊರಗೆ ಹಿಜಾಬ್ ಧರಿಸಿ ಮತದಾನಕ್ಕೆ ಹಲವಾರು ಮುಸ್ಲಿಂ ಮಹಿಳೆಯರು ಕಾದಿದ್ದ ಸಂದರ್ಭ ಈ ಘಟನೆ ನಡೆದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಚುನಾವಣಾ ಆಯುಕ್ತ ವಿ ಪಳನಿಕುಮಾರ್, ಹಿಜಾಬ್ ಧರಿಸಿದ ಮಹಿಳೆಯರಿಗೆ ಮತದಾನಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News