×
Ad

ಮಣಿಪಾಲ; ಮಹಿಳೆಯ ಕೊಲೆಗೆ ಯತ್ನ: ಇಬ್ಬರು ಆರೋಪಿಗಳ ಬಂಧನ

Update: 2022-02-19 20:29 IST

ಮಣಿಪಾಲ, ಫೆ.19: ಇಲ್ಲಿಗೆ ಸಮೀಪದ ಮಂಚಿಕುಮೇರಿ ಎಂಬಲ್ಲಿ ಫೆ.18ರಂದು ಸಂಜೆ ವೇಳೆ ಮಹಿಳೆಯೊಬ್ಬರನ್ನು ಕೊಲೆಗೆ ಯತ್ನಿಸಿದ ಇಬ್ಬರನ್ನು ಸಾರ್ವಜನಿಕರ ಸಹಾಯದಿಂದ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಘಟನೆಯಿಂದ ತೀವ್ರವಾಗಿ ಅಸ್ವಸ್ಥಗೊಂಡಿರುವ ಮಂಚಿಕುಮೇರಿಯ ರಮಾನಾಥ್ ರೈ ಎಂಬವರ ಪತ್ನಿ ಸುಮತಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಕೃತ್ಯ ಎಸಗಿದ ಸುಮತಿಯ ಅಕ್ಕನ ಮಗ ಮಂಗಳೂರಿನ ಮಿಥುನ್(27) ಹಾಗೂ ಆತನ ಸ್ನೇಹಿತ ನಾಗೇಶ್ (33) ಎಂಬವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಕೈಯಲ್ಲಿ ದೊಡ್ಡ ಟ್ರಾಲಿ ಬ್ಯಾಗನ್ನು ಹಿಡಿದು ಕೊಂಡು ಬಂದ ಆರೋಪಿಗಳು, ರಮಾನಾಥ್ ರೈ ಅವರ ಮನೆ ಒಳಗೆ ನುಗ್ಗಿ ಬಾಗಿಲು ಹಾಕಿದರೆನ್ನಲಾಗಿದೆ. ಈ ವೇಳೆ ಮನೆಗೆ ಬಂದ ರಮಾನಾಥ್, ಬಾಗಿಲನ್ನು ಬಡಿದರೂ ಅವರ ಹೆಂಡತಿ ಬಾಗಿಲು ತೆಗೆಯಲಿಲ್ಲ. ಒಳಗೆ ಗಲಾಟೆ ಶಬ್ದ ಕೇಳಿ ರಮಾನಾಥ್ ಬೊಬ್ಬೆ ಹಾಕಿದರು. ಆಗ ಸ್ಥಳೀಯರೆಲ್ಲರು ಸೇರಿ ಅಲ್ಲಿಗೆ ಬಂದರೆಂದು ತಿಳಿದುಬಂದಿದೆ.

ಈ ವೇಳೆ ಬಾಗಿಲು ತೆಗೆದ ಇಬ್ಬರು ಎಲ್ಲರನ್ನು ದೂಡಿಕೊಂಡು ಹೊರಗೆ ಬಂದಿದ್ದು, ಮನೆ ಒಳಗೆ ಹೋಗಿ ನೋಡಿದಾಗ ಸುಮತಿಯನ್ನು ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ತುರುಕಿ ಅದನ್ನು ದೊಡ್ಡ ಟ್ರಾಲಿ ಬ್ಯಾಗ್ ಒಳಗೆ ಹಾಕಿರುವುದು ಕಂಡು ಬಂತು. ಅರೆಪ್ರಜ್ಞಾವಸ್ಥೆಯಲ್ಲಿದ್ದ ಸುಮತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸ ಲಾಯಿತು. ಈ ಸಂದರ್ಭ ಮನೆಯ ಒಳಗಿನಿಂದ ಓಡಿ ಹೋಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ಇವರು ಹಳೆಯ ದ್ವೇಷದಿಂದ ಸುಮತಿಯನ್ನು ಕೊಲೆ ಮಾಡಿ ಸಾಗಾಟ ಮಾಡುವ ಉದ್ದೇಶದಿಂದಲೇ ಉಸಿರುಗಟ್ಟಿಸಿ ಚೀಲದಲ್ಲಿ ತುಂಬಿ ಟ್ರಾಲಿಯಲ್ಲಿ ಹಾಕಿ ಈ ಕೃತ್ಯವನ್ನು ಎಸಗಿದ್ದಾರೆಂದು ದೂರಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News