100 ‘ಕಿಸಾನ್ ಡ್ರೋನ್’ಗಳನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ

Update: 2022-02-19 17:32 GMT

ಹೊಸದಿಲ್ಲಿ, ಫೆ. 19: ಕೀಟನಾಶಕ ಹಾಗೂ ಕೃಷಿಗೆ ಸಂಬಂಧಿಸಿದ ಇತರ ವಸ್ತುಗಳನ್ನು ಸಿಂಪಡಿಸಲು ದೇಶದ ವಿವಿಧ ಭಾಗಗಳಲ್ಲಿ 100 ‘ಕಿಸಾನ್ ಡ್ರೋನ್’ಗಳನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ಡ್ರೋನ್ ವಲಯದಲ್ಲಿ ಭಾರತದ ಹೆಚ್ಚುತ್ತಿರುವ ಸಾಮರ್ಥ್ಯವು ಅದಕ್ಕೆ ಜಗತ್ತಿನಲ್ಲಿ ಹೊಸ ನಾಯಕತ್ವವನ್ನು ನೀಡಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಡ್ರೋನ್ಗಳನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿದ ಪ್ರಧಾನಿ ಅವರು, ಇದು ರೈತರಿಗೆ ನವೀನ ಹಾಗೂ ಉತ್ತೇಜಕ ಕ್ರಮವೆಂದು ವಿವರಿಸಿದರು. ಭಾಷಣದಲ್ಲಿ ಪ್ರಧಾನಿ ಅವರು, ನೂತನ ಡ್ರೋನ್ ಸ್ಟಾರ್ಟ್-ಅಪ್ಗಳ ಹೊಸ ಸಂಸ್ಕೃತಿ ಭಾರತದಲ್ಲಿ ಸಿದ್ಧವಾಗುತ್ತಿದೆ. ಡ್ರೋನ್ಗಳ ಸಂಖ್ಯೆ 200ರಿಂದ ಶೀಘ್ರದಲ್ಲಿ 1000 ಆಗಲಿದೆ. ಇದು ಇಂದಿನ ಜನಾಂಗಕ್ಕೆ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳನ್ನು ಒದಗಿಸಲಿದೆ ಎಂದರು.

ಡ್ರೋನ್ ಕ್ಷೇತ್ರದ ಅಭಿವೃದ್ಧಿಯಲ್ಲಿ ಯಾವುದೇ ಅಡೆ ತಡೆಯಾಗದಂತೆ ತನ್ನ ಸರಕಾರ ಖಾತರಿ ನೀಡಲಿದೆ ಹಾಗೂ ಡ್ರೋನ್ಗಳ ಸಂಖ್ಯೆ ಏರಿಕೆಗೆ ಅನುಕೂಲವಾಗುವಂತೆ ಹಲವಾರು ಸುಧಾರಣೆಗಳು ಹಾಗೂ ನೀತಿ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಸೂಕ್ತ ನೀತಿ ಇದ್ದರೆ ದೇಶ ಎಷ್ಟು ಎತ್ತರಕ್ಕೆ ಏರಬಲ್ಲುದು ಎಂಬುದಕ್ಕೆ ಇದು ಒಂದು ಉದಾಹರಣೆ ಎಂದು ಹೇಳಿದ ಮೋದಿ ಅವರು, ಕೆಲವು ವರ್ಷಗಳ ಹಿಂದೆ ಡ್ರೋನ್ಗಳು ಹೆಚ್ಚಾಗಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದ್ದವು ಎಂದರು. 21ನೇ ಶತಮಾನದಲ್ಲಿ ಆಧುನಿಕ ಕೃಷಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಇದು ಒಂದು ಹೊಸ ಅಧ್ಯಾಯ. ಅಲ್ಲದೆ, ಇದು ಡ್ರೋನ್ ಕ್ಷೇತ್ರದ ಅಭಿವೃದ್ಧಿಯಲ್ಲಿ ಅಡಿಗಲ್ಲು ಎಂಬುದನ್ನು ಮಾತ್ರವಲ್ಲ, ಅನಂತ ಸಾಧ್ಯತೆಗಳನ್ನು ತೆರೆಯಲಿದೆ ಎಂಬುದನ್ನು ಕೂಡ ಸಾಬೀತುಪಡಿಸಲಿದೆ ಎಂದು ಪ್ರಧಾನಿ ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News