ಕುಡುಬಿ ಜನಾಂಗದ ಮನೆಗಳಿಗೆ ಭೇಟಿ ನೀಡಿದ ಸಚಿವ ಅಶೋಕ್
ಕೊಕ್ಕರ್ಣೆ, ಫೆ.19: ಕಂದಾಯ ಸಚಿವ ಆರ್. ಅಶೋಕ್ ಅವರು ಇಂದು ಸಂಜೆ ಕೊಕ್ಕರ್ಣೆ ಗ್ರಾಪಂ ವ್ಯಾಪ್ತಿಯ ಒಳಬೈಲಿನಲ್ಲಿರುವ ಕುಡುಬಿ ಸಮುದಾಯದವರ ಮನೆಗಳಿಗೆ ಭೇಟಿ ನೀಡಿ ಕುಡುಬಿ ಸಮುದಾಯ ದವರೊಂದಿಗೆ ಸಂವಾದ ನಡೆಸಿದರು.
ಸಚಿವರು ಆಗಮಿಸಿದಾಗ ಸಮುದಾಯದ ನಾಯಕರು ಸಾಂಪ್ರದಾಯಿಕ ವೀಳ್ಯ ನೀಡಿ ಸ್ವಾಗತಿಸಿದರು. ಜನಾಂಗದ ನಾಯಕನ ಮನೆಯಲ್ಲಿ ಬೆಲ್ಲ ಮತ್ತು ನೀರು ಸೇವಿಸಿದರು.ಕುಡುಬಿ ಸಮುದಾಯದ ಸಾಂಪ್ರದಾಯಿಕ ಬೇಟೆ ಉಪಕರಣಗಳನ್ನು ವೀಕ್ಷಿಸಿದರು. ಗುಮಟೆ ವಾದನವನ್ನು ಆಲಿಸಿದರು. ಅವರಿಂದ ಅಹವಾಲುಗಳನ್ನೂ ಸಚಿವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಕೊಕ್ಕಣೆ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನೀವನ್ ಭಟ್, ಸಹಾಯಕ ಆಯುಕ್ತ ರಾಜು ಕೆ., ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಫ್‌ಓ ಅಶೀಶ್ ರೆಡ್ಡಿ, ತಹಶೀಲ್ದಾರ್‌ಗಳಾದ ಪ್ರದೀಪ್ ಕುರ್ಡೇಕರ್, ರಾಜಶೇಖರ ಮೂರ್ತಿ ಹಾಗೂ ಕುಡುಬಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.