×
Ad

ಮ್ಯೂನಿಚ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಉಕ್ರೇನ್ ಅಧ್ಯಕ್ಷ

Update: 2022-02-20 00:10 IST

ಕೀವ್, ಫೆ.19: ರಶ್ಯಾದೊಂದಿಗಿನ ಉದ್ವಿಗ್ನತೆ ಮುಂದುವರಿದಿರುವಂತೆಯೇ, ಉಕ್ರೇನ್ ಅಧ್ಯಕ್ಷ ವೊಲೊದಿಮೀರ್ ಝೆಲೆಂಸ್ಕಿ ಜರ್ಮನ್ನ ಮ್ಯೂನಿಚ್ನಲ್ಲಿ ನಡೆಯುತ್ತಿರುವ ಭದ್ರತಾ ಸಮ್ಮೇಳನಕ್ಕೆ ಭೇಟಿ ನೀಡಿ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ. ಸಮ್ಮೇಳನದ ಅಜೆಂಡಾವು ಪೂರ್ವ ಯುರೋಪ್ನಲ್ಲಿರುವ ಬೆದರಿಕೆ ಮತ್ತು ಉಕ್ರೇನ್ನ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಕೇಂದ್ರೀಕರಿಸಿದೆ ಎಂದು ಹೇಳಿಕೆ ತಿಳಿಸಿದೆ. ಝೆಲೆಂಸ್ಕಿ ಅವರು ಬ್ರಿಟನ್ನ ಪ್ರಧಾನಿ ಬೋರಿಸ್ ಜಾನ್ಸನ್, ಜರ್ಮನ್ ಛಾನ್ಸಲರ್ ಒಲಾಫ್ ಶಾಲ್ಝ್, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದು ಉಕ್ರೇನ್ಗೆ ಹೆಚ್ಚುವರಿ ಮಿಲಿಟರಿ ಮತ್ತು ಆರ್ಥಿಕ ನೆರವು ಒದಗಿಸುವ ಒಪ್ಪಂದ ಮಾಡಿಕೊಳ್ಳುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿಕೆ ತಿಳಿಸಿದೆ.

ಈ ಮಧ್ಯೆ, ರಶ್ಯಾವು ಒಂದು ವಾರದೊಳಗೆ ಉಕ್ರೇನ್ ಮೇಲೆ ಆಕ್ರಮಣ ನಡೆಸುವ ಯೋಜನೆ ಹಾಕಿಕೊಂಡಿರುವುದು ತನಗೆ ಖಾತರಿಯಾಗಿದೆ. ರಾಜತಾಂತ್ರಿಕ ಕ್ರಮಗಳ ಮೂಲಕ ಉದ್ವಿಗ್ನತೆ ಶಮನಗೊಳಿಸಲು ಇನ್ನೂ ಕಾಲ ಮಿಂಚಿಲ್ಲ. ಆದರೆ ಸೇನಾ ಕಾರ್ಯಾಚರಣೆಗೆ ರಶ್ಯಾ ಮುಂದಾದರೆ ರಾಜತಾಂತ್ರಿಕ ಕ್ರಮದ ಆಯ್ಕೆ ಅಂತ್ಯವಾಗುತ್ತದೆ ಎಂದು ಶುಕ್ರವಾರ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿರುವುದಾಗಿ ವರದಿಯಾಗಿದೆ. ಶುಕ್ರವಾರ ಭದ್ರತಾ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್, ರಶ್ಯಾ- ಉಕ್ರೇನ್ ನಡುವಿನ ಬಿಕ್ಕಟ್ಟು ಯುದ್ಧದತ್ತ ಮುನ್ನಡೆದರೆ ಅದೊಂದು ದುರಂತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News