ಪವಾರ್‌, ಠಾಕ್ರೆಯನ್ನು ಭೇಟಿಯಾದ ತೆಲಂಗಾಣ ಸಿಎಂ: ಪರ್ಯಾಯ ಶಕ್ತಿಗಳ ಸಾಧ್ಯತೆಗಳ ಬಗ್ಗೆ ಗರಿಗೆದರಿದ ಚರ್ಚೆ

Update: 2022-02-20 09:55 GMT

ಮುಂಬೈ: ಪ್ರಧಾನಿ ಮೋದಿ ವಿರುದ್ಧ ಸರಣಿ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಅವರು ಮುಂಬೈಗೆ ತೆರಳಿದ್ದಾರೆ. ಮುಂಬೈಯಲ್ಲಿ ಶಿವಸೇನಾ ಮುಖ್ಯಸ್ಥ, ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಹಾಗೂ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ರನ್ನು ಭೇಟಿಯಾಗಿದ್ದಾರೆ. 

ಈ ಭೇಟಿಯು 2024 ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಲಾಗಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳು ಒಂದಾಗಿ ಬಿಜೆಪಿಯನ್ನು ಎದುರಿಸುವ ಬಗ್ಗೆ ಚರ್ಚಿಸಲು ಈ ಭೇಟಿ ನಡೆದಿದೆ ಎಂದು ವಿಶ್ಲೇಷಣೆಗಳು ನಡೆದಿದೆ. 
 
ಕೆಸಿ ರಾವ್‌ ಅವರನ್ನು ಮಧ್ಯಾಹ್ನದ ಭೋಜನಕ್ಕೆ ಠಾಕ್ರೆ ಆಹ್ವಾನಿಸಿದ್ದಾರೆ ಎಂದು ರಾವ್‌ ಕಛೇರಿ ಮೂಲಗಳು ತಿಳಿಸಿದೆ. ಮುಂಬೈಗೆ ಆಗಮಿಸುವ ಕೆಸಿ ರಾವ್‌ ರನ್ನು ಸ್ವಾಗತಿಸುವ ಪೋಸ್ಟರ್‌, ಬ್ಯಾನರ್‌ಗಳು ಮುಂಬೈ ನಗರದ ಅಲ್ಲಲ್ಲಿ ಹಾಕಲಾಗಿದೆ ಎಂದು ವರದಿ ಆಗಿದೆ. 
 ಬಿಜೆಪಿಯ ಜನವಿರೋಧಿ ನೀತಿಯ ವಿರುದ್ಧವಾಗಿ ಹೋರಾಡಲು ಎಲ್ಲಾ ಬೆಂಬಲಗಳನ್ನು  ನೀಡುವುದಾಗಿ ಠಾಕ್ರೆ ಕೆ ಸಿ ರಾವ್‌ಗೆ ಹೇಳಿದ್ದಾರೆ ಎಂದು ಕೆಸಿ ರಾವ್‌ ಕಛೇರಿ ತಿಳಿಸಿದೆ.  
 ಕೆಸಿ ರಾವ್‌ ಅವರ ಪುತ್ರಿ ಶಾಸಕಿ ಕೆ ಕವಿತಾ, ಸಂಸದ ಜೆ ಸಂತೋಷ್‌ ಕುಮಾರ್‌, ರಂಜಿತ್‌ ರೆಡ್ಡಿ ಹಾಗೂ ಬಿಬಿ ಪಾಟೀಲ್‌ ಮೊದಲಾದವರು ಕೆ ಸಿ ರಾವ್‌ ಮುಂಬೈ ಭೇಟಿಗೆ ಜೊತೆಗೂಡಿದ್ದಾರೆ. 

 ಈ ನಡುವೆ ಜಾತ್ಯಾತೀತ ಜನತಾ ದಳದ ಮುಖ್ಯಸ್ಥ ಹೆಚ್‌ ಡಿ ದೇವೇಗೌಡ ಅವರನ್ನೂ ಭೇಟಿಯಾಗುವ ಯೋಜನೆಯನ್ನು ಕೆಸಿ ರಾವ್‌ ಹಾಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಪ್ರಾದೇಶಿಕ ಪಕ್ಷಗಳೊಂದಿಗೆ ಸಮನ್ವಯ ಸಾಧಿಸುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಹೈದರಾಬಾದ್‌ ತೆರಳಿ ಕೆ ಸಿ ರಾವ್‌ ಭೇಟಿಯಾಗಲು ಉತ್ಸುಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News