"ʼಗೋಲಿ ಮಾರೋʼ ಕರೆಕೊಟ್ಟಾತ ಈಗ ಕ್ಯಾಬಿನೆಟ್‌ ಸಚಿವ, ಇದು ಕೊಲೆಗೆ ಪ್ರಚೋದನೆಯಲ್ಲವೇ?"

Update: 2022-02-20 14:19 GMT

ಹೊಸದಿಲ್ಲಿ: ಮುಸ್ಲಿಮ್‌ ಮಹಿಳೆಯರನ್ನು ಹರಾಜು ಮಾಡುತ್ತಿದ್ದ ಬುಲ್ಲಿ ಬಾಯ್‌ ಅಪ್ಲಿಕೇಶನ್‌, ಧರ್ಮ ಸಂಸದ್‌ನಲ್ಲಿ ನಡೆದ ನರಮೇಧದ ಕರೆ, ಹಾಗೂ ಸುಲ್ಲಿ ಡೀಲ್ಸ್‌ ಪ್ರಕರಣದ ಬಗ್ಗೆ ಹಾಗೂ ದ್ವೇಷಭಾಷಣಗಳ ಕುರಿತು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ಮದನ್‌ ಲೋಕೂರ್‌ ಅವರು ಸರ್ಕಾರವನ್ನು ತರಾಟೆಗೆ ತೆಗೆದಿದ್ದಾರೆ. 

ʼಗೋಲಿ ಮಾರೋʼ ಎಂದು ದೆಹಲಿಯಲ್ಲಿ ಪ್ರಚೋದನೆ ನೀಡಿದ ವ್ಯಕ್ತಿ ಈಗ ಕ್ಯಾಬಿನೆಟ್‌ ಸಚಿವ, ಈಗ ಬಹುಷ ಆತ ನಾನು ಯಾರಿಗೆ ಶೂಟ್‌ ಮಾಡಬೇಕೆಂದು ಹೇಳಿಲ್ಲ, ದೇಶದ್ರೋಹಿಗಳಿಗೆ ಶೂಟ್‌ ಮಾಡಿ ಎಂದು ಕೇಳುಗರು ಹೇಳಿದರು ಎಂದು ಹೇಳಬಹುದು, ಹಾಗಂತ ಕೊಲೆಗೆ ನೀಡಿದ ಪ್ರಚೋದನೆ ಅಲ್ಲದಿದ್ದರೆ ಇನ್ನೇನು?ʼ ಎಂದು ಅವರು ಪ್ರಶ್ನಿಸಿದ್ದಾರೆ. 

ದ್ವೇಷ ಭಾಷಣದ ಬಗ್ಗೆ ಕಾನೂನಿನ ಆಯಾಮಗಳನ್ನು ಚರ್ಚಿಸಿದ ಅವರು, ದ್ವೇಷ ಭಾಷಣವನ್ನು ಮಟ್ಟ ಹಾಕಲು ಕ್ರಮ ತೆಗೆದುಕೊಳ್ಳದ ಬಗ್ಗೆ ಸರ್ಕಾರವನ್ನು ಟೀಕಿಸಿದ್ದಾರೆ. ಹಾಗೂ ದ್ವೇಷ ಭಾಷಣದಲ್ಲಿ ಸರ್ಕಾರದ ಪಾತ್ರದ ಬಗ್ಗೆ ಪ್ರಶ್ನಿಸಿದ ಅವರು, ಹಿಂಸಾಚಾರ ನಡೆದಿಲ್ಲವಾದರೆ, ಅದು (ದ್ವೇಷ ಭಾಷಣ) ಸರಿ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಬಿಟ್ಟುಬಿಡಬಹುದೆ ಎಂದು ಕೇಳಿದ್ದಾರೆ. 
 
ಧರ್ಮ ಸಂಸದಿನಲ್ಲಿ ಜನಾಂಗೀಯ ನಿರ್ಮೂಲನೆ ಹಾಗೂ ನರಮೇಧದ ಕರೆಯನ್ನು ಕುರಿತು ಪ್ರಸ್ತಾಪಿಸಿದ ಲೋಕೂರ್‌, ಕೆಲವೊಂದು ವಿಪರೀತ ಪ್ರಕರಣಗಳಲ್ಲಿ ದ್ವೇಷಪೂರಿತ ಭಾಷಣವು ಹಿಂಸಾಚಾರ ಅಥವಾ ನರಮೇಧಕ್ಕೆ ಕಾರಣವಾಗಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ನೆನಪಿಡಿ ಎಂದು ಹೇಳಿದ್ದಾರೆ. ಗುಂಪು ಥಳಿತವೇ ಹಿಂಸಾಚಾರ, ಧ್ವೇಷ ಭಾಷಣವು ಹಿಂಸಾಚಾರಕ್ಕೆ ಕಾರಣವಾಗುತ್ತದೆ. ಗುಂಪು ಥಳಿತದ ಆರೋಪಿಗಳಿಗೆ ಸಚಿವರು ಹಾರ ಹಾಕುತ್ತಿದ್ದಾರೆ ಎಂದು ಲೋಕೂರ್‌ ಹೇಳಿದ್ದಾರೆ. 

ಇಷ್ಟೆಲ್ಲಾ ನಡೆದೂ ಏನೂ ಕ್ರಮ ಕೈಗೊಳ್ಳದ ಆಡಳಿತವನ್ನು ನೀವು ಹೊಂದಿದ್ದೀರಿ. ಧರ್ಮ ಸಂಸದ್‌ ಪ್ರಕರಣ ಸುಪ್ರೀಂ ಕೋರ್ಟ್‌  ಗೆ ಬರುವವರೆಗೂ ಮೌನವಾಗಿಯೇ ಉಳಿದ ಅಧಿಕಾರಿಗಳು, ಸುಪ್ರೀಂ ತರಾಟೆಯ ಬಳಿಕ ಕೆಲವರನ್ನು ಬಂಧಿಸಿದ್ದಾರೆ. ಅವರೂ ಜಾಮೀನು ಪಡೆದಿದ್ದಾರೆ. ಹಾಗಾಗಿ, ಏನೂ ಮಾಡದ ಪೊಲೀಸರನ್ನು ಹಾಗೂ ಮೌನವಾಗಿರುವ ಸರ್ಕಾರವನ್ನು ನೀವು ಹೊಂದಿದ್ದೀರಿ. ಮತ್ತೊಂದೆಡೆ, ಗುಂಪು ಥಳಿತದ ಆರೋಪಿಗಳಿಗೆ ಹಾರ ಹಾಕುವ ಸರ್ಕಾರದ ಮಂದಿಯನ್ನು ಹೊಂದಿದ್ದೀರಿ. ಧ್ವೇಷ ಭಾಷಣ ನಿಮಗೆ ಸಮಸ್ಯೆ ಅಲ್ಲ ಎಂಬಂತೆ ನೀವು ಒಪ್ಪಿಕೊಂಡಿದ್ದೀರಿ ಎಂದು ಲೋಕೂರ್‌ ಹೇಳಿದ್ದಾರೆ. 

ಹಿಂಸಾಚಾರ ನಡೆಯದೇ ಇರುವ ಅಂತಹ ಧ್ವೇಷ ಭಾಷಣದ ಬಗ್ಗೆ ನಾವು ನಿರ್ವಹಿಸುವುದಿಲ್ಲ ಎಂದು ಕೆಲವು ನ್ಯಾಯಾಲಯಗಳು ಹೇಳುತ್ತಿದೆ. ಹಾಗಾಗಿ, ಧ್ವೇಷ ಭಾಷಣದ ಚಕ್ರ ತಿರುಗುತ್ತಿದೆ ಎಂದು ಅವರು ಹೇಳಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೆಲವು ನಿರ್ಬಂಧಗಳು ಬೇಕು. ಇವುಗಳನ್ನೆಲ್ಲಾ (ಧರ್ಮ ಸಂಸದ್‌ನಲ್ಲಿ ನಡೆದ ಧ್ವೇಷ ಭಾಷಣ ಮೊದಲಾದವು) ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಬರುವುದಿಲ್ಲ. ಈ ಭಾಷಣಗಳು ಹಿಂಸೆ ಅಥವಾ ನರಮೇಧಕ್ಕೆ ಕಾರಣವಾದರೂ ಆಗದಿದ್ದರೂ ಇವು ಅಧಿಕಾರ ಹರಣ, ಬಹಿಷ್ಕಾರ, ಘನತೆಯ ನಷ್ಟಕ್ಕೆ ಕಾರಣವಾಗುವ ಭಾಷಣಗಳಾಗಿವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News