ಎನ್ಎಸ್ಇ ಪ್ರಕರಣ: ಸಿಬಿಐನಿಂದ ಮಾಜಿ ಮುಖ್ಯಸ್ಥ ರವಿ ನಾರಾಯಣ ವಿಚಾರಣೆ
ಹೊಸದಿಲ್ಲಿ,ಫೆ.20: ಎನ್ಎಸ್ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣರ ಪೂರ್ವಾಧಿಕಾರಿ ರವಿ ನಾರಾಯಣ ಅವರನ್ನು ಸಿಬಿಐ ಶನಿವಾರ ದಿಲ್ಲಿಯಲ್ಲಿ ವಿಚಾರಣೆಗೊಳಪಡಿಸಿದೆ. ಇನ್ನಷ್ಟು ವಿಚಾರಣೆಗಾಗಿ ಅವರನ್ನು ಮತ್ತೆ ಕರೆಸಲಾಗುವುದು ಎಂದು ಬಲ್ಲ ಮೂಲಗಳು ತಿಳಿಸಿವೆ.
ಸಿಬಿಐ ಈಗಾಗಲೇ ರವಿ ನಾರಾಯಣ ಮತ್ತು ಇತರರ ವಿರುದ್ಧ ಲುಕ್ಔಟ್ ನೋಟಿಸ್‌ಗಳನ್ನು ಹೊರಡಿಸಿದೆ. ಇದಕ್ಕೂ ಮುನ್ನ ಸಿಬಿಐ ಮುಂಬೈನಲ್ಲಿ ಚಿತ್ರಾರಾಮಕೃಷ್ಣ ಮತ್ತು ಎನ್ಎಸ್ಇ ಮಾಜಿ ಗ್ರೂಪ್ ಆಪರೇಟಿಂಗ್ ಅಧಿಕಾರಿ ಆನಂದ ಸುಬ್ರಮಣಿಯನ್ ಅವರನ್ನು ಚೆನ್ನೈನಲ್ಲಿ ಪ್ರಶ್ನಿಸಿತ್ತು. ಚಿತ್ರಾ ರಾಮಕೃಷ್ಣ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಿಮಾಲಯದಲ್ಲಿರುವ ಯೋಗಿಯೋರ್ವರ ಮಾರ್ಗದರ್ಶನವನ್ನು ಪಡೆದುಕೊಳ್ಳುತ್ತಿದ್ದರು ಎನ್ನುವುದನ್ನು ತನ್ನ ವರದಿಯಲ್ಲಿ ಬಹಿರಂಗಗೊಳಿಸಿರುವ ಹಿನ್ನೆಲೆಯಲ್ಲಿ ಈ ಸುತ್ತಿನ ವಿಚಾರಣೆಗಳನ್ನು ಸಿಬಿಐ ನಡೆಸುತ್ತಿದೆ.
ನಿರ್ದಿಷ್ಟ ಬ್ರೋಕರ್ಗಳಿಗೆ ಎನ್ಎಸ್ಇ ಸರ್ವರ್ನಲ್ಲಿ ಇತರರಿಗಿಂತ ಮೊದಲು ಪ್ರವೇಶಕ್ಕೆ ಕಾನೂನುಬಾಹಿರವಾಗಿ ಅವಕಾಶ ಕಲ್ಪಿಸಿದ್ದ ಕೋ ಲೊಕೇಷನ್ ಪ್ರಕರಣದಲ್ಲಿ ಚಿತ್ರಾ,ನಾರಾಯಣ ಮತ್ತು ಇತರರ ಪಾತ್ರಗಳ ಕುರಿತು ಸಿಬಿಐ ಅವರ ತನಿಖೆಯನ್ನು ನಡೆಸುತ್ತಿದೆ. 2018ರಲ್ಲಿ ಈ ಪ್ರಕರಣ ದಾಖಲಾಗಿತ್ತು. ಮುಂಬೈನ ಆದಾಯ ತೆರಿಗೆ ಅಧಿಕಾರಿಗಳ ತಂಡವೊಂದು ಕೂಡ ಚಿತ್ರಾ ರಾಮಕೃಷ್ಣ ಮತ್ತು ಸುಬ್ರಮಣಿಯನ್ ಅವರ ವಿಚಾರಣೆಯನ್ನು ನಡೆಸುತ್ತಿದೆ.