ಬಿಜೆಪಿ ಸರಕಾರ ಜನರನ್ನು ವಿಭಜಿಸುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ: ಸೋನಿಯಾ ಗಾಂಧಿ
Update: 2022-02-21 22:09 IST
ರಾಯ್ಬರೇಲಿ, ಫೆ. 21: ರಾಯಬರೇಲಿ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಆದುದರಿಂದ ಉತ್ತರಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಅವರು ಜನರಲ್ಲಿ ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ತರಾಟೆಗೆ ತೆಗೆದುಕೊಂಡ ಸೋನಿಯಾ ಗಾಂಧಿ, ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭ ಮೋದಿ ಹಾಗೂ ಆದಿತ್ಯನಾಥ್ ತಪ್ಪು ನಿರ್ವಹಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದು ಮಹತ್ವದ ಚುನಾವಣೆ ಆಗಲಿದೆ. ಯಾಕೆಂದರೆ, ಕಳೆದ 5 ವರ್ಷಗಳಲ್ಲಿ ಜನರನ್ನು ವಿಭಜಿಸುವುದನ್ನು ಬಿಟ್ಟು ಬೇರೇನೂ ಮಾಡದ ಸರಕಾರವನ್ನು ನೀವು ನೋಡಿದ್ದೀರಿ ಎಂದು ಅವರು ಹೇಳಿದರು. ನಾಲ್ಕನೇ ಹಂತದ ಚುನಾವಣಾ ಪ್ರಚಾರದ ಕೊನೆಯ ದಿನವಾದ ಸೋಮವಾರ ಅವರು ವೀಡಿಯೊ ಕಾನ್ಫರೆನ್ಸ್ ನಲ್ಲಿ ಮಾತನಾಡಿದರು.