"ನನಗೆ ಮತಹಾಕದ ಹಿಂದೂಗಳ ಮೈಯಲ್ಲಿ ಮುಸ್ಲಿಂ ರಕ್ತ ಹರಿಯುತ್ತಿದೆ ಎಂದರ್ಥ": ಮತ್ತೆ ದ್ವೇಷಭಾಷಣ ಮಾಡಿದ ಬಿಜೆಪಿ ಶಾಸಕ
ಲಕ್ನೋ, ಫೆ. 21: ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಂದರ್ಭ ದ್ವೇಷ ಭಾಷಣ ಪುನರಾವರ್ತಿಸಿರುವ ಬಿಜೆಪಿ ಶಾಸಕ ರಾಘವೇಂದ್ರ ಸಿಂಗ್ ವಿರುದ್ಧ ಇನ್ನೊಂದು ಪ್ರಕರಣ ದಾಖಲಾಗಿದೆ. ದೊಮರಿಯಾಗಂಜ್ ಕ್ಷೇತ್ರದಿಂದ ಜಯ ಗಳಿಸಿದರೆ, ಮುಸ್ಲಿಮರು ತಿಲಕ ಇಡಬೇಕಾಗುತ್ತದೆ ಎಂದು ಈ ಹಿಂದೆ ಪ್ರತಿಪಾದಿಸಿದ್ದ ಶಾಸಕ ಈ ಬಾರಿ, ತನಗಲ್ಲದೆ ಬೇರೆ ಯಾರಿಗಾದರೂ ಮತ ಹಾಕುವ ಹಿಂದೂಗಳ ಡಿಎನ್ಎ ಪರೀಕ್ಷೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.
‘‘ಒಂದು ವೇಳೆ ಹಿಂದೂಗಳು ಬೇರೆಯವರಿಗೆ ಮತ ಹಾಕಿದರೆ, ಅವರ ರಕ್ತ ನಾಳಗಳಲ್ಲಿ ‘ಮಿಯಾನ್’ (ಮುಸ್ಲಿರನ್ನು ಅವಹೇಳನಕಾರಿಯಾಗಿ ಉಲ್ಲೇಖಿಸುವ ಪದ) ರಕ್ತ ಹರಿಯುತ್ತಿದೆ ಎಂದರ್ಥ. ಅವರು ದೇಶದ್ರೋಹಿ ಹಾಗೂ ಜೈಚಂದ್ ನ ಅಕ್ರಮ ಸಂತಾನ’’ ಎಂದು 12ನೇ ಶತಮಾನದ ರಾಜ (ಜೈಚಂದ್ ದೇಶದ್ರೋಹಕ್ಕೆ ಪರ್ಯಾಯ ಹೆಸರು)ನನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.
‘‘ಇಷ್ಟೊಂದು ಕಿರುಕುಳದ ಬಳಿಕವೂ ಹಿಂದೂಗಳು ಇನ್ನೊಂದು ಕಡೆ ಹೋದರೆ, ಅವರು ಮುಖ ತೋರಿಸಲು ಅನರ್ಹರು. ನಿಮ್ಮಲ್ಲಿ ಎಷ್ಟು ಮಂದಿ ಜೈಚಂದರು ಇದ್ದಾರೆ?’’ ಎಂದು ಅವರು ಪ್ರಶ್ನಿಸಿದರು. ಜನರ ಮೌನದ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಮಾತು ಮುಂದುವರಿಸಿದ ಅವರು, ‘‘ನೀವು ಅವರ ಹೆಸರು ನೀಡಿ. ಅವರು ಹಿಂದೂಗಳೋ, ಮಿಯಾನರೋ ಎಂದು ನೋಡಲು ನಾನು ಅವರ ರಕ್ತವನ್ನು ಪರೀಕ್ಷಿಸುತ್ತೇನೆ. ನಾನು ಅವರ ಡಿಎನ್ಎ ಪರೀಕ್ಷೆ ಮಾಡುತ್ತೇನೆ’’ ಎಂದು ಅವರು ಹೇಳಿದ್ದಾರೆ. ತಿಲಕದ ಹೇಳಿಕೆ ಕುರಿತಂತೆ ಕಳೆದ ವಾರ ರಾಘವೇಂದ್ರ ಸಿಂಗ್ ವಿರುದ್ಧ ದ್ವೇಷ ಭಾಷಣದ ಪ್ರಕರಣ ದಾಖಲಿಸಲಾಗಿತ್ತು.