ಸಿಡಿದೆದ್ದು ನಿಲ್ಲತೊಡಗಿರುವ ದಲಿತ ದಮನಿತ ಜನಸಮೂಹ
ಕರ್ನಾಟಕದಲ್ಲಿ ಬಹುಸಂಖ್ಯಾತರಾಗಿರುವ ದಲಿತ ಸಮೂಹ ಸಿಡಿದೆದ್ದು ನಿಲ್ಲುವ ಲಕ್ಷಣಗಳು ಕಾಣಲಾರಂಭಿಸಿವೆ. ಇದು ಅತ್ಯಗತ್ಯ ಹಾಗೂ ಆಶಾದಾಯಕ ವಿಚಾರ. ಮೊನ್ನೆ ದಲಿತ ಸಮೂಹ ನ್ಯಾಯಾಧೀಶರೊಬ್ಬರು ಅಂಬೇಡ್ಕರ್‌ರಿಗೆ ಮಾಡಿದ ಅವಮಾನದ ಹಿನ್ನೆಲೆ ಇಟ್ಟುಕೊಂಡು ಪ್ರತಿಭಟನೆ ಹಮ್ಮಿಕೊಂಡಿದ್ದರೂ ಆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಜನಸಮೂಹ ಕೇವಲ ಆ ಘಟನೆಗೆ ಸೀಮಿತವಾಗಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ ಎನ್ನುವಂತಿಲ್ಲ. ತಮ್ಮ ಮೇಲೆ ನಿರಂತರವಾಗಿ ಹೆಚ್ಚುತ್ತಾ ಸಾಗುತ್ತಿರುವ ದೌರ್ಜನ್ಯ, ಅಪಮಾನಗಳು, ಕಗ್ಗೊಲೆಗಳು, ಅತ್ಯಾಚಾರಗಳು, ಅಸಮಾನತೆಗಳು, ಆಡಳಿತ ವ್ಯವಸ್ಥೆಯ ಅಸಡ್ಡೆಗಳು ಹಾಗೂ ಮೋಸಗಳು ಇವುಗಳೆಲ್ಲದರ ಮೇಲಿನ ತಮ್ಮ ಹೆಪ್ಪುಗಟ್ಟಿದ್ದ ಆಕ್ರೋಶವನ್ನು ಭಾರೀ ಮಟ್ಟದಲ್ಲಿ ಪ್ರದರ್ಶಿಸಿದ್ದಾರೆ.
ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಚಿತ್ರವನ್ನು ಗಣರಾಜ್ಯೋತ್ಸವ ಆಚರಣೆಯ ಸ್ಥಳದಿಂದ ತೆಗೆಸಿ ಅವಮಾನ, ದಲಿತ ಸಮೂಹದ ಮೇಲೆ ನಿರಂತರವಾಗಿ ಹೆಚ್ಚುತ್ತಾ ಹೋಗುತ್ತಿರುವ ಶೋಷಣೆ ದೌರ್ಜನ್ಯ, ಅತ್ಯಾಚಾರಗಳನ್ನು ಪ್ರತಿಭಟಿಸಿ ರಾಜ್ಯಾದ್ಯಂತ ಹೋರಾಟಗಳು ನಡೆಯುತ್ತಿವೆ. ಬೀದರ್ ಜಿಲ್ಲೆಯ ಹುಮ್ನಾಬಾದಿನಲ್ಲಿ ಅಲ್ಲಿನ ತಹಶೀಲ್ದಾರ್ ಪ್ರತಿಭಟನೆಯಲ್ಲಿದ್ದ ದಲಿತ ಸಮೂಹದ ಹಕ್ಕೊತ್ತಾಯ ಪತ್ರ ಪಡೆಯಲು ಸತಾಯಿಸಿ ಅಪಮಾನಿಸಿದ್ದರಿಂದಾಗಿ ಕೆರಳಿದ ದಲಿತ ಸಮೂಹ ತಹಶೀಲ್ದಾರ್ ಕೊಠಡಿಗೆ ನುಗ್ಗಿ, ಮಾತಿನ ಚಕಮಕಿ ನಡೆಸಿ, ಹೊರಗಡೆ ಕರೆದುಕೊಂಡು ಬಂದು, ತಮ್ಮ ಹಕ್ಕೊತ್ತಾಯ ಪತ್ರ ಪಡೆದುಕೊಳ್ಳುವಂತೆ ಮಾಡಿದ ಘಟನೆಯೂ ನಡೆದಿದೆ. ಅದೇ ಕಾರಣ ಹಿಡಿದು ಪ್ರತಿಭಟನೆಯಲ್ಲಿದ್ದ ಹಲವರ ಮೇಲೆ ಹಲವಾರು ದೂರು ದಾಖಲಿಸಿ ಕಾರಾಗೃಹಕ್ಕೆ ತಳ್ಳಿದ್ದೂ ಆಗಿದೆ. ಈ ಪ್ರತಿಭಟನೆಗಳ ಮುಂದುವರಿದ ಭಾಗವಾಗಿ ಇದೇ ಕಳೆದ ಹತ್ತೊಂಬತ್ತರಂದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಲಿತ ಸಮೂಹ ಸಹಸ್ರಾರು ಸಂಖ್ಯೆಯಲ್ಲಿ ಸೇರಿ ತನ್ನ ಭಾರೀ ಪ್ರತಿಭಟನೆಯನ್ನು ದಾಖಲಿಸಿತು. ಈ ಪ್ರತಿಭಟನೆಗಳಲ್ಲಿ ದಲಿತ ಸಮೂಹದ ಎಡಬಲಗಳೆಂದು ಗುರುತಿಸಿಕೊಂಡವರು, ಮುಸ್ಲಿಮ್ ಅಲ್ಪಸಂಖ್ಯಾತರು, ಮಹಿಳೆಯರು ಪಾಲ್ಗೊಂಡಿರುವುದು ಮತ್ತಷ್ಟು ಸ್ಫೂರ್ತಿದಾಯಕ ವಿಚಾರ. ಇದು ಕಳೆದ ಎರಡು ಮೂರು ದಶಕಗಳಲ್ಲೇ ವಿರಳವಾಗಿದ್ದ ವಿದ್ಯಮಾನವಾಗಿದೆ. ಆದರೆ ಮುಖ್ಯವಾಹಿನಿ ಮಾಧ್ಯಮಗಳೆಂದು ಕರೆದುಕೊಂಡಿರುವವರಲ್ಲಿ ಬಹುತೇಕರು ಇದನ್ನು ಸರಿಯಾಗಿ ವರದಿ ಮಾಡದೆ ಹೋಗಿರುವುದಕ್ಕೆ ಅಚ್ಚರಿಪಡುವಂತಹದ್ದೇನೂ ಇಲ್ಲ. ಅವರದ್ದು ಮುಖ್ಯ ವಾಹಿನಿಯಲ್ಲ ಅಲ್ಪವಾಹಿನಿ ಎಂಬುದನ್ನು ಅವರೇ ಸಾಬೀತುಮಾಡಿಕೊಂಡಿದ್ದಾರೆ ಅಷ್ಟೆ.
ಕರ್ನಾಟಕದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ದಲಿತ ಸಮೂಹದ ಸಂಘಟಿತ ಪ್ರತಿಭಟನೆ ನಡೆದಿರುವುದು ಉಡುಪಿ ಚಲೋ, ಗುಡಿಬಂಡೆ ಚಲೋ, ವಿಜಯಪುರದ ದಾನಮ್ಮ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆ, ವಿಜಯಪುರ ಚಲೋಗಳಂತಹ ಕೆಲವನ್ನು ಮಾತ್ರ ಉದಾಹರಿಸಬಹುದೇನೋ.
ಕರ್ನಾಟಕದಲ್ಲಿ ಬಹುಸಂಖ್ಯಾತರಾಗಿರುವ ದಲಿತ ಸಮೂಹ ಸಿಡಿದೆದ್ದು ನಿಲ್ಲುವ ಲಕ್ಷಣಗಳು ಕಾಣಲಾರಂಭಿಸಿವೆ. ಇದು ಅತ್ಯಗತ್ಯ ಹಾಗೂ ಆಶಾದಾಯಕ ವಿಚಾರ. ಮೊನ್ನೆ ದಲಿತ ಸಮೂಹ ನ್ಯಾಯಾಧೀಶರೊಬ್ಬರು ಅಂಬೇಡ್ಕರ್‌ರಿಗೆ ಮಾಡಿದ ಅವಮಾನದ ಹಿನ್ನೆಲೆ ಇಟ್ಟುಕೊಂಡು ಪ್ರತಿಭಟನೆ ಹಮ್ಮಿಕೊಂಡಿದ್ದರೂ ಆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಜನಸಮೂಹ ಕೇವಲ ಆ ಘಟನೆಗೆ ಸೀಮಿತವಾಗಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ ಎನ್ನುವಂತಿಲ್ಲ. ತಮ್ಮ ಮೇಲೆ ನಿರಂತರವಾಗಿ ಹೆಚ್ಚುತ್ತಾ ಸಾಗುತ್ತಿರುವ ದೌರ್ಜನ್ಯ, ಅಪಮಾನಗಳು, ಕಗ್ಗೊಲೆಗಳು, ಅತ್ಯಾಚಾರಗಳು, ಅಸಮಾನತೆಗಳು, ಆಡಳಿತ ವ್ಯವಸ್ಥೆಯ ಅಸಡ್ಡೆಗಳು ಹಾಗೂ ಮೋಸಗಳು ಇವುಗಳೆಲ್ಲದರ ಮೇಲಿನ ತಮ್ಮ ಹೆಪ್ಪುಗಟ್ಟಿದ್ದ ಆಕ್ರೋಶವನ್ನು ಭಾರೀ ಮಟ್ಟದಲ್ಲಿ ಪ್ರದರ್ಶಿಸಿದ್ದಾರೆ. ಬೆಂಗಳೂರಿನಲ್ಲಿ ಮೊನ್ನೆ ನಡೆದ ದಲಿತ ಸಮೂಹದ ಮಹಾ ಪ್ರತಿಭಟನೆ ಅದರ ಪರಿಣಾಮವಾಗಿದೆ. ಈ ಪ್ರತಿಭಟನೆಗೆ ಬಂದವರಲ್ಲಿ ಹೆಚ್ಚಿನವರು ಸ್ವಪ್ರೇರಿತರಾಗಿ ಬಂದವರೇ ಹೊರತು ಯಾರೋ ನಾಯಕರು ಸಂಘಟಿಸಿದ ಕಾರಣಕ್ಕೆ ಬಂದವರಲ್ಲ. ರಾಜ್ಯದ ಮೂಲೆ ಮೂಲೆಗಳಿಂದ ಬಂದು ಈ ಪ್ರತಿಭಟನೆಯಲ್ಲಿ ಜನರು ಪಾಲ್ಗೊಂಡಿದ್ದಾರೆ. ಈ ಪ್ರತಿಭಟನೆಗಾಗಿ ಹಲವರು ಸ್ವಪ್ರೇರಿತರಾಗಿ ಕೆಲಸಮಾಡಿದ್ದಾರೆ. ಅವರಲ್ಲಿ ಹಲವರು ಯಾವುದೇ ಸಂಘಟನೆಗೋ ಪಕ್ಷಕ್ಕೋ ಸೇರಿದವರಲ್ಲ.
ಕರ್ನಾಟಕ ದಲಿತರ ಮೇಲಿನ ಅತ್ಯಾಚಾರ, ದೌರ್ಜನ್ಯಗಳಲ್ಲಿ ದೇಶದಲ್ಲೇ ಒಂದು ದೊಡ್ಡ ಸ್ಥಾನವನ್ನು ಪಡೆದಿರುವ ರಾಜ್ಯ. ದೇಶದ ಇತರೆಡೆಗಳಂತೆ ರಾಜ್ಯದಲ್ಲಿ ದಲಿತ ಸಮೂಹ ತಮ್ಮ ಅಸ್ತಿತ್ವ ಹಾಗೂ ಬದುಕಿಗಾಗಿ ಹತ್ತು ಹಲವು ರೀತಿಗಳಲ್ಲಿ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಲೇ ಬರುತ್ತಿದೆ. ಅದು ಅವರ ಬದುಕಿನ ಪ್ರಧಾನ ಭಾಗವೇ ಆಗಿದೆ. ದಲಿತ ಸಮೂಹದಲ್ಲಿನ ಬಹುಸಂಖ್ಯಾತರು ಸ್ವಂತ ಭೂಮಿ ಹೊಂದಿಲ್ಲ. ಅವರು ವಾಸ ಮಾಡುತ್ತಾ ಇರುವ ಭೂಮಿಗೂ ಹಕ್ಕುಪತ್ರ ಹೊಂದಿಲ್ಲ. ದಲಿತ ಸಮೂಹದಲ್ಲಿನ ಬಹುಸಂಖ್ಯಾತರು ಕೂಲಿಕೆಲಸ, ಜಾಡಮಾಲಿ ಕೆಲಸಗಾರರನ್ನಾಗಿ, ಮಲಹೊರುವವರನ್ನಾಗಿ, ಮ್ಯಾನ್ ಹೋಲ್ ಸ್ವಚ್ಚ ಮಾಡುವವರನ್ನಾಗಿ, ನಗರಸಭೆ, ಪುರಸಭೆಗಳ ಹಂಗಾಮಿ ಕಾರ್ಮಿಕರನ್ನಾಗಿ, ಜೀತಗಾರರು, ನವಜೀತಗಾರರನ್ನಾಗಿ, ಅಲೆಮಾರಿಗಳು ಮೊದಲಾದ ಬದುಕಿನ ಭದ್ರತೆಯೇ ಇಲ್ಲದವರನ್ನಾಗಿಯೇ ಇಡುತ್ತಾ ಬರಲಾಗಿದೆ. ಮ್ಯಾನ್‌ಹೋಲ್‌ಗಳಲ್ಲಿ ವಿಷಗಾಳಿಗೆ ಸಿಲುಕಿ ತಮ್ಮ ಅಮೂಲ್ಯ ಪ್ರಾಣಗಳನ್ನೇ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ದೊಡ್ಡದಿದೆ. ಇದು ತನ್ನನ್ನು ತಾನು ನಾಗರಿಕವೆಂದು ಕರೆದುಕೊಳ್ಳುವ ಸಮಾಜ ಹಾಗೂ ಸರಕಾರಿ ವ್ಯವಸ್ಥೆ ಮಾಡಿಕೊಂಡು ಹಾಗೂ ನೋಡಿಕೊಂಡು ಪಾಲಿಸುತ್ತಿರುವ ಅನಾಗರಿಕತೆಯ ಆಧುನಿಕ ಕ್ರೂರತೆಯೆಂದೇ ಪರಿಗಣಿಸಬೇಕಿದೆ. ಎಪ್ಪತ್ತರ ದಶಕದ ಸಂಘಟಿತ ದಲಿತ ಚಳವಳಿಯ ನಾಯಕತ್ವ ಭ್ರಷ್ಟಗೊಂಡು ರಾಜಕೀಯವಾಗಿ ಹಾಗೂ ನೈತಿಕವಾಗಿ ಅಧಃಪತನ ಹೊಂದಿದ್ದರಿಂದ ದಲಿತ ಸಮೂಹದ ಸಂಘಟಿತ ಶಕ್ತಿ ಕಡಿಮೆಯಾಗಿತ್ತು. ರಾಜಕೀಯ ಅಧಿಕಾರ ಹಿಡಿಯಬೇಕು ಎಂದು ಆಳುವ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ವ್ಯವಸ್ಥೆಯೊಂದಿಗೆ ರಾಜಿಕಬೂಲಿ ನಡೆಸಲು ತೊಡಗಿ ಪುಡಿ ರಾಜಕಾರಣಿಗಳಾಗಿ ಚುನಾವಣಾ ದಾಳಗಳಾಗಿಬಿಟ್ಟರು. ದಲಿತ ಸಮೂಹದ ಹೆಸರಿನಲ್ಲಿ ರಾಜಕೀಯ ಪಕ್ಷಗಳನ್ನು ಕಟ್ಟಿದವರು ಕೂಡ ಪ್ರಾಮಾಣಿಕತೆ ಬದ್ಧತೆಯಿಲ್ಲದೆ ಅವೇ ಆಳುವ ಶಕ್ತಿಗಳ ದಾಳಗಳಾದವು. ಶೋಷಕ ಬ್ರಾಹ್ಮಣಶಾಹಿ ಶಕ್ತಿಗಳೊಂದಿಗೆ ಹಲವರು ನೇರವಾಗಿಯೇ ನಿಂತುಬಿಟ್ಟರು. ಹಲವು ಪಕ್ಷಗಳಲ್ಲಿ ಹಂಚಿ ಹೋಗಿ ಕೆಲವರು ಅಧಿಕಾರ ಸಂಪತ್ತು ಗಳಿಸಿಕೊಂಡರು. ಬಹುಸಂಖ್ಯಾತ ದಲಿತ ಜನಸಾಮಾನ್ಯರಿಂದ ಇವರೆಲ್ಲಾ ದೂರವಾದರು.
ಈ ನಾಯಕತ್ವ ಹಾಗೂ ದಲಿತರಲ್ಲಿನ ಒಂದು ಅನುಕೂಲಿತ ಸ್ತರ ಆಳುವ ವ್ಯವಸ್ಥೆಯೊಂದಿಗೆ ತನ್ನ ತಾಳ ಹಾಕತೊಡಗಿದ್ದನ್ನು, ತಮ್ಮನ್ನು ಅವರ ಸ್ವಾರ್ಥಗಳ ಪೂರೈಕೆಗೆ ಬಳಸಿಕೊಳ್ಳುತ್ತಿದ್ದಾರೆಂಬುದನ್ನು ದಲಿತ ಸಮೂಹ ಅರ್ಥಮಾಡಿಕೊಂಡಿದ್ದು ಸ್ವಲ್ಪತಡವಾಗಿ. ಅದು ನಂತರ ದಲಿತ ಸಮೂಹ ಅನುಭವಿಸುತ್ತಾ ಬಂದ ಭ್ರಮನಿರಸನ ಹಾಗೂ ಅಸಹಾಯಕತೆಗೂ ಕಾರಣವಾಗಿತ್ತು. ಅದರಿಂದಾಗಿ ದಲಿತ ಸಮೂಹದ ಹೋರಾಟಗಳು ವ್ಯಾಪಕತೆ ಪಡೆಯದೆ ಅಲ್ಲಲ್ಲಿ ಬಿಡಿಬಿಡಿಯಾಗಿ ನಡೆಯುವಂತಾಯಿತು. ಹತ್ತು ಹಲವು ನಾಯಕರು ವ್ಯಕ್ತಿಕೇಂದ್ರಿತರಾಗಿ ತಮ್ಮದೇ ಬಣಗಳನ್ನು ಕಟ್ಟಿಕೊಂಡರೂ ಅವರು ಹೋರಾಟಗಳನ್ನು ಸಂಘಟಿಸುತ್ತಾ ಮುಂದುವರಿಯಲಾಗದಂತಹ ಅವಿಶ್ವಾಸವನ್ನು ದಲಿತ ಸಮೂಹದಲ್ಲಿ ಹುಟ್ಟಿಸಿಬಿಟ್ಟಿದ್ದರು. ಅವರು ಪರಸ್ಪರ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡಲಾಗದಂತಹ ಬಾವಿಗಳಲ್ಲಿ ಬಂದಿಗಳಾಗಿಬಿಟ್ಟರು. ಹಾಗಾಗಿ ದಲಿತ ಸಮೂಹದ ನಡುವಿನಿಂದ ಹೊಸ ನಾಯಕತ್ವ ಹುಟ್ಟಲು ದೊಡ್ಡ ತಡೆಗಳುಂಟಾದವು. ಈ ತಡೆಗಳು ಈಗಲೂ ಮುಂದುವರಿದಿವೆ. ಹೊಸ ನಾಯಕತ್ವ ಹುಟ್ಟಿ ಬೆಳೆಯಬೇಕಾಗಿದೆ. ಅದಕ್ಕೆ ದಲಿತ ಸಮೂಹವು ಸಂಘಟಿತ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಮಾತ್ರ ಸಾಧ್ಯವೇ ಹೊರತು ಬೇರೆ ಯಾವುದೇ ಮಾರ್ಗವಿಲ್ಲ. ವೇದಿಕೆಯಲ್ಲಿ ಭಾಷಣ ಮಾಡುವುದು, ಬರಹ ಬರೆಯುವುದರಿಂದ ಮಾತ್ರ ನಾಯಕತ್ವ ಗುಣಗಳು ಬೆಳೆಯುವುದಿಲ್ಲ ಎನ್ನುವುದನ್ನು ಕೂಡ ಗ್ರಹಿಸಬೇಕಾಗಿದೆ.
ಇದರ ಮಧ್ಯೆ ದಲಿತ ಸಮೂಹದ ನಡುವಿನಿಂದ ಹೊಸ ಯುವ ಬರಹಗಾರರು ಇಂದು ದಲಿತ ಸಮೂಹದ ಪರ ನಿಂತು ಪ್ರಾಮಾಣಿಕವಾಗಿ ಚಿಂತಿಸುವ ಪ್ರಯತ್ನ ನಡೆಸುತ್ತಿದ್ದಾರೆ. ತಮ್ಮ ಟೀಕೆ, ತೀಕ್ಷ್ಣ ವಿಮರ್ಶೆಗಳನ್ನು, ವಿಶ್ಲೇಷಣೆ, ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳು ಇನ್ನಿತರ ಮಾಧ್ಯಮಗಳ ಮೂಲಕ ಹೊರಹಾಕುತ್ತಿದ್ದಾರೆ. ಹಲವಾರು ಚರ್ಚೆ, ವಿಚಾರ ವಿನಿಮಯಗಳನ್ನು ನಡೆಸುತ್ತಿದ್ದಾರೆ. ಈ ವಲಯದಲ್ಲಿ ದಲಿತ ಸಮೂಹದ ಬಗ್ಗೆ ದಲಿತ ಹಿನ್ನೆಲೆಯವರು ಮಾತ್ರ ಮಾತನಾಡಿದರೆ, ಹೋರಾಟ ಮಾಡಿದರೆ ಮಾತ್ರ ಸರಿಯಾಗಿರುತ್ತದೆ ಎಂದು ಬಲವಾಗಿ ಪ್ರತಿಪಾದಿಸುತ್ತಾ ಇತರ ಕಾಳಜಿಯುತ ಮನಸ್ಸುಗಳ ಬಗ್ಗೆ ದೊಡ್ಡ ಅನುಮಾನ ಅವಿಶ್ವಾಸಗಳನ್ನು ವ್ಯಕ್ತಪಡಿಸುತ್ತಿರುವ ಅನಾರೋಗ್ಯಕರ ಧೋರಣೆಗಳೂ ಕೂಡ ಇವೆ. ದಲಿತರು ಮಾತ್ರ ಒಗ್ಗೂಡಿದರೆ ತಮ್ಮ ಹಕ್ಕುಗಳು ಹಾಗೂ ವಿಮೋಚನೆಯನ್ನು ಸಾಧಿಸಬಹುದು ಎಂಬ ಸಂಕುಚಿತತೆಗಳೂ ಸಾಕಷ್ಟಿವೆ. ತಕ್ಷಣವೇ ಎಲ್ಲವೂ ಸರಿಯಾಗಬೇಕೆಂಬ ಅಸಾಧ್ಯ ಬಯಕೆಗಳೂ ಸಾಕಷ್ಟಿವೆ. ದಲಿತ ಸಂವೇದನೆಯೆಂದರೆ ದಲಿತ ಹಿನ್ನೆಲೆ ಇದ್ದವರಿಗೆ ಮಾತ್ರ ಸಾಧ್ಯವೆಂಬ ನಿಲುವಿನೊಂದಿಗೆ ಹೊರಟು ಕೊನೆಗದು ಇತರ ಶೋಷಿತ, ಶೂದ್ರ ಸಮುದಾಯಗಳನ್ನು ನಂಬಲಾಗದು ಎಂಬಲ್ಲಿಗೆ ಹೋಗಿ ತಲುಪುತ್ತಿರುವ ಅಪಾಯಕಾರಿ ಸಂಕುಚಿತತೆಗಳು ಸಾಕಷ್ಟು ಬಲವಾಗಿಯೇ ಕೆಲಸ ಮಾಡುತ್ತಿದೆ. ಇದಕ್ಕೆ ದಿನನಿತ್ಯ ಹಲವು ಬಗೆಗಳಲ್ಲಿ ಅನುಭವಿಸುತ್ತಿರುವ ಜಾತೀಯತೆಯ ವಿಷಕೂಪ ಕಾರಣವಾದರೂ ನಮ್ಮ ಸಾಮಾಜಿಕ ಸಂದರ್ಭವನ್ನು ಬಿಟ್ಟು ಆಲೋಚಿಸಿ ಪರಿಹಾರ ಬಯಸುವ ಅಪ್ರಬುದ್ಧತೆ ಪ್ರಧಾನವಾಗಿದೆ. ಅಲ್ಲದೆ ಈ ರೀತಿ ಬರೆಯುವವರಲ್ಲಿ ಜನಸಾಮಾನ್ಯರ ಮಧ್ಯೆ ಹೋಗಿ ಹೋರಾಟಗಳನ್ನು ಸಂಘಟಿಸಿದ ಅನುಭವ ಇರುವವರು ಬಹಳ ಕಡಿಮೆ. ವ್ಯಕ್ತಿಕೇಂದ್ರಿತ ಇಲ್ಲವೇ ಯಾಂತ್ರಿಕ ತಿಳುವಳಿಕೆಗಳೇ ಹೆಚ್ಚು. ಆ ಮಿತಿಗಳಿಂದಾಗಿ ಜನಹೋರಾಟವೊಂದನ್ನು ಕಟ್ಟಿಬೆಳೆಸಲು ಇರಬೇಕಾದ ಮೂಲಭೂತ ವಿಚಾರಗಳ ಬಗ್ಗೆ, ಸಂಘಟನೆಗಳನ್ನು ಹಾಗೂ ಹೋರಾಟಗಳನ್ನು ಮುನ್ನಡೆಸಬೇಕಾದರೆ ಅನುಸರಿಸಬೇಕಾದ ಪ್ರಜಾತಾಂತ್ರಿಕತೆ, ಆಯಾ ಸಂದರ್ಭದಲ್ಲಿ ಪ್ರಧಾನಾಂಶಗಳ ಪರವಾಗಿ ಎಲ್ಲರನ್ನೂ ಅಣಿನೆರೆಸಿಕೊಳ್ಳುವ ಕಾರ್ಯತಂತ್ರ ಇತ್ಯಾದಿಗಳ ಬಗ್ಗೆ ಅಷ್ಟಾಗಿ ತಿಳುವಳಿಕೆಯಿಲ್ಲದೆ ಹೋಗಿದೆ. ಅದಕ್ಕೆ ಪ್ರಧಾನ ಕಾರಣ ತಾತ್ಕಾಲಿಕ ಪ್ರತಿಸ್ಪಂದನೆ ಇಲ್ಲವೇ ನಡೆಯುವ ಹೋರಾಟಗಳಲ್ಲಿ ವ್ಯಕ್ತಿಗಳಾಗಿ ಭಾಗವಹಿಸುವುದು ಮತ್ತು ಜನಸಾಮಾನ್ಯರನ್ನು ಸಂಘಟಿಸುವ, ನಾಯಕತ್ವ ವಹಿಸಿಕೊಳ್ಳುವ ಜವಾಬ್ದಾರಿ ವಹಿಸದೆ ಹೋಗುವುದು ಎನ್ನಬಹುದು. ಯಾರಾದರೂ ಬೇರೆಯವರು ನಾಯಕತ್ವ ವಹಿಸಿ ಕೆಲಸ ಮಾಡಲಿ, ವೇದಿಕೆಯಲ್ಲಿ ನಾವಿರುತ್ತೇವೆ ಎಂಬ ಧೋರಣೆಗಳೂ ಕೂಡ ಮನೆಮಾಡಿವೆ. ಅದೂ ಅಲ್ಲದೆ ದಲಿತ ಚಳವಳಿಯೊಂದು ರಾಜ್ಯವ್ಯಾಪಿಯಾಗಿ ಬೆಳೆದು ನಿಲ್ಲದೇ ಹೋಗಿರುವ ಕಾರಣವೂ ಇದೆ.
ದಲಿತರಲ್ಲಿನ ಶಿಕ್ಷಿತ ವರ್ಗದವರಲ್ಲಿ ಬಹುತೇಕರು ವ್ಯಕ್ತಿಕೇಂದ್ರಿತರಾಗಿ, ನವಬ್ರಾಹ್ಮಣಶಾಹಿಗಳಾಗಿ ಉಳಿದುಬಿಡುತ್ತಿದ್ದಾರೆ. ದಲಿತರ ಮೇಲೆ ದಿನನಿತ್ಯ ನಡೆಯುವ ದಮನ ದೌರ್ಜನ್ಯಗಳ ಬಗ್ಗೆಯಾಗಲೀ, ದಲಿತರಿಗೆ ತಪ್ಪಿಸುತ್ತಿರುವ ಮೀಸಲಾತಿ, ವಿದ್ಯಾರ್ಥಿ ವೇತನ, ವಿದ್ಯಾರ್ಥಿ ವಸತಿನಿಲಯಗಳ ಸೌಲಭ್ಯ, ಆಯವ್ಯಯದಲ್ಲಿ ಸಾಂವಿಧಾನಿಕವಾಗಿರುವ ಹಣಕಾಸು ತೆಗೆದಿರಿಸಿ ದಲಿತ ಸಮೂಹದ ಅಗತ್ಯಗಳಿಗೆ ಬಳಸುವಲ್ಲಿ ಮಾಡುತ್ತಿರುವ ದ್ರೋಹಗಳು ಇನ್ನಿತರ ಮೋಸ ವಂಚನೆಗಳ ಬಗ್ಗೆ ದನಿಯೆತ್ತಿ ಬೀದಿಗಿಳಿಯುವಷ್ಟು ಸ್ಪಂದನೆಗಳು ಹುಟ್ಟಲಾಗದಂತಾಗಿವೆ. ದಲಿತ ವಿದ್ಯಾರ್ಥಿ ಸಮೂಹ ಕೂಡ ಜಡವಾಗಿ ನಿಷ್ಕ್ರಿಯತೆಗೆ ಸಿಲುಕಿದೆ. ಇದು ಕ್ರೂರ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಶಕ್ತಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ.
ಇಂದು ನಡೆಯುತ್ತಿರುವ ಆಳುವ ಶಕ್ತಿಗಳ ಆರ್ಥಿಕ ಹಾಗೂ ಸಾಮಾಜಿಕ ದಾಳಿಗಳ ನೇರ ಪರಿಣಾಮ ಮೊದಲಿಗೆ ದಲಿತ ದಮನಿತರ ಮೇಲೆಯೇ ಆಗುತ್ತಿದೆ. ಅದು ಸರಕಾರಿ ಸಂಸ್ಥೆಗಳ ಕಾರ್ಪೊರೇಟೀಕರಣವಿರಬಹುದು, ಬಿಎಸ್‌ಎನ್‌ಎಲ್, ಎಲ್‌ಐಸಿ, ಬಿಪಿಸಿಎಲ್, ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಂತಹ ಹಣಕಾಸು ಸಂಸ್ಥೆಗಳ ಮಾರಾಟದ ಹೆಸರಿನ ಹಸ್ತಾಂತರಗಳಿರಬಹುದು, ಕಾಂಟ್ರಾಕ್ಟ್ ಫಾರ್ಮಿಂಗ್, ಗುತ್ತಿಗೆಯಾಧಾರಿತ ನೌಕರಿ ಇರಬಹುದು, ಕಾರ್ಪೊರೇಟ್ ಫಾರ್ಮಿಂಗ್, ಶಿಕ್ಷಣ ವ್ಯವಸ್ಥೆಯ ಸಾರಾಸಗಟು ಕಾರ್ಪೊರೇಟೀಕರಣವಿರಬಹುದು, ನೋಟು ಅಮಾನ್ಯ, ಜಿಎಸ್‌ಟಿ ಹೇರಿಕೆಗಳಿರಬಹುದು, ಕೊರೋನ ಹೆಸರಿನ ಲಾಕ್‌ಡೌನ್ ಇನ್ನಿತರ ಹೇರಿಕೆಗಳಿರಬಹುದು.. ಹೀಗೆ ಇವೆಲ್ಲವೂ ಇಡೀ ಸಮಾಜದ ತಳಪಾಯವಾದ ದಲಿತ ದಮನಿತ ಸಮೂಹಗಳ ಬದುಕುಗಳ ಮೇಲೆ ಮಾರಣಾಂತಿಕ ದಾಳಿಗಳಾಗಿ ಪರಿಣಮಿಸುತ್ತಿವೆ. ಆದರೆ ಅದನ್ನು ಹಲವಾರು ತಂತ್ರ ಕುತಂತ್ರಗಳಿಂದ ಮರೆಮಾಚಲಾಗುತ್ತಿದೆ. ಅದಕ್ಕಾಗಿ ಕೋಮುವಾದ, ಜಾತಿವಾದ ಸೇರಿದಂತೆ ಎಲ್ಲಾ ರೀತಿಯ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಕುತಂತ್ರಗಳನ್ನು ಬಳಸಲಾಗುತ್ತಿದೆ. ದಲಿತ ದಮನಿತರನ್ನು ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಎತ್ತಿಕಟ್ಟುವ, ದಲಿತ ಸಮೂಹದಲ್ಲಿನ ಭಿನ್ನತೆಗಳನ್ನು ಬಳಸುತ್ತಾ ಪರಸ್ಪರ ಕಚ್ಚಾಡುವಂತೆ ಮಾಡುವ, ಅಂಬೇಡ್ಕರ್ ಹಾಗೂ ಸಂವಿಧಾನದ ಮೇಲೆ ದಾಳಿ ನಡೆಸುವ, ಅಂಬೇಡ್ಕರ್‌ರ ವಿಚಾರಗಳನ್ನು ತಿರುಚಿ ಪ್ರಚಾರ... ಹೀಗೆಲ್ಲಾ ಮಾಡುತ್ತಾ ದಲಿತ ದಮನಿತ ಇನ್ನಿತರ ಶೋಷಿತ ಸಮುದಾಯಗಳ ಗಮನವನ್ನು ಬೇರೆಡೆಗೆ ಸೆಳೆದು ಅವರನ್ನು ಮುಳುಗಿಸುವ ಪ್ರಯತ್ನಗಳನ್ನು ಬಿರುಸಾಗಿ ಮಾಡಲಾಗುತ್ತಿದೆ. ಜೊತೆಗೆ ದಲಿತ ಸಮೂಹದ ಅಸ್ಮಿತೆಗಳನ್ನು ನಾಶ ಮಾಡುವ, ಸಂಘಟಿತರಾಗುವ ಶಕ್ತಿಯನ್ನು ಚೂರು ಮಾಡುವ ಹುನ್ನಾರವೂ ಇವುಗಳ ಹಿಂದೆ ಇವೆ. ಈಗ ಹುಡುಗಿಯರ ತಲೆಬಟ್ಟೆಯನ್ನು ಕೇಂದ್ರೀಕರಿಸಿ ದಲಿತ ದಮನಿತ ವಿದ್ಯಾರ್ಥಿ ಸಮೂಹವನ್ನು ಮುಸ್ಲಿಮ್ ವಿರೋಧಿಯಾಗಿ ಸ್ಥಾಪಿಸುವ ಪ್ರಯತ್ನಗಳನ್ನು ನಾವು ಈ ಹಿನ್ನೆಲೆಯಲ್ಲೇ ಗಮನಿಸಬಹುದು. ಕರ್ನಾಟಕದಲ್ಲಿ ದಲಿತ ಸಮೂಹ ದೇಶದ ಇತರ ಭಾಗಗಳಲ್ಲಿ ನಡೆದ ದಲಿತರ ಮೇಲಿನ ಕೊಲೆ ಅತ್ಯಾಚಾರಗಳ ವಿರುದ್ಧ, ಭೀಮಾ ಕೋರೆಗಾಂವ್‌ನಂತಹ ಪ್ರತಿಭಟನೆಗಳಿಗೆ ಸ್ಪಂದಿಸಿ ಬೀದಿಗೆ ಇಳಿದು ಪ್ರತಿಭಟನೆ ದಾಖಲಿಸಿದ್ದು ಬಹಳ ವಿರಳವೆಂದೇ ಹೇಳಬಹುದು. ಅಂತಹ ಒಂದು ಜಡತ್ವ ಬೆಳೆದು ಬಿಟ್ಟಿತ್ತು. ಈಗದನ್ನು ಕಳಚುತ್ತಾ ದಲಿತ ಸಮೂಹ ಬೀದಿಗಿಳಿಯತೊಡಗಿದೆ. ದಾನಮ್ಮ ಪ್ರಕರಣದಲ್ಲೂ ರಾಜ್ಯಾದ್ಯಂತ ಪ್ರತಿಭಟನೆಗಳ ರೂಪದಲ್ಲಿ ಇದು ಕಾಣಿಸಿತ್ತು. ಈಗದು ರಾಜ್ಯದ ರಾಜಧಾನಿಯಲ್ಲಿ ದಲಿತ ಶಕ್ತಿಯನ್ನು ಪ್ರದರ್ಶಿಸಿದೆ.
ಆದರೆ ಪ್ರತಿಭಟನೆಯ ಫಲಿತಾಂಶವಾಗಿ ರಾಜ್ಯದ ವಿವಿಧ ಭಾಗಗಳ ದಲಿತಸಮೂಹಗಳು ಚುನಾವಣಾ ರಾಜಕೀಯದ ಹಿತಾಸಕ್ತಿಗಳನ್ನು ಹೊರಗಿಟ್ಟು ಕೇವಲ ಬಹುಸಂಖ್ಯಾತ ದಲಿತ ಮನಿತ, ಮಹಿಳಾ, ಹಿಂದುಳಿದ ಅಲ್ಪಸಂಖ್ಯಾತ ಜನಸಮೂಹದ ಹಿತಾಸಕ್ತಿಗಾಗಿ ಒಂದೆಡೆ ಸೇರುವಂತಹ ಶಾಶ್ವತವಾದ ಪ್ರಜಾತಾಂತ್ರಿಕ ಒಕ್ಕೂಟ ರೀತಿಯ ಸಂಘಟನಾ ರೂಪವೊಂದನ್ನು ರಚಿಸುವ ಅಗತ್ಯವಿದೆ. ದಿಲ್ಲಿಯ ರೈತ ಹೋರಾಟ ರೂಪಿಸಿಕೊಂಡ ಸಂಘಟನಾ ಮಾದರಿ ನಮ್ಮ ಮುಂದೆಯೇ ಇದೆ. ಚುನಾವಣಾ ರಾಜಕೀಯ ಹಿತಾಸಕ್ತಿಗಳು ಇಂತಹ ಸಂಘಟನಾ ರೂಪದ ನಾಯಕತ್ವದ ಭಾಗವಾದರೆ ಅಂತಹ ಸಂಘಟನಾ ರೂಪ ಉಳಿದು ಬೆಳೆಯಲು ಸಾಧ್ಯವಾಗದು ಎಂಬುದು ಈಗಾಗಲೇ ಸಾಬೀತಾಗಿರುವ ವಿಚಾರ. ಒಂದು ವರ್ಷಗಳ ಕಾಲ ನಡೆದ ರೈತ ಹೋರಾಟವೂ ಇದನ್ನು ಸಾಬೀತುಪಡಿಸಿದೆ. ಹಾಗಾಗಿ ಕಾಲಘಟ್ಟಕ್ಕೆ ಬೇಕಾದ ಜವಾಬ್ದಾರಿ, ಎಚ್ಚರಿಕೆ ಹಾಗೂ ಸೂಕ್ಷ್ಮತೆಗಳೊಂದಿಗೆ ಮುಂದಿನ ಸಂಘಟಿತ ನಡೆಗಳಿಗೆ ಪೂರಕವಾಗಿ ಸಂಘಟನಾ ರೂಪವೊಂದರ ರಚನೆ ಅತ್ಯಗತ್ಯವಾಗಿದೆ. ಅದರ ಮೂಲಕ ಒಂದು ಹೊಸ ನಾಯಕತ್ವ ಬೆಳೆದುಬರಲು ಸಾಧ್ಯವಾಗಬಹುದು. ಸಂಘಟಿತವಾಗುವುದೊಂದೇ ದಲಿತ ದಮನಿತ ಜನಸಮೂಹದ ರಕ್ಷಣೆಗೆ ಇರುವ ಏಕೈಕ ದಾರಿ. ಬೇರೆ ದಾರಿ ಇಲ್ಲ.
ಮಿಂಚಂಚೆ: nandakumarnandana67@gmail.com