×
Ad

ನೀಲಿ ಧ್ವಜದ ಹಿಂದೆ...

Update: 2022-02-22 00:02 IST

ನೀಲಿ ಬಣ್ಣ ಅಥವಾ ನೀಲಿ ಬಣ್ಣದ ಧ್ವಜ ಇಂದು ದಲಿತ ಅಸ್ಮಿತೆಯ ಅವಿಭಾಜ್ಯ ಅಂಗವಾಗಿದೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೆ, ಗುಜರಾತ್‌ನಿಂದ ಹಿಡಿದು ಪ.ಬಂಗಾಳದವರೆಗೆ ನೀಲಿ ಬಣ್ಣ ಶೋಷಿತ ವರ್ಗದ ಜನರ ಹೆಗ್ಗುರುತು ಆಗಿದೆ. ನೀಲಿ ಬಣ್ಣವನ್ನು, ಆ ಬಟ್ಟೆಯನ್ನು, ಧ್ವಜವನ್ನು ದಲಿತರು ಗೌರವಿಸುತ್ತಾರೆ, ತಮ್ಮ ಸಂಕೇತವಾಗಿ ನಿರ್ಭೀತಿಯಿಂದ ಹೇಳಿಕೊಳ್ಳುತ್ತಾರೆ. ಯಾವ ಮಟ್ಟಿಗೆಂದರೆ ತಮಿಳಿನ ಖ್ಯಾತ ನಿರ್ದೇಶಕ ಪ.ರಂಜಿತ್ ತಮ್ಮ ಚಿತ್ರ ನಿರ್ಮಾಣ ಸಂಸ್ಥೆಗೆ ‘ನೀಲಂ ಪ್ರೊಡಕ್ಷನ್ಸ್’ ಎಂದು ಹೆಸರಿಟ್ಟಿದ್ದಾರೆ. ತಮ್ಮ ನಿರ್ಮಾಣದ ಎಲ್ಲಾ ಚಿತ್ರಗಳಲ್ಲೂ ಅವರು ನೀಲಿ ಬಣ್ಣದ ಹಿರಿಮೆ ಸಾರುತ್ತಾರೆ. ಈ ನಿಟ್ಟಿನಲ್ಲಿ ತಮ್ಮ ನಿರ್ದೇಶನದ ಪ್ರಥಮ ಚಿತ್ರ ‘ಮದ್ರಾಸ್’ನಲ್ಲಿ ಪ.ರಂಜಿತ್ ಚಿತ್ರದಲ್ಲಿ ಬರುವ ಫುಟ್ಬಾಲ್ ಆಡುವ ದೃಶ್ಯದಲ್ಲಿ ನಾಯಕ ಮತ್ತು ಆತನ ತಂಡಕ್ಕೆ ನೀಲಿ ಬಣ್ಣದ ಟೀ ಶರ್ಟ್ ತೊಡಿಸುತ್ತಾರೆ! ಮತ್ತೊಂದು ಉದಾಹರಣೆಯಲ್ಲಿ ಬಾಕ್ಸಿಂಗ್ ಕತೆ ಹೇಳುವ ‘ಸರಪಟ್ಟ ಪರಂಪರೈ’ ಚಿತ್ರದಲ್ಲಿ ರಂಜಿತ್ ಹೀರೋಗೆ ಕ್ಲೈಮ್ಯಾಕ್ಸ್‌ನಲ್ಲಿ ನೀಲಿ ಬಣ್ಣದ ಗ್ಲೌಸ್ ಧರಿಸುತ್ತಾರೆ. ತನ್ಮೂಲಕ ಆ ಹೀರೊಗೆ, ನೀಲಿ ಬಣ್ಣಕ್ಕೆ ರಂಜಿತ್ ಗೆಲುವು ತಂದುಕೊಡುತ್ತಾರೆ. ಇನ್ನು ಪ್ರತಿವರ್ಷ ಅಕ್ಟೋಬರ್‌ನಲ್ಲಿ ಬರುವ ವಿಜಯದಶಮಿ ಸಂದರ್ಭದಲ್ಲಿ ಯಾರಾದರೂ ಮಹಾರಾಷ್ಟ್ರದ ನಾಗಪುರಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ಸ್ಥಳಕ್ಕೆ ಭೇಟಿಕೊಟ್ಟರೆ ಇಡೀ ನಾಗಪುರ ನಗರವೇ ನೀಲಿಮಯವಾಗುವುದನ್ನು ಕಣ್ತುಂಬಿಕೊಳ್ಳಬಹುದು. ಇದೇ ಚಿತ್ರಣವನ್ನು ಡಿಸೆಂಬರ್ 6ಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಪರಿನಿಬ್ಬಾಣ ಸ್ಥಳ ಚೈತ್ಯಭೂಮಿಗೆ ಭೇಟಿ ಕೊಟ್ಟರೂ ನಾವು ಕಾಣಬಹುದು. ಡಿಸೆಂಬರ್ 6 ರಂದು ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ನೆರೆಯುವ ಜನ ಅಂದು ಇಡೀ ಮುಂಬೈ ವಾತಾವರಣವನ್ನು ನೀಲಿ ಬಣ್ಣದ ಧ್ವಜಗಳ ತಾಣವನ್ನಾಗಿಸುತ್ತಾರೆ. ಹಾಗಿದ್ದರೆ ನೀಲಿ, ಈ ಬಣ್ಣದ ಇತಿಹಾಸ? ಮತ್ತೆ ಅದು ಬಾಬಾಸಾಹೇಬ್ ಅಂಬೇಡ್ಕರರ ಬದುಕಿಗೆ ತೆರಳುತ್ತದೆ. 1936ರ ಆಗಸ್ಟ್ ತಿಂಗಳಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಸ್ಥಾಪಿಸುವ ಅಂಬೇಡ್ಕರ್ ತಮ್ಮ ಪಕ್ಷದ ಧ್ವಜವಾಗಿ ನೀಲಿ ಬಣ್ಣವನ್ನು ಆರಿಸಿಕೊಳ್ಳುತ್ತಾರೆ. ಅಂಬೇಡ್ಕರ್‌ರ ಪಕ್ಷದ ವತಿಯಿಂದ 1937ರಲ್ಲಿ ಬಾಂಬೆ ರಾಜ್ಯಕ್ಕೆ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು 17ರಲ್ಲಿ 15ಸ್ಥಾನಗಳನ್ನು ಗೆಲ್ಲುತ್ತಾರೆ. ಈ ಸಂದರ್ಭದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಮುಂಬೈಗೆ ಒಮ್ಮೆ ಚುನಾವಣಾ ಪ್ರಚಾರಕ್ಕೆ ಬಂದಾಗ ಇಡೀ ಮುಂಬೈ ನಗರ ನೀಲಿ ಬಣ್ಣದ ಧ್ವಜಗಳಿಂದ ತುಂಬಿ ತುಳುಕುತ್ತಿತ್ತು ಎಂದು ಅವರ ಜೀವನ ಚರಿತ್ರೆ ಬರೆದಿರುವ ಧನಂಜಯ ಕೀರ್ ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. 1942ರಲ್ಲಿ ಇಂಡಿಪೆಂಡೆಂಟ್ ಲೇಬರ್ ಪಕ್ಷ ವಿಸರ್ಜಿಸಿ ‘ಷೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಶನ್’ ಎಂಬ ಹೊಸ ಪಕ್ಷ ಸ್ಥಾಪಿಸುವ ಅಂಬೇಡ್ಕರ್ ಅದಕ್ಕೂ ನೀಲಿ ಬಣ್ಣದ ಧ್ವಜ ಮತ್ತು ಆನೆ ಗುರುತು ಇಟ್ಟುಕೊಳ್ಳುತ್ತಾರೆ. ಈ ಸಮಯದಲ್ಲಿ ಒಮ್ಮೆ ಉತ್ತರ ಪ್ರದೇಶದ ಆಗ್ರಾಕ್ಕೆ ಚುನಾವಣಾ ಪ್ರಚಾರಕ್ಕೆ ಬರುವ ಅಂಬೇಡ್ಕರ್ ಅಲ್ಲಿಯೂ ನೀಲಿ ಬಣ್ಣದ ಧ್ವಜಗಳ ಭರಪೂರ ಸ್ವಾಗತ ಪಡೆಯುತ್ತಾರೆ.

ಅಂದಹಾಗೆ ಮುಂದೆ, 1956ರಲ್ಲಿ ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ ಎಂಬ ಪಕ್ಷ ಸ್ಥಾಪಿಸುವ ಘೋಷಣೆ ಮಾಡುವ ಅಂಬೇಡ್ಕರ್ ಅವರು ಅದರ ಕಾರ್ಯಾಚರಣೆಗಾಗಿ ಒಂದು ಸಂವಿಧಾನ ಸಿದ್ಧಪಡಿಸಿ ಅಲ್ಲಿಯೂ ನೀಲಿ ಧ್ವಜ ಮತ್ತು ಆನೆ ಗುರುತು ಉಳಿಸಿಕೊಳ್ಳುತ್ತಾರೆ. ಮುಂದೆ ಇದೇ ಪರಂಪರೆಯಲ್ಲಿ ನಡೆಯುವ ಅಂಬೇಡ್ಕರ್‌ರವರ ಅನುಯಾಯಿ ಕಾನ್ಷೀರಾಮ್ 1984ರಲ್ಲಿ ‘ಬಹುಜನ ಸಮಾಜ ಪಕ್ಷ’ ಸ್ಥಾಪಿಸಿದಾಗ ಮತ್ತೆ ಅದೇ ನೀಲಿ ಬಣ್ಣದ ಧ್ವಜ ಮತ್ತು ಆನೆ ಗುರುತನ್ನು ಗುರುತಾಗಿಸಿ ಬಾಬಾಸಾಹೇಬರ ಚರಿತ್ರೆಯನ್ನು ಮುಂದುವರಿಸುತ್ತಾರೆ, ನೀಲಿ ಹೋರಾಟದ ಚಕ್ರ ಮುಂದೆ ಎಳೆಯುತ್ತಾರೆ.


 ಇದು ನೀಲಿ ಬಣ್ಣದ ಇತಿಹಾಸ. ಈ ಇತಿಹಾಸಕ್ಕೆ ಕಾರಣಕರ್ತರು ಬಾಬಾಸಾಹೇಬ್ ಅಂಬೇಡ್ಕರ್‌ರವರು ಎಂಬುದು ಅಷ್ಟೇ ನಿರ್ವಿವಾದದ ಇತಿಹಾಸ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಹೋರಾಟವನ್ನು ಕೇವಲ ಮಹಾರಾಷ್ಟ್ರಕ್ಕೆ ಸೀಮಿತಗೊಳಿಸಿದವರಲ್ಲ, ಇಡೀ ರಾಷ್ಟ್ರಕ್ಕೆ ಅವರು ಅದನ್ನು ವ್ಯಾಪಿಸಿದವರು. ಯಾವ ಮಟ್ಟಿಗೆಂದರೆ ದೂರದ ಬಂಗಾಳದಿಂದ ನೀಲಿ ಧ್ವಜದ ಅಡಿಯಲ್ಲಿ 1946ರಲ್ಲಿ ಅವರು ಸಂವಿಧಾನ ರಚನಾ ಸಭೆಗೂ ಆಯ್ಕೆಯಾಗುತ್ತಾರೆ. ಆದ್ದರಿಂದಲೇ ನೀಲಿ ಬಣ್ಣ ಬಾಬಾಸಾಹೇಬ್ ಅಂಬೇಡ್ಕರ್‌ರ ಜೀವನದ ಅವಿಭಾಜ್ಯ ಅಂಗವೆಂದು ತಿಳಿದು ಬರುತ್ತದೆ. ಅದಿಲ್ಲದ ದಲಿತ ಹೋರಾಟವನ್ನು, ರಾಜಕಾರಣವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ಯಾವ ಮಟ್ಟಿಗೆಂದರೆ ದೇಶಾದ್ಯಂತ ಎಲ್ಲೆಲ್ಲೂ ಈಗ ನೀಲಿ ಕೋಟು ಧರಿಸಿರುವ, ಕೈಯಲ್ಲಿ ಸಂವಿಧಾನ ಹಿಡಿದಿರುವ ಬಾಬಾಸಾಹೇಬ್ ಅಂಬೇಡ್ಕರ್‌ರ ವಿಗ್ರಹಗಳು ವ್ಯಾಪಕವಾಗಿವೆ. ಕೆಲ ದಿನಗಳ ಹಿಂದೆ ಇದಕ್ಕೆ ವಿರುದ್ಧವಾಗಿ ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷವೊಂದು ಅಂಬೇಡ್ಕರರ ವಿಗ್ರಹಕ್ಕೆ ಕೇಸರಿ ಕೋಟು ಧರಿಸಿ ಅವರನ್ನು ಕೇಸರೀಕರಣಗೊಳಿಸಲು ಯತ್ನಿಸಿತು. ಆದರೆ ತಕ್ಷಣ ಎಚ್ಚೆತ್ತ ಅಂಬೇಡ್ಕರ್ ಅನುಯಾಯಿಗಳು ಆ ವಿಗ್ರಹಕ್ಕೆ ನೀಲಿ ಬಣ್ಣ ಬಳಿಸಿ ಮತ್ತೆ ಎಲ್ಲಾ ವಿಗ್ರಹಗಳಂತೆ ಅದನ್ನು ನೀಲಿಮಯಗೊಳಿಸಿದರು! ನೀಲಿ ಬಣ್ಣವನ್ನು ಬಾಬಾಸಾಹೇಬ್ ಅಂಬೇಡ್ಕರ್ ಏಕೆ ಆರಿಸಿಕೊಂಡರು? ಇದಕ್ಕೆ ನಮಗೆ ಸರಿಯಾದ ಸಾಕ್ಷಿ ಸಿಗುವುದಿಲ್ಲವಾದರೂ ನಿವೃತ್ತ ಐಪಿಎಸ್ ಅಧಿಕಾರಿ ಎಸ್. ಆರ್.ಧಾರಾಪುರಿ ‘‘ನೀಲಿ ಬಣ್ಣ ನೀಲಿ ಆಕಾಶವನ್ನು ಸೂಚಿಸುತ್ತದೆ, ನೀಲಿ ಆಕಾಶ ಸಮಾನತೆಯ ಸಂಕೇತ. ಆ ಕಾರಣ ಅಂಬೇಡ್ಕರ್ ಅವರು ನೀಲಿ ಬಣ್ಣ ಆರಿಸಿಕೊಂಡರು’’ ಎಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ಸಮಾನತೆಯ ಸಂಕೇತ ನೀಲಿ ಬಣ್ಣ ಎಂಬುದು ಅಕ್ಷರಶಃ ನಿಚ್ಚಳವಾದ ಕಾರಣ ಸಮಾನತೆಯೇ ಉಸಿರಾಗಿದ್ದ ಬಾಬಾಸಾಹೇಬ್ ಅಂಬೇಡ್ಕರರು ಬಣ್ಣದಲ್ಲೂ ಕೂಡ ಅಂತಹ ಸಮಾನತೆ ಕನಸು ಕಂಡಿದ್ದರು.
ಈ ನಿಟ್ಟಿನಲ್ಲಿ ನೀಲಿ ಬಣ್ಣ ಈಗಲೂ ಸಮಾನತೆಗಾಗಿ ಹಾತೊರೆಯುತ್ತಿರುವ ಈ ದೇಶದ ಶೋಷಿತ ಸಮುದಾಯಗಳ ಆಶಾಕಿರಣದ ಸಂಕೇತವಾಗಿದೆ. ಅದರ ನಿರಂತರ ಹಾರಾಟವು ಸಮಾನತೆಗಾಗಿ ತುಡಿಯುವ ತಳ ಸಮುದಾಯಗಳ ನಿತ್ಯ ಪ್ರೇರಣೆ ಎಂದರೆ ತಪ್ಪಾಗಲಿಕ್ಕಿಲ್ಲ

Writer - ಮೌರ್ಯ ರಹೊಬ

contributor

Editor - ಮೌರ್ಯ ರಹೊಬ

contributor

Similar News