×
Ad

ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರ: ರಕೀಬ್ ಕನ್ನಂಗಾರ್‌ ಆರೋಪ

Update: 2022-02-22 17:58 IST

ಉಡುಪಿ, ಫೆ.22: ಶಿಕ್ಷಣವು ಜೀವನದ ಅವಿಭಾಜ್ಯ ಅಂಗ. ಆದರೆ ಹಿಜಾಬ್ ಕುರಿತ ಹೈಕೋರ್ಟ್‌ನ ಮಧ್ಯಂತರ ಆದೇಶ ತಪ್ಪಾಗಿ ಅರ್ಥೈಸಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ನಡೆಸಲಾಗುತ್ತಿದೆಂದು ರಾಜ್ಯ ಎಸ್ಸೆಸೆಫ್ ಕ್ಯಾಂಪಸ್ ಸಿಂಡಿಕೇಟ್ ಸದಸ್ಯ ಮುಹಮ್ಮದ್ ರಕೀಬ್ ಕನ್ನಂಗಾರ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಪ್ರಕರಣವು ತೀವ್ರ ಸ್ವರೂಪದ ವಿವಾದವಾಗಿ ಮಾರ್ಪಟ್ಟು ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪರೀಕ್ಷೆಗಳಿಗೆ ದಿನ ಎಣಿಸುತ್ತಿರುವ ಸಂದರ್ಭದಲ್ಲಿ ಇಂತಹ ವಿವಾದಗಳು ವಿದ್ಯಾಭ್ಯಾಸಕ್ಕೆ ಕಂಟಕವಾಗಿದ್ದು, ಪ್ರಜಾಸತ್ತಾತ್ಮಕ ದಾರಿಯಲ್ಲಿ ಇದಕ್ಕೆ ಕೊನೆ ಹಾಡಬೇಕಾಗಿದೆ. ಈ ನಡುವೆ ಮಧ್ಯಂತರ ತೀರ್ಪನ್ನು ಅಪಾರ್ಥಕ್ಕೊಳಪಡಿಸಿ ಹಿಜಾಬ್‌ಧಾರಿ ವಿದ್ಯಾರ್ಥಿನಿಯರಿಗೆ ಶಿಕ್ಷಣ ನಿರಾಕರಿಸುತ್ತಿರುವುದು ಖಂಡನೀಯ ಎಂದರು.

ಹೆಣ್ಣುಮಕ್ಕಳು ಶಿರವಸ್ತ್ರ ಧರಿಸುವುದು ಮುಸ್ಲಿಮರ ಧಾರ್ಮಿಕ ಸಂಸ್ಕೃತಿಯಾಗಿದೆ. ಸಮವಸ್ತ್ರದ ನೆಪದಲ್ಲಿ ಏಕಾಏಕಿ ಅದನ್ನು ನಿರಾಕರಿಸುವುದು ಯಾವುದೋ ಷಡ್ಯಂತ್ರದ ಭಾಗವೆಂದೇ ಭಾವಿಸಬೇಕಾಗುತ್ತದೆ. ಸಮವಸ್ತ್ರ ಜಾರಿಯಲ್ಲಿರುವ ಸಂಸ್ಥೆಗಳಲ್ಲಿ ಸಮವಸ್ತ್ರಕ್ಕೆ ಧಕ್ಕೆಯಾಗದಂತೆ ತಲೆವಸ್ತ್ರ ಧರಿಸಲಾಗುತ್ತದೆ. ಪುರಾತನ ಕಾಲದಿಂದಲೂ ಮುಸ್ಲಿಮ್ ಹೆಣ್ಣುಮಕ್ಕಳು ಧರಿಸುತ್ತಿರುವ ಶಿರವಸ್ತ್ರವನ್ನು ತೆಗೆಸುವುದಕ್ಕಾಗಿ ಕೇಸರಿ ಶಾಲನ್ನು ಹೊಸತಾಗಿ ಆರಂಭಿಲಾಗಿದೆ ಎಂದು ಅವರು ದೂರಿದರು.

ಹೈಕೋರ್ಟ್‌ನಲ್ಲಿ ಸಂವಿಧಾನವು ಕೊಡ ಮಾಡಿರುವ ಧಾರ್ಮಿಕ ಸ್ವಾತಂತ್ರ್ಯದ ಪ್ರಕಾರ ಹಿಜಾಬ್ ಧರಿಸಲು ಅನುಮತಿ ದೊರೆಯುವ ವಿಶ್ವಾಸವಿದೆ. ಈ ನಡುವೆ ಕೆಲವು ಸಂಸ್ಥೆಗಳ ಮುಖ್ಯಸ್ಥರು ಹಿಜಾಬನ್ನು ತೆಗೆಸಲು ಒತ್ತಡ ಹೇರುತ್ತಿದ್ದು, ಒಪ್ಪದವರನ್ನು ಹೊರಗೆ ನಿಲ್ಲಿಸುವ ಇಲ್ಲವೇ ಮನೆಗೆ ಕಳಹಿಸುವ ಪ್ರಯತ್ನ ನಡೆದಿದೆ. ಈ ಮೂಲಕ ಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ. ಇಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿರುವ ಯುವಕನೊಬ್ಬನ ಹತ್ಯೆಯನ್ನು ಎಸ್ಸೆಸ್ಸೆಫ್ ಖಂಡಿಸುತ್ತದೆ. ಹತ್ಯೆ, ಹಲ್ಲೆ, ಪ್ರತಿ ಹಿಂಸೆಗಳಿಂದ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅಪರಾಧಿಗಳನ್ನು ಪತ್ತೆ ಹಚ್ಚಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು. ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ ನ್ಯಾಯ ಒದಗಿಸಲು ಸಂಬಂಧ ಪಟ್ಟವರು ಮುಂದಾಗಬೇಕು. ಯಾರು ಕಾನೂನನ್ನು ಕೈಗೆತ್ತಿಕೊಳ್ಳಲು ಹಿಂಸಾಚಾರ ವೆಸಗಲು ಮುಂದಾಗಬಾರದು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಶಾಹುಲ್ ಹಮೀದ್ ನಈಮಿ, ಕ್ಯಾಂಪಸ್ ಕನ್ವೀನರ್ ಹಾರೀಸ್ ಮಾಸ್ಟರ್ ಹೊಸ್ಮಾರ್, ಹೆಲ್ಪ್‌ಡೆಸ್ಕ್ ಕನ್ವೀನರ್ ಇಮ್ರಾನ್ ಬಶೀರ್ ಕಾಪು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News