×
Ad

ಭ್ರಷ್ಟಾಚಾರ ಪ್ರಕರಣ: ಪರಮ್‌ ಬೀರ್‌ ಸಿಂಗ್‌ ವಿರುದ್ಧ ಸದ್ಯ ಯಾವ ಕ್ರಮ ಬೇಡ; ಮಹಾರಾಷ್ಟ್ರ ಪೊಲೀಸರಿಗೆ ಸುಪ್ರೀಂ ಸೂಚನೆ

Update: 2022-02-23 00:03 IST

ಹೊಸದಿಲ್ಲಿ,ಫೆ.21: ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿರುವ ಮಾಜಿ ಮುಂಬೈ ಪೊಲೀಸ್ ಆಯುಕ್ತ ಪರಮ್‌ ಬೀರ್‌ ಸಿಂಗ್‌ ವಿರುದ್ಧ ಸದ್ಯ ಯಾವುದೇ ಕ್ರಮವನ್ನು ಕೈಗೊಳ್ಳದಂತೆ ಸುಪ್ರೀಂಕೋರ್ಟ್ ಮಂಗಳವಾರ ಮಹಾರಾಷ್ಟ್ರ ಪೊಲೀಸರಿಗೆ ಆದೇಶಿಸಿದೆ. 

ಪರಮ್‌ ಬೀರ್‌ ಸಿಂಗ್‌ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್ ಅವರು ಶಾಮೀಲಾಗಿದ್ದಾರೆ ಎನ್ನಲಾದ ಭ್ರಷ್ಟಾಚಾರ ಹಗರಣದ ತನಿಖೆಯು ಗೊಂದಲಮಯವಾಗಿದೆ ಹಾಗೂ ಅತ್ಯಂತ ದುರದೃಷ್ಟಕರವಾದ ವ್ಯವಸ್ಥೆಯಾಗಿರುವುದರಿಂದ ತಾನು ಈ ರೀತಿ ಆದೇಶಿಸಿರುವುದಾಗಿ ಅದು ಹೇಳಿದೆ.
 ಪರಮ್‌ ಬೀರ್‌ ಸಿಂಗ್‌ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ವರ್ಗಾಯಿಸಲಾಗುವುದೇ ಎಂಬುದನ್ನು ತಾನು ಶೀಘ್ರದಲ್ಲೇ ನಿರ್ಧರಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲವೆಂದು ಮಹಾರಾಷ್ಟ್ರ ಸರಕಾರವು ಸುಪ್ರೀಂಕೋರ್ಟ್ ಗೆ ಸ್ಪಷ್ಟಪಡಿಸಿದೆ.


  ಖ್ಯಾತ ಉದ್ಯಮಿ, ರಿಲಾಯನ್ಸ್ ವರಿಷ್ಠ ಮುಖೇಶ್ ಅಂಬಾನಿ ಅವರ ನಿವಾಸದ ಹೊರಗಡೆ ಸ್ಫೋಟಕವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಪರಮ್‌ ಬೀರ್‌ ಸಿಂಗ್‌ ಅವರನ್ನು ಮುಂಬೈ ಪೊಲೀಸ್ ಆಯುಕ್ತ ಹುದ್ದೆಯಿಂದ ತೆರವುಗೊಳಿಸಲಾಗಿತ್ತು. ಆನಂತರ ಅವರನ್ನು ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿ ಅಮಾನತಿನಲ್ಲಿರಿಸಲಾಗಿತ್ತು.
 ತನ್ನ ವಿರುದ್ಧ ರಾಜ್ಯ ಸರಕಾರ ಶಿಸ್ತುಕ್ರಮ ಕೈಗೊಂಡ ಬಳಿಕ ಪರಮ್‌ ಬೀರ್‌ ಸಿಂಗ್‌ ಅವರು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಹಾಗೂ ಎನ್ಸಿಪಿ ನಾಯಕ ಅನಿಲ್ ದೇಶಮುಖ್ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದರು ಹಾಗೂ ಪೊಲೀಸರ ಕರ್ತವ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದರೆಂದು ಆರೋಪಿಸಿದ್ದಾರೆ.


 ಅನಿಲ್ ದೇಶಮುಖ್ ಅವರು ರೆಸ್ಟಾರೆಂಟ್, ಪಬ್, ಬಾರುಗಳು ಮತ್ತು ಹುಕ್ಕಾ ಪಾರ್ಲರುಗಳಿಂದ ಪ್ರತಿ ತಿಂಗಳು 100 ಕೋಟಿ ರೂ. ಹಫ್ತಾ ಸಂಗ್ರಹಿಸಿಕೊಡುವಂತೆ   ಹಲವಾರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರೆಂದು ಪರಮ್‌ ಬೀರ್‌ ಸಿಂಗ್‌ ಆಪಾದಿಸಿದ್ದರು. ಈ ಆರೋಪಗಳನ್ನು ಅನಿಲ್ ದೇಶಮುಖ್ ನಿರಾಕರಿಸಿದ್ದರು. ಆದರೆ ಈ ಬಗ್ಗೆ ಭಾರೀ ವಿವಾದ ತಲೆದೋರಿದ ಹಿನ್ನೆಲೆಯಲ್ಲಿ ಅವರು ತನ್ನ ಹುದ್ದೆಯನ್ನು ತ್ಯಜಿಸಿದ್ದರು.

   ಪ್ರಕರಣದ ಆಲಿಕೆಯನ್ನು ನಡೆಸಿದ ನ್ಯಾಯಾಧೀಶ ಸಂಜಯ್ ಕಿಶನ್ ಕೌಲ್ ಅವರು, ‘‘ಇದೊಂದು ಗೊಂದಲಕರವಾದ ಪರಿಸ್ಥಿತಿಯಾಗಿದೆಯೆಂದು ನಾವು ಮತ್ತೊಮ್ಮೆ ಹೇಳಲಿಚ್ಛಿಸುತ್ತೇವೆ. ಇಲ್ಲಿ ಯಾರೂ ಕೂಡಾ ಕಳಂಕಮುಕ್ತರಾಗಿ ಹೊರಬಂದಿಲ್ಲ. ರಾಜ್ಯದ ಆಡಳಿತ ಹಾಗೂ ಪೊಲೀಸ್ ವ್ಯವಸ್ಥೆಯ ಮೇಲೆ ಜನರು ಇಟ್ಟಿದ್ದ ನಂಬಿಕೆಯನ್ನು ಅಲುಗಾಡಿಸುವಂತಹ ಪ್ರವೃತ್ತಿ ಇದಾಗಿದೆ. ಆದರೆ ಕಾನೂನುಪ್ರಕ್ರಿಯೆ ಮುಂದೆ ಸಾಗಲೇ ಬೇಕಾಗುತ್ತದೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News