ಕೋವಿಡ್ ಲಸಿಕೆ ಪಡೆಯದಿದ್ದರೆ ದಂಡ: ಉಗಾಂಡಾದಲ್ಲಿ ಹೊಸ ಕಾನೂನಿಗೆ ನಿರ್ಧಾರ
ಕಂಪಾಲ: ಕೋವಿಡ್-19 ಸೋಂಕಿನ ವಿರುದ್ಧದ ಲಸಿಕೆ ಪಡೆಯಲು ನಿರಾಕರಿಸುವವರಿಗೆ ದಂಡ ವಿಧಿಸಲು, ದಂಡ ಪಾವತಿಸಲು ಒಪ್ಪದವರನ್ನು ಜೈಲಿಗೆ ಹಾಕಲು ಅವಕಾಶ ಮಾಡಿಕೊಡುವ ಹೊಸ ಕಾನೂನು ಜಾರಿಗೆ ಉಗಾಂಡಾ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ದೇಶದಲ್ಲಿ ಈಗ ಜಾರಿಯಲ್ಲಿರುವ ಸಾರ್ವಜನಿಕ ಆರೋಗ್ಯ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ ಎಂದು ವರದಿಯಾಗಿದೆ.
ಬಳಕೆಯಲ್ಲಿಲ್ಲದ ನಿಬಂಧನೆಗಳನ್ನು ರದ್ದುಗೊಳಿಸಲು, ಅಪರಾಧ ಎಸಗಿದವರಿಗೆ ವಿಧಿಸುವ ದಂಡವನ್ನು ಪರಿಷ್ಕರಿಸಲು ಮತ್ತು ಜನರ ಸುರಕ್ಷತೆಗೆ ತಿದ್ದುಪಡಿ ಅಗತ್ಯವಿದೆ. ದುರ್ಬಲರನ್ನು ರಕ್ಷಿಸಲು ಮಸೂದೆಯಲ್ಲಿ ಲಸಿಕೆ ಮತ್ತು ರೋಗ ನಿರೋಧಕ ವಿಭಾಗವನ್ನು ಸೇರಿಸಲಾಗಿದೆ. ಲಸಿಕೆ ಪಡೆದ ಜನಸಮೂಹದಿಂದ ಸಾಮೂಹಿಕ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಯಾರಿಗೆಲ್ಲಾ ಲಸಿಕೆ ನೀಡುವ ಅಗತ್ಯವಿದೆಯೋ ಅವರೆಲ್ಲರೂ ಲಸಿಕೆ ಪಡೆಯುವಂತೆ ಮಾಡಬೇಕಿದೆ ಎಂದು ಉಗಾಂಡಾದ ಆರೋಗ್ಯ ಸಚಿವೆ ಜೇನ್ ರುತ್ ಅಸೆಂಗ್ ಹೇಳಿದ್ದಾರೆ.
ಪೂರ್ವ ಆಫ್ರಿಕಾದ ಉಗಾಂಡಾದಲ್ಲಿ ಒಂದು ವರ್ಷದ ಹಿಂದೆ ಕೋವಿಡ್ ವಿರುದ್ಧದ ಲಸಿಕಾಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, 45 ಮಿಲಿಯನ್ ಜನಸಂಖ್ಯೆ ಇರುವ ಈ ದೇಶದಲ್ಲಿ ಇದುವರೆಗೆ ಕೇವಲ 16 ಮಿಲಿಯನ್ ಡೋಸ್ ಲಸಿಕೆ ಮಾತ್ರ ಬಳಕೆಯಾಗಿದೆ.
ಜನರಲ್ಲಿ ಲಸಿಕೆ ಪಡೆಯಲು ನಿರಾಸಕ್ತಿ ಇರುವುದನ್ನು ಗಮನಿಸಿ ಕೊರೋನ ವಿರುದ್ಧದ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸುವ ತಿದ್ದುಪಡಿ ಕಾಯ್ದೆಯನ್ನು ಇತ್ತೀಚೆಗೆ ಮಂಡಿಸಲಾಗಿದೆ. ಇದರಂತೆ, ಲಸಿಕೆ ಪಡೆಯಲು ನಿರಾಕರಿಸುವವರಿಗೆ 1,139 ಡಾಲರ್ ದಂಡ ಅಥವಾ 6 ತಿಂಗಳು ಜೈಲು ವಿಧಿಸಬಹುದು ಎಂದು ಸರಕಾರದ ಹೇಳಿಕೆ ತಿಳಿಸಿದೆ.