ಜಮ್ಮು-ಕಾಶ್ಮೀರ:ನ್ಯಾಷನಲ್ ಕಾನ್ಫರೆನ್ಸ್ ತೊರೆದ ಸೈಯದ್ ಮುಷ್ತಾಕ್ ಬುಖಾರಿ
ಶ್ರೀನಗರ,ಫೆ.23: ನ್ಯಾಷನಲ್ ಕಾನ್ಫರೆನ್ಸ್ ನಾಯಕ ಸೈಯದ್ ಮುಷ್ತಾಕ್ ಬುಖಾರಿ ಅವರು ಪಹಾಡಿ ಹೋರಾಟ ಕುರಿತು ನಾಯಕತ್ವದೊಂದಿಗಿನ ‘ಅಸಹನೀಯ ಸಂಬಂಧ ’ ವನ್ನು ಉಲ್ಲೇಖಿಸಿ ಮಂಗಳವಾರ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.
ಜಮ್ಮು-ಕಾಶ್ಮೀರದ ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾಮಾಜಿಕ ಮತ್ತು ಭಾಷಾ ಅಲ್ಪಸಂಖ್ಯಾತ ಪಹಾಡಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನಕ್ಕಾಗಿ ಬುಖಾರಿ ಆಗ್ರಹಿಸುತ್ತಿದ್ದಾರೆ. ಪಹಾಡಿ ಸಮುದಾಯವು ಕಳೆದ 30 ವರ್ಷಗಳಿಂದಲೂ ಎಸ್ಟಿ ಸ್ಥಾನಮಾನಕ್ಕಾಗಿ ಬೇಡಿಕೆಯನ್ನು ಹೊಂದಿದೆ. ಇತ್ತೀಚಿಗೆ ಕ್ಷೇತ್ರ ಪುನರ್ವಿಂಗಡಣೆ ಆಯೋಗವೂ ಪಹಾಡಿ ಸಮುದಾಯಕ್ಕೆ ಎಸ್ಟಿ ಸ್ಥಾನಮಾನಕ್ಕಾಗಿ ಶಿಫಾರಸು ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬುಖಾರಿ,‘ಎಸ್ಟಿ ಸ್ಥಾನಮಾನವನ್ನು ಪಡೆಯಲು ಪಹಾಡಿ ಸಮುದಾಯಕ್ಕೆ ನೆರವಾಗುವ ಯಾವುದೇ ಪಕ್ಷವನ್ನು ಬೆಂಬಲಿಸಲು ನಾನು ಹಿಂಜರಿಯುವುದಿಲ್ಲ. ನನ್ನ ಪಾಲಿಗೆ,ಪಹಾಡಿಗಳಿಗೆ ಎಸ್ಟಿ ಸ್ಥಾನಮಾನದ ಬೇಡಿಕೆ ಕುರಿತು ರಾಜಿ ಸಾಧ್ಯವೇ ಇಲ್ಲ. ನಾವು ಅವರೊಂದಿಗೆ (ಎನ್ಸಿ) 40ಕ್ಕೂ ಹೆಚ್ಚಿನ ವರ್ಷಗಳನ್ನು ಕಳೆದಿದ್ದೇವೆ ಮತ್ತು ಅವರು ನಮ್ಮ ಹೋರಾಟವನ್ನು ನಿರಾಕರಿಸುತ್ತಿದ್ದಾರೆ. ಅವರೊಂದಿಗೆ ನಾವು ಉಳಿಯಲು ಹೇಗೆ ಸಾಧ್ಯ? ಇದು ನನಗೂ ನೋವನ್ನುಂಟು ಮಾಡಿದೆ,ಆದರೆ ನನಗೆ ಬೇರೆ ಆಯ್ಕೆಯಿಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇನೆ ’ಎಂದರು.
ಪಹಾಡಿ ಹೋರಾಟದ ಕುರಿತು ಎನ್ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರೊಂದಿಗೆ ಕಾವೇರಿದ ಚರ್ಚೆಗಳ ಬಳಿಕ ತಾನು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ತಾನು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಅಬ್ದುಲ್ಲಾ ಆರೋಪಿಸಿದ್ದರು ಎಂದರು.
ಬುಖಾರಿ ರಾಜೀನಾಮೆಯು ಎನ್ಸಿಯೊಂದಿಗೆ ಪಹಾಡಿ ಸಮುದಾಯದ ಭ್ರಮನಿರಸನದ ಫಲಶ್ರುತಿಯಾಗಿದೆ. ಇನ್ನಷ್ಟು ಪಹಾಡಿ ನಾಯಕರು ಎನ್ಸಿ,ಕಾಂಗ್ರೆಸ್ ಮತ್ತು ಪಿಡಿಪಿಯನ್ನು ತೊರೆಯಲಿದ್ದಾರೆ ಮತ್ತು ತಮ್ಮದೇ ಆದ ರಾಜಕೀಯ ಸಂಘಟನೆಯನ್ನು ರೂಪಿಸಲಿದ್ದಾರೆ ಎಂದು ಬಿಜೆಪಿ ವಕ್ತಾರ ಸುನಿಲ್ ಸೇಠಿ ಹೇಳಿದರು.
ದೇವೇಂದರ್ ಸಿಂಗ್ ರಾಣಾ,ಸುರ್ಜಿತ್ ಸಿಂಗ್ ಸಲಾಥಿಯಾ ಮತ್ತು ಅನಿಲ ಧರ್ ಅವರಂತಹ ಹಲವಾರು ಗಣ್ಯ ಎನ್ಸಿ ನಾಯಕರು ಇತ್ತೀಚಿಗೆ ಪಕ್ಷವನ್ನು ತೊರೆದಿದ್ದಾರೆ. ರಾಣಾ ಮತ್ತು ಸಲಾಥಿಯಾ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.