×
Ad

ಭಾರತ್ ಪೇ ನಿಯಂತ್ರಕಿ ಮಾಧುರಿ ಜೈನ್ ವಜಾ: ಭಾರೀ ಮೊತ್ತದ ಹಣಕಾಸು ದುರಪಯೋಗದ ಆರೋಪ

Update: 2022-02-23 22:46 IST

ಮುಂಬೈ, ಫೆ. 23: ಭಾರತದ ಅತಿ ದೊಡ್ಡ ವ್ಯಾಪಾರಿ ಸೇವಾ ಹಾಗೂ ಯುಪಿಐ ಪಾವತಿ ಆ್ಯಪ್ ಆಗಿರುವ ಭಾರತ್ ಪೇನ ಸಹಸಂಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಅಶ್ನೀರ್ ಗ್ರೋವರ್ ಅವರ ಪತ್ನಿ ಹಾಗೂ ಕಂಪೆನಿಯ ನಿಯಂತ್ರಕಿ ಮಾಧುರಿ ಜೈನ್ ಅವರ್ನು ಹಣಕಾಸು ನಿಧಿ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ಉಚ್ಚಾಟಿಸಲಾಗಿದೆ ಎಂದು ಮಾಧ್ಯಮ ವರದಿಯೊಂದು ಬುಧವಾರ ತಿಳಿಸಿದೆ.

ಭಾರತ್ ಪೇನಲ್ಲಿ ನಡೆದಿದೆಯೆನ್ನಲಾದ ಹಣಕಾಸು ಅವ್ಯವಹಾರಗಳಿಗೆ ಸಂಬಂಧಿಸಿ ಆಲ್ವಾರೆಝ್ ಆ್ಯಂಡ್ ಮಾರ್ಶಲ್ ಸಂಸ್ಥೆಯು ಪ್ರಾಥಮಿಕ ತನಿಖೆಯನ್ನು ಆರಂಭಿಸಿದಾಗಿನಿಂದ ಮಾಧುರಿ ಜೈನ್ ಅವರ ಚಟುವಟಿಕೆಗಳ ಮೇಲೆ ಕಣ್ಗಾವಲಿರಿಸಲಾಗಿತ್ತು ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಮಾಧುರಿ ಜೈನ್ ಅವರು 2018ರಿಂದ ಭಾರತ್ ಪೇ ಸಂಸ್ಥೆಯ ಹಣಕಾಸು ವ್ಯವಹಾರಗಳ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೇವೆಯಿಂದ ವಜಾಗೊಳಿಸಿರುವ ಆದೇಶಪತ್ರವನ್ನು ಮೇ 22ರಂದು ಮಾಧುರಿ ಜೈನ್ ಅವರಿಗೆ ಕಳುಹಿಸಲಾಗಿದೆ ಎಂದು ಪತ್ರಿಕೆಯ ವರದಿ ತಿಳಿಸಿದೆ.

ಜನವರಿ ತಿಂಗಳಿನಿಂದೀಚೆಗೆ ಅಶ್ನೀರ್ ಗ್ರೋವರ್ ಹಾಗೂ ಮಾಧುರಿ ಜೈನ್ ದಂಪತಿ ರಜೆಯಲ್ಲಿದ್ದಾರೆಂದು ಮೂಲಗಳು ಹೇಳಿವೆ. ಸಂಸ್ಥೆಯ ಸಹಸಂಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ರಾಗಿರುವ ಅಶ್ನೀರ್ ಗ್ರೋವರ್ ತಾನು ಮಾರ್ಚ್ ತಿಂಗಳವರೆಗೆ ಸ್ವಯಂಪ್ರೇರಿತವಾಗಿ ರಜೆಯಲ್ಲಿರುವುದಾಗಿ ತಿಳಿಸಿದ್ದಾರೆ.

ಮಾಧುರಿ ಜೈನ್ ಗ್ರೋವರ್ ಅವರು ಕಂಪೆನಿಯ ಹಣಕಾಸು ನಿಧಿಯನ್ನು ತನ್ನ ವೈಯಕ್ತಿಕ ಸೌಂದರ್ಯ ವರ್ಧಕ ಚಿಕಿತ್ಸೆಗಳಿಗೆ, ದುಬಾರಿ ಇಲೆಕ್ಟ್ರಾನಿಕ್ ಸಾಮಾಗ್ರಿಗಳ ಖರೀದಿಗೆ ಹಾಗೂ ಅಮೆರಿಕ ಮತ್ತು ದುಬೈಗೆ ಕೌಟುಂಬಿಕ ಪ್ರವಾಸಗಳಿಗೆ ತೆರಳಲು ಬಳಸಿದ್ದಾರೆಂದು ಆರೋಪಿಸಲಾಗಿದೆ. ಕಂಪೆನಿಯ ಖಾತೆಯಿಂದಲೇ ತನ್ನ ಖಾಸಗಿ ಸಿಬ್ಬಂದಿಗೆ ವೇತನವನ್ನು ಪಾವತಿಸುತ್ತಿದ್ದು ಮತ್ತು ನಕಲಿ ಇನ್ವಾಯ್ಸಿ (ಸರಕುಪಟ್ಟಿ)ಗಳನ್ನು ಸಲ್ಲಿಸುತ್ತಿದ್ದರು ಎಂದು ವರದಿ ಹೇಳಿದೆ.

ಭಾರತ್ ಪೇ ಸಂಸ್ತೆಯು ಫಿನ್ಟೆಕ್ ಸಂಸ್ಥೆಯಾಗಿದ್ದು, ಕ್ಯೂಆರ್ ಕೋಡ್ಗಳ ಮೂಲಕ ಅಂಗಡಿ ಮಾಲಕರಿಗೆ ಡಿಜಿಟಿಲ್ ವಿಧಾನದಲ್ಲಿ ಹಣಪಾವತಿಸಲು ಅವಕಾಶ ಮಾಡಿಕೊಡುತ್ತದೆ.
ಪೇಟಿಎಂ ಹಾಗೂ ಗೂಗಲ್ ಪೇನಂತಹ ಡಿಜಿಟಲ್ ಪಾವತಿ ಆ್ಯಪ್ಗಳಿಗೆ ಪ್ರಬಲ ಪೈಪೋಟಿ ನೀಡುತ್ತಿರುವ ಭಾರತ್ಪೇ 3 ಶತಕೋಟಿ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದೆ. ಮುಂದಿನ 18 ತಿಂಗಳುಗಳಲ್ಲಿ ಸಾರ್ವಜನಿಕವಾಗಿ ಶೇರುಗಳನ್ನು ಬಿಡುಗಡೆಗೊಳಿಸುವ ಉದ್ದೇಶವನ್ನು ಕೂಡಾ ಅದು ಹೊಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News