ಉಕ್ರೇನ್ ವಿರುದ್ಧ "ಮಿಲಿಟರಿ ಕಾರ್ಯಾಚರಣೆ" ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದರು. ಘೋಷಣೆಯ ಸ್ವಲ್ಪ ಹೊತ್ತಿನಲ್ಲೇ ಉಕ್ರೇನ್ ರಾಜಧಾನಿ ಮತ್ತುಆ ದೇಶದ ಇತರ ಭಾಗಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದವು.
ವಾರಗಳ ತೀವ್ರ ರಾಜತಾಂತ್ರಿಕತೆ ಮತ್ತು ಪಾಶ್ಚಿಮಾತ್ಯ ನಿರ್ಬಂಧಗಳ ಹೇರಿಕೆಯು ಪುಟಿನ್ ಅವರ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ತಡೆಯಲು ವಿಫಲವಾಯಿತು.ಪುಟಿನ್ ಅವರು ಉಕ್ರೇನ್ ಗಡಿಯಲ್ಲಿ 150,000 ಮತ್ತು 200,000 ಸೈನಿಕರನ್ನು ಒಟ್ಟುಗೂಡಿಸಿದರು.
"ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ" ಎಂದು ಪುಟಿನ್ ಮಾಸ್ಕೋದಲ್ಲಿ ಅನಿರೀಕ್ಷಿತ ದೂರದರ್ಶನ ಪ್ರಕಟಣೆಯಲ್ಲಿ ಹೇಳಿದರು.
ಪುಟಿನ್ ಅವರು ಉಕ್ರೇನಿಯನ್ ಸೈನಿಕರಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಕರೆ ನೀಡಿದರು.
ಪುಟಿನ್ ಘೋಷಣೆಯ ಸುಮಾರು 30 ನಿಮಿಷಗಳಲ್ಲಿ ಉಕ್ರೇನ್ ರಾಜಧಾನಿ ಕೈವ್‌ನಲ್ಲಿರುವ ಎಎಫ್ ಪಿ ವರದಿಗಾರನಿಗೆ ಸ್ಫೋಟಗಳ ಶಬ್ದ ಕೇಳಿಸಿದೆ. ಎಎಫ್‌ಪಿ ಪ್ರಕಾರ, ಪೂರ್ವ ನಗರವಾದ ಮರಿಯುಪೋಲ್‌ನಲ್ಲಿಯೂ ಸ್ಫೋಟಗಳು ಕೇಳಿಬಂದವು.
ರಷ್ಯಾದ ಮಿಲಿಟರಿ ಪಡೆಗಳ ಅಪ್ರಚೋದಿತ ದಾಳಿ: ಬೈಡನ್
ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಕ್ರಮವನ್ನು "ರಷ್ಯಾದ ಮಿಲಿಟರಿ ಪಡೆಗಳ ಅಪ್ರಚೋದಿತ ಹಾಗೂ ನ್ಯಾಯಸಮ್ಮತವಲ್ಲದ ದಾಳಿ" ಎಂದು ಕರೆದರು.
"ಜಗತ್ತು ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡುತ್ತದೆ. ರಷ್ಯಾದ ದಾಳಿಯು "ಅನಾಹುತಕಾರಿ ಜೀವಹಾನಿ ಮತ್ತು ಮಾನವ ಸಂಕಟವನ್ನು ಉಂಟುಮಾಡುತ್ತದೆ" ಎಂದು ಬೈಡನ್ ಹೇಳಿದರು.
ರಷ್ಯನ್ನರಿಗೆ ಉಕ್ರೇನ್ ಅಧ್ಯಕ್ಷರಿಂದ ಭಾವನಾತ್ಮಕ ಮನವಿ
ಇದಕ್ಕೂ ಮೊದಲು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ "ಯುರೋಪಿನಲ್ಲಿ ಪ್ರಮುಖ ಯುದ್ಧ" ವನ್ನು ಬೆಂಬಲಿಸದಂತೆ ರಷ್ಯನ್ನರಿಗೆ ಭಾವನಾತ್ಮಕವಾಗಿ ಮನವಿಯನ್ನು ಮಾಡಿದರು.
ರಷ್ಯನ್ ಭಾಷೆಯಲ್ಲಿ ಮಾತನಾಡಿದ ಝೆಲೆನ್ಸ್ಕಿ ರಷ್ಯಾದ ಜನರಿಗೆ ಉಕ್ರೇನ್ ಬಗ್ಗೆ ಸುಳ್ಳು ಹೇಳಲಾಗುತ್ತಿದೆ ಹಾಗೂ ಯುದ್ಧದ ಸಾಧ್ಯತೆಯು "ನಿಮ್ಮ ಮೇಲೆ ಅವಲಂಬಿತವಾಗಿದೆ" ಎಂದು ಹೇಳಿದರು.