×
Ad

ಭಾರತೀಯ ಜೈಲುಗಳಲ್ಲಿರುವ ಪ್ರತಿ ನಾಲ್ವರು ಕೈದಿಗಳಲ್ಲಿ ಮೂವರು ವಿಚಾರಣಾಧೀನರು

Update: 2022-02-24 13:34 IST

ಯುವ ಕೈದಿಗಳು

ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳ ಪೈಕಿ 49 ಶೇಕಡಾ 18 ಮತ್ತು 30 ವರ್ಷಗಳ ನಡುವಿನ ವಯೋ ಗುಂಪಿನವರು. ಆದರೆ ದೋಷಿಗಳ ಪೈಕಿ ಶೇ. 29 ಈ ವಯೋ ಗುಂಪಿಗೆ ಸೇರಿದ್ದಾರೆ. ದೋಷಿಗಳ ಪೈಕಿ 50 ಶೇಕಡಾ 30 ಮತ್ತು 50 ವರ್ಷಗಳ ನಡುವಿನ ವಯೋ ಗುಂಪಿಗೆ ಸೇರಿದವರಾಗಿದ್ದಾರೆ. 10,000ಕ್ಕಿಂತಲೂ ಅಧಿಕ ಕೈದಿಗಳಿರುವ ದೊಡ್ಡ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪೈಕಿ, 30 ವರ್ಷಕ್ಕಿಂತ ಕೆಳಗಿನ ವಿಚಾರಣಾಧೀನ ಕೈದಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ದಿಲ್ಲಿ (ಶೇ. 64.3)ಯಲ್ಲಿದ್ದಾರೆ. ಅಲ್ಲಿ 30 ವರ್ಷಕ್ಕಿಂತ ಕೆಳಗಿನ ದೋಷಿಗಳ ಪ್ರಮಾಣ ಶೇ. 33ರಷ್ಟಿದೆ. ನಂತರದ ಸ್ಥಾನಗಳಲ್ಲಿ ಛತ್ತೀಸ್‌ಗಡ (ಶೇ. 61.5) ಮತ್ತು ಕರ್ನಾಟಕ (ಶೇ. 57.9)ಗಳಿವೆ.

ಭಾರತೀಯ ಜೈಲುಗಳಲ್ಲಿರುವ ಪ್ರತಿ ನಾಲ್ವರು ಕೈದಿಗಳ ಪೈಕಿ ಮೂವರು ವಿಚಾರಣಾಧೀನ ಕೈದಿಗಳು ಎಂಬುದಾಗಿ 2020ರ ವರ್ಷಕ್ಕಾಗಿನ ಸರಕಾರಿ ಅಂಕಿ-ಅಂಶಗಳು ಹೇಳುತ್ತವೆ. 2020 ಇಂತಹ ಅಂಕಿ-ಅಂಶಗಳು ಲಭ್ಯವಿರುವ ಕಡೆಯ ವರ್ಷವಾಗಿದೆ. ಕನಿಷ್ಠ 1995ರ ಬಳಿಕ, ಇದು ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳ ಗರಿಷ್ಠ ಪ್ರಮಾಣವಾಗಿದೆ. 1995 ಇಂತಹ ಅಂಕಿಅಂಶಗಳು ಲಭ್ಯವಿರುವ ಆರಂಭಿಕ ವರ್ಷವಾಗಿದೆ. ‘ಭಾರತೀಯ ಜೈಲುಗಳ ಅಂಕಿಅಂಶಗಳು 2020’ ವರದಿಯ ಪ್ರಕಾರ, ಕೈದಿಗಳ ಒಟ್ಟು ಸಂಖ್ಯೆಯಲ್ಲಿ ಹಿಂದಿನ ವರ್ಷಕ್ಕಿಂತ ಒಂದು ಶೇಕಡಾ ಹೆಚ್ಚಳವಾಗಿದ್ದರೆ, ವಿಚಾರಣಾಧೀನ ಕೈದಿಗಳ ಸಂಖ್ಯೆಯಲ್ಲಿ ಸುಮಾರು ಶೇ.12ರಷ್ಟು ಏರಿಕೆಯಾಗಿದೆ.

 

ಅರ್ಧದಷ್ಟು ವಿಚಾರಣಾಧೀನ ಕೈದಿಗಳು ಜಿಲ್ಲಾ ಜೈಲುಗಳಲ್ಲಿದ್ದಾರೆ. ಆ ಜೈಲುಗಳು ಕೈದಿಗಳಿಂದ ತುಂಬಿತುಳುಕುತ್ತಿವೆ. ಒಂದು ಸಾಮಾನ್ಯ ಜಿಲ್ಲಾ ಜೈಲಿನಲ್ಲಿ ಅದರ ಸಾಮರ್ಥ್ಯದ ಶೇ. 136 ಕೈದಿಗಳಿದ್ದಾರೆ.

 

IndiaSpend 2019ಕ್ಕೆ ಹೋಲಿಸಿದರೆ, 2020ರಲ್ಲಿ ವಿಚಾರಣಾಧೀನ ಕೈದಿಗಳ ಬಿಡುಗಡೆಯು ಶೇ.19.6ರಷ್ಟು ಕಡಿಮೆಯಾಗಿದೆ. ಖುಲಾಸೆಗೊಳ್ಳುವುದು, ಜಾಮೀನಿನ ಮೇಲೆ ಬಿಡುಗಡೆಗೊಳ್ಳುವುದು, ಮೇಲ್ಮನವಿಯ ಮೂಲಕ ಬಿಡುಗಡೆಗೊಳ್ಳುವುದು, ಬೇರೆ ಜೈಲಿಗೆ ವರ್ಗಾವಣೆಗೊಳ್ಳುವುದು ಮತ್ತು ಗಡಿಪಾರು- ಇವು ಕೈದಿಗಳು ಜೈಲಿನಿಂದ ಬಿಡುಗಡೆಯಾಗುವುದಕ್ಕೆ ಕೆಲವು ಕಾರಣಗಳು. ಪರೋಲ್ ಮತ್ತು ಜಾಮೀನಿನ ನಿಯಮಗಳ ಬಗ್ಗೆ ವಿಚಾರಣಾಧೀನ ಕೈದಿಗಳಲ್ಲಿ ತಿಳುವಳಿಕೆಯ ಕೊರತೆಯಿದೆ ಎಂಬುದಾಗಿ 2020 ಸೆಪ್ಟಂಬರ್‌ನಲ್ಲಿ ವರದಿ ಮಾಡಿತ್ತು.

 

ಉದಾಹರಣೆಗೆ; ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್‌ನ 436ಎ ಪರಿಚ್ಛೇದದ ಪ್ರಕಾರ, ಓರ್ವ ವಿಚಾರಣಾಧೀನ ಕೈದಿಯು ತಾನು ಎದುರಿಸುತ್ತಿರುವ ಅಪರಾಧಕ್ಕೆ ನಿಗದಿಯಾಗಿರುವ ಜೈಲು ಶಿಕ್ಷೆಯ ಅರ್ಧಕ್ಕೂ ಹೆಚ್ಚಿನ ಅವಧಿಯನ್ನು ಜೈಲಿನಲ್ಲಿ ಕಳೆದರೆ ಆ ಕೈದಿಯನ್ನು ಬಿಡುಗಡೆ ಮಾಡಬಹುದಾಗಿದೆ. ಆದರೆ, 2020ರಲ್ಲಿ ಈ ರೀತಿಯಾಗಿ ಬಿಡುಗಡೆಗೆ ಅರ್ಹರಾಗಿರುವ ಕೈದಿಗಳ ಪೈಕಿ ಕೇವಲ ಮೂರನೇ ಒಂದು ಭಾಗ ಮಾತ್ರ ಬಿಡುಗಡೆಗೊಂಡಿದ್ದಾರೆ.

 

ತುಳಿತಕ್ಕೊಳಗಾದ ಸಮುದಾಯಗಳಿಗೆ ಸೇರಿದ ಕೈದಿಗಳ ಪ್ರಮಾಣದಲ್ಲಿ ಕಡಿತವಾಗಿಲ್ಲ. 2020ರಲ್ಲಿ ಪ್ರತಿ ಮೂವರು ವಿಚಾರಣಾಧೀನ ಕೈದಿಗಳ ಪೈಕಿ ಇಬ್ಬರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಇತರ ಹಿಂದುಳಿದ ಜಾತಿಗಳಿಗೆ ಸೇರಿದವರಾಗಿದ್ದಾರೆ. ಈ ಸಮುದಾಯಗಳ ಜನರು ಅಕ್ರಮ ಬಂಧನಗಳು ಮತ್ತು ಸುಳ್ಳು ತಪ್ಪೊಪ್ಪಿಗೆ ಹೇಳಿಕೆಗಳನ್ನು ನೀಡುವಂತಹ ಅಕ್ರಮಗಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಕೈದಿಗಳಿಗೆ ಜಾಮೀನು ಪಡೆಯಲು ಬೇಕಾಗುವಷ್ಟು ಸಂಪನ್ಮೂಲಗಳಿರುವುದಿಲ್ಲ ಎನ್ನುವುದನ್ನು ಸೆಪ್ಟಂಬರ್ 2020ರ ವರದಿ ಕಂಡುಕೊಂಡಿದೆ.

 

 

ವಿಚಾರಣಾಧೀನ ಕೈದಿಗಳು

ಹಿಂದಿನ ವರ್ಷಕ್ಕೆ ಹೋಲಿಸಿದರೆ, 2020ರಲ್ಲಿ ಜೈಲಿನಲ್ಲಿರುವ ದೋಷಿಗಳ ಸಂಖ್ಯೆಯಲ್ಲಿ ಶೇ.22 ಕಡಿತವಾಗಿದೆ. ಅದೇ ವೇಳೆ, ವಿಚಾರಣಾಧೀನ ಕೈದಿಗಳ ಸಂಖ್ಯೆಯಲ್ಲಿ ಶೇ. 12ರಷ್ಟು ಹೆಚ್ಚಳವಾಗಿದೆ. ಹಾಗಾಗಿ, 2020ರಲ್ಲಿ ಜೈಲುಗಳಲ್ಲಿರುವ ಒಟ್ಟು ಕೈದಿಗಳ ಪೈಕಿ ವಿಚಾರಣಾಧೀನ ಕೈದಿಗಳ ಪ್ರಮಾಣ 2019ರಲ್ಲಿದ್ದ ಶೇ. 69ರಿಂದ ಶೇ. 76ಕ್ಕೆ ಏರಿದೆ.

10,000ಕ್ಕಿಂತ ಹೆಚ್ಚಿನ ಕೈದಿಗಳಿರುವ ರಾಜ್ಯಗಳಲ್ಲಿ, ವಿಚಾರಣಾಧೀನ ಕೈದಿಗಳ ಪ್ರಮಾಣದಲ್ಲಿ ಗರಿಷ್ಠ ಏರಿಕೆ ಕಂಡಿರುವ ರಾಜ್ಯವೆಂದರೆ ಪಂಜಾಬ್ (ಶೇ. 19) ಮತ್ತು ಹರ್ಯಾಣ (ಶೇ. 17).

ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳ ಪೈಕಿ ಶೇ. 4ರಷ್ಟು ಮಹಿಳೆಯರು (15,167). ಇದು 2019ಕ್ಕಿಂತ (13,550)ಶೇ. 12ರಷ್ಟು ಏರಿಕೆ ಕಂಡಿದೆ.

 

ದಿಲ್ಲಿ ಮತ್ತು ಜಮ್ಮು-ಕಾಶ್ಮೀರ

ಜೈಲುಗಳಲ್ಲಿ ಅತಿ ಹೆಚ್ಚು ವಿಚಾರಣಾಧೀನ ಕೈದಿಗಳ ಪ್ರಮಾಣವು ದಿಲ್ಲಿ ಮತ್ತು ಜಮ್ಮು-ಕಾಶ್ಮೀರದಲ್ಲಿ ವರದಿಯಾಗಿದೆ. ಬಿಹಾರ, ಪಂಜಾಬ್, ಒಡಿಶಾ ಮತ್ತು ಮಹಾರಾಷ್ಟ್ರಗಳು ನಂತರದ ಸ್ಥಾನಗಳಲ್ಲಿವೆ. ಈ ಪೈಕಿ ದಿಲ್ಲಿ, ಜಮ್ಮು ಮತ್ತು ಕಾಶ್ಮೀರ, ಬಿಹಾರ ಮತ್ತು ಮಹಾರಾಷ್ಟ್ರಗಳ ಜೈಲುಗಳಲ್ಲಿ ಕೈದಿಗಳ ಸಂಖ್ಯೆಯು ಜೈಲುಗಳ ಸಾಮರ್ಥ್ಯದ ಶೇ. 100ಕ್ಕಿಂತಲೂ ಹೆಚ್ಚಾಗಿವೆ.

 

ಹಿಂದುಳಿದ ಜಾತಿಗಳ ಕೈದಿಗಳು

ಜೈಲುಗಳಲ್ಲಿರುವ ಪ್ರತಿ ಮೂವರು ವಿಚಾರಣಾಧೀನ ಕೈದಿಗಳ ಪೈಕಿ ಇಬ್ಬರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ಜಾತಿಗಳಿಗೆ ಸೇರಿದವರು ಎನ್ನುವುದನ್ನು ಅಂಕಿಅಂಶಗಳು ತೋರಿಸುತ್ತವೆ. ಐವರು ವಿಚಾರಣಾಧೀನ ಕೈದಿಗಳ ಪೈಕಿ ಇಬ್ಬರು 10ನೇ ತರಗತಿಗಿಂತ ಕಡಿಮೆ ಶಿಕ್ಷಣ ಪಡೆದವರು. ಕಾಲು ಭಾಗಕ್ಕಿಂತಲೂ ಹೆಚ್ಚಿನವರು ಅನಕ್ಷರಸ್ತರು. ಜೈಲುಗಳಲ್ಲಿ ಹಿಂದುಳಿದ ಜಾತಿಗಳಿಗೆ ಸೇರಿದ ಜನರ ಗಣನೀಯ ಉಪಸ್ಥಿತಿಗೆ ಜಾತಿ ಸಂಬಂಧಿ ಪೂರ್ವಾಗ್ರಹಗಳು ಮತ್ತು ಕೆಲವು ಸಮುದಾಯಗಳ ಮೇಲೆ ಪೊಲೀಸರು ಇಟ್ಟಿರುವ ಅತಿ ನಿಗಾ ಮುಂತಾದ ಸಾಮಾಜಿಕ ಅಂಶಗಳು ಕಾರಣವಾಗಿದೆ ಎನ್ನುವುದನ್ನು ಸೆಪ್ಟಂಬರ್ 2020ರ ವರದಿ ಪತ್ತೆಹಚ್ಚಿದೆ.

 

ವಿಚಾರಣಾಧೀನ ಕೈದಿಗಳ ಬಿಡುಗಡೆ

2020ರಲ್ಲಿ, ತಮ್ಮ ಮೇಲೆ ಹೊರಿಸಲಾದ ಅಪರಾಧಗಳಿಗೆ ನಿಗದಿಪಡಿಸಲಾಗಿರುವ ಜೈಲು ಶಿಕ್ಷೆಯ ಅರ್ಧಕ್ಕಿಂತಲೂ ಹೆಚ್ಚಿನ ಅವಧಿಯನ್ನು ಜೈಲುಗಳಲ್ಲಿ ಕಳೆದಿರುವ 1,291 ವಿಚಾರಣಾಧೀನ ಕೈದಿಗಳು ಜೈಲುಗಳಲ್ಲಿದ್ದರು. ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್‌ನ 436ಎ ಪರಿಚ್ಛೇದವು ಇಂತಹ ಕೈದಿಗಳನ್ನು ವೈಯಕ್ತಿಕ ಬಾಂಡ್ ಆಧಾರದಲ್ಲಿ ಬಿಡುಗಡೆಗೊಳಿಸಲು ಅವಕಾಶ ನೀಡುತ್ತದೆ. ಆದರೆ, 2020ರಲ್ಲಿ ಇಂತಹ ಕೇವಲ 442 (ಶೇ. 34) ಕೈದಿಗಳನ್ನು ಬಿಡುಗಡೆಗೊಳಿಸಲಾಯಿತು.

ಜಾಮೀನಿನ ಮೇಲೆ ಬಿಡುಗಡೆಗೊಂಡ ಕೈದಿಗಳ ಸಂಖ್ಯೆಯಲ್ಲೂ 2019ಕ್ಕೆ ಹೋಲಿಸಿದರೆ ಶೇ.18ರಷ್ಟು ಇಳಿಕೆಯಾಗಿದೆ. ಈ ಸಂಖ್ಯೆಯು 2019ರಲ್ಲಿ 15 ಲಕ್ಷ ಇದ್ದರೆ, 2020ರಲ್ಲಿ 12 ಲಕ್ಷ ಆಗಿತ್ತು.

 

ವರ್ಷಗಳ ಕಾಲ ಜೈಲಿನಲ್ಲೇ ಕಳೆದವರು

2020ರಲ್ಲಿ ಸುಮಾರು ಶೇ. 2ರಷ್ಟು ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ 5 ವರ್ಷಕ್ಕಿಂತಲೂ ಹೆಚ್ಚಿನ ಅವಧಿಯನ್ನು ಕಳೆದಿದ್ದರು. ಅದು 2019ರಲ್ಲಿದ್ದ ಶೇ. 1.5ಕ್ಕಿಂತ ಹೆಚ್ಚಾಗಿದೆ. ಒಟ್ಟಾರೆಯಾಗಿ, ಒಟ್ಟು ವಿಚಾರಣಾಧೀನ ಕೈದಿಗಳ ಪೈಕಿ ಶೇ. 29 ಮಂದಿ ಜೈಲಿನಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯನ್ನು ಕಳೆದಿದ್ದರು.

10,000ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಕೈದಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ, ತಮಿಳುನಾಡು, ಬಿಹಾರ ಮತ್ತು ಪಂಜಾಬ್ ರಾಜ್ಯಗಳಲ್ಲಿ ಮಾತ್ರ ಶೇ. 80ಕ್ಕಿಂತಲೂ ಹೆಚ್ಚಿನ ವಿಚಾರಣಾಧೀನ ಕೈದಿಗಳು ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಜೈಲುಗಳಲ್ಲಿದ್ದಾರೆ. ಒಂದು ವರ್ಷಕ್ಕಿಂತಲೂ ಅಧಿಕ ಅವಧಿಯನ್ನು ಜೈಲುಗಳಲ್ಲಿ ಕಳೆದಿರುವ ಅತಿ ಹೆಚ್ಚಿನ ಸಂಖ್ಯೆಯ ವಿಚಾರಣಾಧೀನ ಕೈದಿಗಳು ಮಹಾರಾಷ್ಟ್ರ (ಶೇ. 40)ದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಗುಜರಾತ್ (ಶೇ. 36) ಇದೆ.

Writer - ನಿಲೀನಾ ಸುರೇಶ್

contributor

Editor - ನಿಲೀನಾ ಸುರೇಶ್

contributor

Similar News