×
Ad

ಪ್ರಜಾಪ್ರಭುತ್ವದ ಅಸಲಿ ಪ್ರೇಮಿಗಳನ್ನು ನ್ಯಾಯಾಂಗ ಬಂಧನದಿಂದ ಮುಕ್ತಗೊಳಿಸಿ

Update: 2022-02-25 00:05 IST

ಮಾನ್ಯರೇ,

ಚಲಚಿತ್ರ ಕಲಾವಿದ, ಪ್ರಗತಿಪರ ಹೋರಾಟಗಾರ ಚೇತನ್ ಅಹಿಂಸಾ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಜಗದೀಶ್ ಕೆ.ಎನ್. ಅವರ ನ್ಯಾಯಾಂಗ ಬಂಧನವು ಕನ್ನಡದ ಲೇಖಕ- ಸಾಮಾಜಿಕ ಕಾರ್ಯಕರ್ತನಾದ ನನ್ನನ್ನು ಅಪಾರವಾಗಿ ತಳಮಳಕ್ಕೀಡುಮಾಡಿದೆ. ಕೋಮುವಾದ, ಮತೀಯವಾದ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಲೇಖಕರು, ಚಿಂತಕರು, ಹೋರಾಟಗಾರರು ಮುಂತಾದವರು ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿರುವ ಸದ್ಯದ ವಾತಾವರಣವು ಲೇಖಕನಾದ ನನ್ನನ್ನು ಅಪಾರವಾಗಿ ಕದಡಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವವರು ಬಂಧನಕ್ಕೀಡಾಗುತ್ತಿರುವ ವಿದ್ಯಾಮಾನಗಳು ದಿಗ್ಭ್ರಮೆಯನ್ನುಂಟುಮಾಡಿವೆ ಎಂಬುದನ್ನು ನಾನು ಈ ಪತ್ರದ ಮೂಲಕ ಸರಕಾರ ಹಾಗೂ ಸಾರ್ವಜನಿಕರ ಗಮನಕ್ಕೆ ತರುತ್ತಿದ್ದೇನೆ. ‘ಸರ್ವ ಜನಾಂಗದ ಶಾಂತಿಯ ತೋಟ’ ಎನಿಸಿರುವ ಕರ್ನಾಟಕದ ರಾಜ್ಯ ಸರಕಾರ ಇಂತಹ ಕ್ರಮಗಳಿಗೆ ಮುಂದಾಗಬಾರದೆಂದು ಹಾಗೂ ನಮ್ಮ ಪ್ರಜಾಪ್ರಭುತ್ವವು ನಿಜವಾದ ಅರ್ಥದಲ್ಲಿ ವಿಕಾಸವಾಗಬೇಕಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಂಸ್ಕೃತಿಕ ಬಹುತ್ವದ ಸೌಂದರ್ಯಗಳಿಂದ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿ ವಿನಂತಿಸುತ್ತೇನೆ. ದಲಿತರ, ಆದಿವಾಸಿಗಳ, ಅಲೆಮಾರಿಗಳ ಹಾಗೂ ಎಲ್ಲಾ ಸಾಮಾಜಿಕ ತಳವರ್ಗಗಳ ಆತ್ಮಗೌರವಕ್ಕಾಗಿ ಮತ್ತು ಸಾಮಾಜಿಕ ಹಕ್ಕುಗಳಿಗಾಗಿ ಜನಪರ ಹೋರಾಟಗಳಲ್ಲಿ ಮಹತ್ವದ ಧ್ವನಿಯಾಗಿರುವ ಚೇತನ್ ಅಹಿಂಸಾ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟ ರೂಪಿಸಿ ಆಡಳಿತ ಯಂತ್ರಾಂಗವನ್ನು ಪಾರದರ್ಶಕವಾಗಿರಿಸುವ ಮತ್ತು ಜನಮುಖಿಯಾಗಿಸುವ ಸದುದ್ದೇಶದಿಂದ ಹೋರಾಡುತ್ತಿರುವ ವಕೀಲ ಜಗದೀಶ್ ಇವರು ಸಾಮಾಜಿಕ ವಿಚ್ಛಿದ್ರಕಾರಿ ವ್ಯಕ್ತಿಗಳಲ್ಲ ಅಥವಾ ಯಾವುದೇ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದವರಲ್ಲ. ಇಂತಹ ಹೋರಾಟಗಾರರು ಇಂದು ಧ್ವನಿ ಇರದ ಜನರಿಗೆ ಧ್ವನಿಯಾಗಿದ್ದಾರೆ, ಭರವಸೆಯ ಆಶಾಕಿರಣವಾಗಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳಿಗಾಗಿ ದುಡಿಯುವ ಇಂತಹ ವ್ಯಕ್ತಿತ್ವಗಳನ್ನು ಪ್ರಜ್ಞಾವಂತ ಜನರು ಬೆಂಬಲಿಸುವ ಮೂಲಕ ಲೇಖಕರು, ಚಿಂತಕರು ಹಾಗೂ ಹೋರಾಟಗಾರರು ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲುವಂತಹ ವಾತಾವರಣ ಸೃಷ್ಟಿಯಾಗಬೇಕಿದೆ. ಈ ದಿಕ್ಕಿನಲ್ಲಿ ಸರಕಾರದ ಆಡಳಿತ ಚುಕ್ಕಾಣಿ ಹಿಡಿದಿರುವ ಜನಪ್ರತಿನಿಧಿಗಳ ನಡೆ ಇರಬೇಕೆಂದು ನಾನು ಬಯಸುತ್ತೇನೆ.

ಯಾವುದೇ ರಾಜಕೀಯ ಪಕ್ಷವು ಸರಕಾರ ರಚಿಸಿ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನದ ಶ್ರೇಷ್ಠ ಆಶಯಗಳನ್ನು ಗೌರವಿಸಬೇಕಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸಂವಿಧಾನದ ಶ್ರೇಷ್ಠ ಆಶಯಗಳಲ್ಲೊಂದು. ಪ್ರಗತಿಪರ ಲೇಖಕರು, ಚಿಂತಕರು ಹಾಗೂ ಹೋರಾಟಗಾರರನ್ನು ಅನೇಕ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದ್ದು ಆ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಲಾಗುತ್ತಿದೆಯೆಂಬ ಧ್ವನಿಗಳು ಕೇಳಿಬರುತ್ತಿವೆ. ಕೋಮುವಾದ, ಭ್ರಷ್ಟಾಚಾರ, ಜಾತಿವ್ಯವಸ್ಥೆ, ಧಾರ್ಮಿಕ ಯಾಜಮಾನ್ಯ ಇನ್ನೂ ಮೆರೆಯಬೇಕೆಂದು ಬಯಸುವ ಯಥಾಸ್ಥಿತಿವಾದಿ ಮನಸ್ಸುಗಳಿಂದಾಗಿ ಪ್ರಜಾಪ್ರಭುತ್ವದ ಆಶಯಗಳು ಸಾಕಾರವಾಗುತ್ತಿಲ್ಲ. ಮಹಿಳೆಯರು, ಹಿಂದುಳಿದವರು, ಆದಿವಾಸಿಗಳು, ಅಲೆಮಾರಿಗಳು, ಅಲ್ಪಸಂಖ್ಯಾತರು ಮತ್ತು ಅಸ್ಪೃಶ್ಯ ಸಮುದಾಯಗಳನ್ನು ಇಂದಿಗೂ ಸಮಾನ ಅವಕಾಶಗಳು ದೊರೆಯದಂತೆ, ಸಮಬಾಳು-ಸಮಪಾಲು ಅವರಿಗೆ ಸಿಗದಂತೆ ನಮ್ಮ ಸದ್ಯದ ವ್ಯವಸ್ಥೆ ಸ್ಥಿತಿಸ್ಥಾಪಕತ್ವವನ್ನು ಕಾಯ್ದುಕೊಂಡಿದೆ. ಕರ್ನಾಟಕ ರಾಜ್ಯ ಸರಕಾರವು ಯಾವುದೇ ಬಲಪಂಥೀಯ-ಎಡಪಂಥೀಯ ಮನಸ್ಸುಗಳ ಒತ್ತಡಗಳಿಗೆ ಒಳಗಾಗದೆ ಲೇಖಕರ ಮತ್ತು ಹೋರಾಟಗಾರರ ಮಾನವೀಯ ನಡೆಯ ಮಗ್ಗುಲುಗಳನ್ನು ಮಾತ್ರ ಗಮನಿಸುವುದು ಸೂಕ್ತ. ಹೀಗಾಗಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ನಟ ಚೇತನ್ ಅಹಿಂಸಾ ಮತ್ತು ವಕೀಲ ಜಗದೀಶ್ ಕೆ.ಎನ್. ಇವರ ವಿರುದ್ಧದ ಪೊಲೀಸ್ ಪ್ರಕರಣಗಳನ್ನು ರದ್ದುಪಡಿಸಿ ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಬೇಕಾಗಿ ನಾನು ಕೇಳಿಕೊಳ್ಳುತ್ತಿದ್ದೇನೆ. ಚೇತನ್ ಅಹಿಂಸಾ ಮತ್ತು ಜಗದೀಶ್ ಅವರ ನ್ಯಾಯಾಂಗ ಬಂಧನದಿಂದಾಗಿ ಲೇಖಕರು, ಚಿಂತಕರು, ಬುದ್ಧಿಜೀವಿಗಳು, ಹೋರಾಟಗಾರರು ಹಾಗೂ ಕಲಾವಿದರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಿಕ್ಕಟ್ಟನ್ನು ಅನುಭವಿಸುವಂತಾಗಿದೆ.

ಚೇತನ್ ಅಹಿಂಸಾ ದಮನಿತರ ಪಾಲಿನ ಬಹುದೊಡ್ಡ ಬುದ್ಧಿಜೀವಿ ಹೋರಾಟಗಾರ ಹಾಗೂ ವಕೀಲ ಜಗದೀಶ್ ಅವರು ಭ್ರಷ್ಟಾಚಾರ ಮುಕ್ತ ಆಡಳಿತ ಯಂತ್ರಾಂಗ ಸ್ಥಾಪನೆಗೆ ಅಗತ್ಯವಾದ ಬಹುದೊಡ್ಡ ಹೋರಾಟಗಾರ ಆಗಿದ್ದಾರೆ. ಇವರಿಬ್ಬರೂ ಮಹತ್ವದ ಪ್ರಜಾಪ್ರಭುತ್ವವಾದಿಗಳೂ, ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳೂ ಆಗಿದ್ದಾರೆ. ಪ್ರಜಾಪ್ರಭುತ್ವದ ಮೂಲತತ್ವಗಳಾದ ಸೋದರತೆ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸ್ವಾತಂತ್ರ್ಯದ ಆಶಯಗಳಿಗಾಗಿ ದುಡಿಯುತ್ತಿದ್ದಾರೆ. ಪಟ್ಟಭದ್ರ ವ್ಯವಸ್ಥೆಯನ್ನು ಬದಲಾಯಿಸುವ ದಾರಿಯಲ್ಲಿ ಸಹಜವಾಗಿಯೇ ಇವರ ಚಿಂತನೆಗಳು ಜಾತಿವ್ಯವಸ್ಥೆಯನ್ನು ಬೆಂಬಲಿಸುವವರ ವಿರುದ್ಧ ಹಾಗೂ ಭ್ರಷ್ಟಾಚಾರವನ್ನು ಪೋಷಿಸುವವರ ವಿರುದ್ಧ ಢಾಳಾಗಿ ವ್ಯಕ್ತವಾಗುತ್ತಿದೆ. ಈ ಇಬ್ಬರೂ ಹೋರಾಟಗಾರು ತಮ್ಮ ಹರಿತ ಮಾತು ಮತ್ತು ದಿಟ್ಟ ನಡೆಗಳಿಂದಾಗಿ ಸ್ಥಾಪಿತ ಹಿತಾಸಕ್ತಿಗಳನ್ನು ತೀವ್ರವಾಗಿ ವಿರೋಧಿಸುತ್ತಿರುವುದು ಸುಳ್ಳಲ್ಲ. ಇವರನ್ನು ಬಗ್ಗುಬಡಿಯಲು, ಇವರ ಚಿಂತನೆಗಳನ್ನು ಹತ್ತಿಕ್ಕಲು ಹವಣಿಸುತ್ತಿರುವ ವ್ಯಕ್ತಿಗಳ ಅಥವಾ ಸಂಘಟನೆಗಳ ಒತ್ತಡಗಳಿಗೆ ಗುರಿಯಾಗದೆ ಸರಕಾರವು, ಪ್ರಜಾಪ್ರಭುತ್ವದ ಅಸಲಿ ಪ್ರೇಮಿಗಳನ್ನು ನ್ಯಾಯಾಂಗ ಬಂಧನದಿಂದ ಮುಕ್ತಗೊಳಿಸಿ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಅಗತ್ಯವಿದೆ. ಭ್ರಷ್ಟಾಚಾರ ವಿರೋಧಿಗಳು, ಹಿಂದುಳಿದವರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಅಲೆಮಾರಿಗಳು ಹಾಗೂ ಪ್ರಜಾಪ್ರಭುತ್ವವನ್ನು ಗೌರವಿಸುವ ಎಲ್ಲಾ ಪ್ರಗತಿಪರ ಮನಸ್ಸುಗಳು ನ್ಯಾಯಕ್ಕಾಗಿ ಒತ್ತಾಯಿಸಿ ಶಾಂತಿಯುತವಾಗಿ ಬೀದಿಗಿಳಿಯುವ ಮುನ್ನ ಕರ್ನಾಟಕ ರಾಜ್ಯ ಸರಕಾರವು ಕೂಡಲೇ ಈ ಇಬ್ಬರನ್ನೂ ಬಿಡುಗಡೆ ಮಾಡಬೇಕು ಮತ್ತು ಇವರ ವಿರುದ್ಧ ದಾಖಲಿಸಲಾಗಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕೆಂದು ನಾನು ರಾಜ್ಯ ಸರಕಾರವನ್ನು ಒಬ್ಬ ಲೇಖಕನಾಗಿ ಒತ್ತಾಯಿಸುತ್ತೇನೆ. ಜನಸಾಮಾನ್ಯರ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಸುಂದರ ನೇಯ್ಗೆಯು ಕುರೂಪವಾಗದಿರಲೆಂದು ನಾನು ಆಶಿಸುತ್ತೇನೆ.

Writer - ಡಾ. ವಡ್ಡಗೆರೆ ನಾಗರಾಜಯ್ಯ

contributor

Editor - ಡಾ. ವಡ್ಡಗೆರೆ ನಾಗರಾಜಯ್ಯ

contributor

Similar News