ರಷ್ಯಾ- ಉಕ್ರೇನ್ ಸಂಘರ್ಷ: ಮೊದಲ ದಿನ 137 ಮಂದಿ ಮೃತ್ಯು
ಕೀವ್ (ಉಕ್ರೇನ್): ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆದಿರುವ ಸಂಘರ್ಷದಲ್ಲಿ ಮೊದಲ ದಿನ 137 ಮಂದಿ ಪ್ರಾಣ ತೆತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ. ಗುರುವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆಸಿದ್ದರು. ಇದರಿಂದಾಗಿ ಕನಿಷ್ಠ 40 ಮಂದಿ ಉಕ್ರೇನ್ ಸೈನಿಕರು ಮತ್ತು 10 ಮಂದಿ ನಾಗರಿಕರು ಹತರಾಗಿದ್ದರು.
ರಷ್ಯಾ ವಿರುದ್ಧದ ಹೋರಾಟದಲ್ಲಿ ಉಕ್ರೇನನ್ನು ಏಕಾಂಗಿಯಾಗಿ ಮಾಡಲಾಗಿದೆ ಎಂದು ಅಧ್ಯಕ್ಷ ಝೆಲೆನ್‌ಸ್ಕಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಚರ್ನೋಬಿಲ್ ಅಣು ವಿದ್ಯುತ್ ಘಟಕವನ್ನು ರಷ್ಯಾ ವಶಪಡಿಸಿಕೊಂಡಿದೆ ಎಂದು ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಹೇಳಿದ್ದಾರೆ.
ಉಕ್ರೇನ್‌ನಾದ್ಯಂತ ಹಲವು ಮಿಲಿಟರಿ ಸೌಲಭ್ಯಗಳ ಮೇಲೆ ರಷ್ಯಾ ವಾಯುದಾಳಿ ನಡೆಸಿದ್ದು, ಸೇನಾಪಡೆಗಳು ಉತ್ತರದಿಂದ ದಕ್ಷಿಣ ಮತ್ತು ಪೂರ್ವಕ್ಕೆ ಚಲಿಸಿವೆ. ಈ ಬೆಳವಣಿಗೆಯನ್ನು ಪಾಶ್ಚಿಮಾತ್ಯ ನಾಯಕರು ಖಂಡಿಸಿದ್ದು, ರಷ್ಯಾ ವಿರುದ್ಧ ಕಟ್ಟುನಿಟ್ಟಿನ ನಿರ್ಬಂಧ ಹೇರುವುದಾಗಿ ಎಚ್ಚರಿಸಿದ್ದಾರೆ.
ರಷ್ಯಾ ದಾಳಿಯನ್ನು ಅಮೆರಿಕ ಬಲವಾಗಿ ಖಂಡಿಸಿದ್ದು, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪುಟಿನ್ ತೀರಾ ಕೀಳು ವ್ಯಕ್ತಿ ಎಂದು ಬೈಡೇನ್ ವಾಗ್ದಾಳಿ ನಡೆಸಿದ್ದಾರೆ. ರಷ್ಯಾ ಉಕ್ರೇನ್ ಸರ್ಕಾರವನ್ನು ವಜಾ ಮಾಡಲು ಹುನ್ನಾರ ನಡೆಸಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.
ಮುಚ್ಚಲ್ಪಟ್ಟಿರುವ ಚರ್ನೋನಿಲ್ ಅಣುಸ್ಥಾವರದ ಸಿಬ್ಬಂದಿಯನ್ನು ರಷ್ಯಾ ಪಡೆಗಳು ಒತ್ತೆಯಾಳುಗಳಾಗಿ ಸೆರೆಹಿಡಿದಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದು, ಇದನ್ನು ಶ್ವೇತಭವನ ತೀವ್ರವಾಗಿ ಖಂಡಿಸಿದೆ. ಏತನ್ಮಧ್ಯೆ ರಷ್ಯಾ ದಾಳಿಯನ್ನು ಖಂಡಿಸಲು ಚೀನಾ ನಿರಾಕರಿಸಿದ್ದು, ಉಭಯ ಪಕ್ಷಗಳು ಸಂಯಮ ಪ್ರದರ್ಶಿಸಬೇಕು ಎಂದು ಆಗ್ರಹಿಸಿದೆ.
ರಷ್ಯಾ ದಾಳಿಯನ್ನು ಖಂಡಿಸಿರುವ ಫ್ರಾನ್ಸ್, ನ್ಯಾಟೊ ಅಣ್ವಸ್ತ್ರಗಳನ್ನು ಹೊಂದಿದೆ ಎನ್ನುವುದನ್ನು ರಷ್ಯಾ ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದೆ. ಬ್ರಿಟನ್ ಕೂಡಾ ರಷ್ಯಾ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ದೇಶದೊಳಕ್ಕೆ ರಷ್ಯಾದ ಏರೊಫ್ಲೋಟ್ ವಿಮಾನಗಳ ಪ್ರವೇಶವನ್ನು ನಿಷೇಧಿಸಿದೆ. ಹಣಕಾಸು ವ್ಯವಸ್ಥೆಯಿಂದ ರಷ್ಯಾದ ಬ್ಯಾಂಕ್‌ಗಳನ್ನು ಹೊರಗಿಡಲಾಗುವುದು ಎಂದು ಪ್ರಧಾನಿ ಜಾನ್ಸನ್ ಹೇಳಿದ್ದಾರೆ.