×
Ad

ರಷ್ಯಾ ಆಕ್ರಮಣ: ಉಕ್ರೇನ್‌ನಿಂದ ಪೋಲೆಂಡ್‌ಗೆ ʼಕಾಲ್ನಡಿಗೆʼಯಲ್ಲಿ ಹೊರಟ ಭಾರತೀಯ ವಿದ್ಯಾರ್ಥಿಗಳು

Update: 2022-02-25 18:59 IST
photo: twitter

ಎಲ್‌ವಿವ್:‌ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ಪೋಲೆಂಡ್‌ನತ್ತ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ.

ತಾಯ್ನಾಡಿಗೆ ಮರಳುವುದಕ್ಕಾಗಿ 40 ಮಂದಿ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ತಂಡ ಉಕ್ರೇನ್ ಹಾಗೂ ಪೋಲೆಂಡ್‌ ಗಡಿಯತ್ತ ತೆರಳುತ್ತಿದೆ. ವಿದ್ಯಾರ್ಥಿಗಳನ್ನು ಅವರ ಕಾಲೇಜು ಬಸ್ಸಿನ ಮೂಲಕ ಗಡಿಗೆ 8 ಕಿ.ಮೀ. ಸಮೀಪದವರೆಗೂ ಬಿಡಲಾಗಿತ್ತು. ಅಲ್ಲಿಂದ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

 ಪೊಲಂಡ್‌ ಗಡಿಯಿಂದ 70 ಕಿಮೀ ದೂರದ ಎಲ್‌ವಿವ್ ನಗರದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಉಕ್ರೇನ್‌ ನಲ್ಲಿ ವಾಯುಸಂಚಾರ ನಿಷೇಧಿಸಿರುವುದರಿಂದ ಪೋಲೆಂಡ್‌ ತಲುಪಿ ಅಲ್ಲಿಂದ ಭಾರತಕ್ಕೆ ಮರಳಲು ಪ್ರಯತ್ನಪಡುತ್ತಿದ್ದಾರೆ ಎಂದು ವರದಿಯಾಗಿದೆ.

ವಿದ್ಯಾರ್ಥಿಗಳ ತಂಡ ನಡೆಯುತ್ತಿರುವ ಚಿತ್ರವನ್ನು ವಿದ್ಯಾರ್ಥಿಯೊಬ್ಬ ಹಂಚಿಕೊಂಡಿದ್ದು, ಖಾಲಿ ರಸ್ತೆಯಲ್ಲಿ ಆ ವಿದ್ಯಾರ್ಥಿಗಳು ಮಾತ್ರ ನಡೆಯುತ್ತಿರುವುದು ಕಂಡು ಬರುತ್ತದೆ.

 ಮೂಲಗಳ ಪ್ರಕಾರ, ಉಕ್ರೇನ್‌ನಲ್ಲಿ 16,000 ದಷ್ಟು ಭಾರತೀಯರು ಇದ್ದು, ಅವರಲ್ಲಿ ಬಹುತೇಕರು ವಿದ್ಯಾರ್ಥಿಗಳು. ಉಕ್ರೇನಿನ ವಿವಿಧ ಭಾಗದಲ್ಲಿರುವ ಭಾರತೀಯರು ಸೇರಿದಂತೆ, ಉಕ್ರೇನ್‌ ನಾಗರಿಕರು ರಷ್ಯನ್‌ ಪಡೆ ಸುರಿಸುವ ಬಾಂಬುಗಳಿಂದ ರಕ್ಷಿಸಿಕೊಳ್ಳಲು ಅಂಡರ್‌ ಗ್ರೌಂಡ್‌ ಮೆಟ್ರೋ ಸ್ಟೇಷನ್‌, ಬೇಸ್‌ಮೆಂಟ್‌ಗಳಲ್ಲಿ ರಕ್ಷಣೆ ಪಡೆಯುತ್ತಿರುವ ಚಿತ್ರಣಗಳು ಕಂಡುಬಂದಿದೆ.

 ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA)  ಪಶ್ಚಿಮ ಉಕ್ರೇನ್‌ನ ಎಲ್ವಿವ್ ಮತ್ತು ಚೆರ್ನಿವ್ಟ್ಸಿಯಲ್ಲಿ ಪರಿಹಾರ ಶಿಬಿರಗಳನ್ನು ತೆರೆದಿದೆ. ಪೋಲೆಂಡ್‌ಗೆ ಹೋಗುವ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು MEA ಈ ಶಿಬಿರ ಕಚೇರಿಗಳಿಗೆ ರಷ್ಯನ್ ಮಾತನಾಡುವ ಅಧಿಕಾರಿಗಳನ್ನು ಕಳುಹಿಸಿದೆ.

ಈ ನಡುವೆ ವಿದ್ಯಾರ್ಥಿಗಳ ಗುಂಪೊಂದು ಉಕ್ರೇನ್-ರೊಮೇನಿಯಾ ಗಡಿಯತ್ತ ಹೊರಟಿದೆ. ಉಕ್ರೇನ್‌ನ ನೆರೆಹೊರೆ ದೇಶವನ್ನು ತಲುಪುವಲ್ಲಿ ಯಶಸ್ವಿಯಾಗಿರುವ ಭಾರತೀಯರನ್ನು ಸ್ಥಳಾಂತರಿಸುವ ವಿಮಾನಗಳನ್ನು ಸರ್ಕಾರ ಆಯೋಜಿಸುತ್ತಿದೆ, ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ ಎಂದು ಮೂಲಗಳು ತಿಳಿಸಿದೆ.  

ಉಕ್ರೇನ್‌ ರಾಜಧಾನಿ ಕೈವ್‌ ಮೇಲೆ ರಷ್ಯನ್‌ ಸೈನಿಕರು ದಾಳಿ ನಡೆಸಿದ್ದು, ಉಕ್ರೇನಿಯನ್‌ ಸೈನಿಕರ ಪ್ರತಿರೋಧದ ನಡುವೆಯೂ ಇನ್ನು ಕೆಲವೇ ಗಂಟೆಗಳ ಅವಧಿಯಲ್ಲಿ ಕೈವ್‌ ನಗರ ರಷ್ಯನ್‌ ಸೈನಿಕರ ಪಾಲಾಗಲಿದೆ ಎಂದು ಪಾಶ್ಚಾತ್ಯ ತಜ್ಞರು ವಿಶ್ಲೇಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News