×
Ad

ಹನುಮ ಮಂದಿರ ಸ್ಥಾಪನೆಗಾಗಿ ಕಿಷ್ಕಿಂಧಾ ರಥಯಾತ್ರೆ

Update: 2022-02-26 23:24 IST

ಮಂಗಳೂರು, ಫೆ.26: ನಗರದ ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಿಷ್ಕಿಂಧಾ ವತಿಯಿಂದ ಕಿಷ್ಕಿಂಧೆಯಲ್ಲಿ ಶ್ರೀ ಹನುಮದ್ ಜನ್ಮಭೂಮಿ ಮಂದಿರ ಸ್ಥಾಪನೆಗಾಗಿ ‘ಶ್ರೀ ಕಿಷ್ಕಿಂಧಾ ರಥಯಾತ್ರೆ’ 12 ವರ್ಷಗಳ ಕಾಲ ಭಾರತದಾದ್ಯಂತ ನಡೆಯಲಿದೆ ಎಂದು ಟ್ರಸ್ಟ್‌ನ ಶ್ರೀ ಗೋವಿಂದಾನಂದ ಸರಸ್ವತಿ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ಮಂಗಳೂರಿನ ವಿವಿಧ ಕಡೆ ರಥ ಸಂಚರಿಸಲಿದೆ. ಕರಾವಳಿ ಜಿಲ್ಲೆಗಳಲ್ಲಿ ಒಂದು ತಿಂಗಳ ಕಾಲ, ರಾಜ್ಯದಲ್ಲಿ ಎಂಟು ತಿಂಗಳು, ಸಮಸ್ತ ಭಾರತದಲ್ಲಿ 12 ವರ್ಷ ಈ ರಥಯಾತ್ರೆ ನಡೆಯಲಿದೆ ಎಂದರು.

ಅಯೋಧ್ಯೆ ಮಾದರಿಯಲ್ಲೇ ಕೊಪ್ಪಳ ಜಿಲ್ಲೆಯ ಕಿಷ್ಕಿಂಧೆಯಲ್ಲಿ ಶ್ರೀ ಹನುಮದ್ ಮಂದಿರ ನಿರ್ಮಾಣಕ್ಕಾಗಿ ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆಗೊಂಡಿದೆ. ದೇವಸ್ಥಾನ ನಿರ್ಮಾಣಕ್ಕೆ ಕಿಷ್ಕಿಂಧೆ ಬೆಟ್ಟದ ಸಮೀಪ ಏಳು ಎಕರೆ ಭೂಮಿ ಗುರುತಿಸಲಾಗಿದೆ. ಇದಕ್ಕಾಗಿ ಸರಕಾರದ ಜತೆ ಸಭೆ ನಡೆಸಲಾಗಿದೆ ಎಂದರು.

ಕಿಷ್ಕಂಧೆ ಹನುಮಂತನ ಜನ್ಮಭೂಮಿಯಾಗಿದೆ. ಈ ಬಗ್ಗೆ ಮೂಲ ರಾಮಾಯಣ ಗ್ರಂಥವಾದ ವಾಲ್ಮೀಕಿ ರಾಮಾಯಣದಲ್ಲಿ ಸ್ಪಷ್ಟ ದಾಖಲೆ ಇದೆ. ಅದನ್ನು ಅಧಿಕೃತವಾಗಿ ಪ್ರಕಟಿಸುವಂತೆ ರಾಜ್ಯ ಸರಕಾರಕ್ಕೆ ಎಲ್ಲಾ ದಾಖಲೆ ಸಲ್ಲಿಸಲಾಗಿದೆ. ಆದರೆ ಆಂಧ್ರಪ್ರದೇಶದ ತಿರುಪತಿ ತಿರುಮಲ ಟ್ರಸ್ಟ್ ಯಾವುದೇ ಸಾಕ್ಷಾಧಾರ ಇಲ್ಲದೆ ಹನುಮಂತನ ಜನ್ಮಸ್ಥಳದ ಬಗ್ಗೆ ಗೊಂದಲ ಸೃಷ್ಟಿಸಿದೆ. ಈ ಬಗ್ಗೆ ಟಿಟಿಡಿ ವಿರುದ್ಧ ಆಂಧ್ರ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದು, ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕಿಷ್ಕಿಂಧೆಯೇ ಹನುಮನ ಜನ್ಮಭೂಮಿ ಹೊರತು ತಿರುಪತಿ ಬೆಟ್ಟವಲ್ಲ. ಹನುಮಂತನ ಹಿರಿಮೆ ಸಾರುವ ದೃಷ್ಟಿಯಿಂದ ಪ್ರಪಂಚದಲ್ಲೇ ಅತಿ ಎತ್ತರದ 215 ಮೀಟರ್ ಎತ್ತರದ ವಿಗ್ರಹ ಪ್ರತಿಷ್ಠಾಪಿಸಲು ಯೋಜಿಸಲಾಗಿದೆ. ಪ್ರಸ್ತುತ ಅಂಜನಾದ್ರಿ ಗುಡ್ಡದ ತುದಿಯಲ್ಲಿ ಪುಟ್ಟ ಗುಡಿ ಇದೆ ಎಂದು ಸ್ವಾಮೀಜಿ ಹೇಳಿದರು

ವಿಶ್ವಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಹಿಂದೂ ಯುವಸೇನೆ ಮುಖಂಡ ಭಾಸ್ಕರಚಂದ್ರ ಶೆಟ್ಟಿ, ಸತ್ಯಕೃಷ್ಣ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News