ಜೂನ್ ವೇಳೆಗೆ ಕೋವಿಡ್ ನಾಲ್ಕನೇ ಅಲೆ ಭೀತಿ: ಐಐಟಿ ತಜ್ಞರ ಅಂದಾಜು

Update: 2022-02-27 01:54 GMT

ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕದ ಮೂರನೇ ಅಲೆ ಇಳಿಕೆಯ ಹಾದಿಯಲ್ಲಿದ್ದು, ತಜ್ಞರು ಇದೀಗ ನಾಲ್ಕನೇ ಅಲೆ ಬಗ್ಗೆ ಅಂದಾಜಿಸುತ್ತಿದ್ದಾರೆ. ದೇಶದಲ್ಲಿ ನಾಲ್ಕನೇ ಅಲೆ ಜೂನ್ 22ರ ಸುಮಾರಿಗೆ ಆರಂಭವಾಗಿ, ಅಕ್ಟೋಬರ್ 24ರವರೆಗೂ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ. ಆದರೆ ನಾಲ್ಕನೇ ಅಲೆಯ ತೀವ್ರತೆ ಹೊಸ ಪ್ರಬೇಧ ರೂಪುಗೊಳ್ಳುವ ಮತ್ತು ಬೂಸ್ಟರ್ ಡೋಸ್ ಸೇರಿದಂತೆ ಜನಸಾಮಾನ್ಯರ ಲಸಿಕೆ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಐಐಟಿ ಕಾನ್ಪುರದ ಸಂಶೋಧಕರು ಕೋವಿಡ್-19 ಸೋಂಕಿನ ನಾಲ್ಕನೇ ಅಲೆಯನ್ನು ಅಂದಾಜಿಸಿದ್ದು, ನಾಲ್ಕನೇ ಅಲೆಯ ಸೋಂಕು ಕಾಣಿಸಿಕೊಂಡರೆ ಕನಿಷ್ಠ ನಾಲ್ಕು ತಿಂಗಳವರೆಗೆ ಇರಲಿದೆ. ಈ ಅಂಕಿ ಸಂಖ್ಯೆಗಳ ಅಂದಾಜಿಸುವಿಕೆಯನ್ನು ಮುದ್ರಣಪೂರ್ವ ಸರ್ವರ್ ಮೆಡ್‌ರಕ್ಸಿವ್‌ನಲ್ಲಿ ಫೆಬ್ರುವರಿ 24ರಂದು ಪ್ರಕಟಿಸಲಾಗಿದೆ.

ಸೋಂಕು ಆಗಸ್ಟ್ 15ರಿಂದ 31ರ ನಡುವೆ ಉತ್ತುಂಗ ತಲುಪಲಿದೆ. ದೇಶದಲ್ಲಿ ಕೋವಿಡ್-19 ಅಲೆಯನ್ನು ಐಐಟಿ ಕಾನ್ಪುರ ಅಂದಾಜಿಸುತ್ತಿರುವುದು ಇದು ಮೂರನೇ ಬಾರಿ. ಮೂರನೇ ಅಲೆಯ ಅಂದಾಜು ಬಹುತೇಕ ನಿಖರವಾಗಿದ್ದು, ಕೆಲ ದಿನಗಳಷ್ಟೇ ವ್ಯತ್ಯಯವಾಗಿದೆ.

ಐಐಟಿ ಕಾನ್ಪುರದ ಗಣಿತಶಾಸ್ತ್ರ ಮತ್ತು ಅಂಕಿ ಸಂಖ್ಯೆಗಳ ಶಾಸ್ತ್ರ ವಿಭಾಗದ ಸಬರ ಪರಿಷದ್ ರಾಜೇಶ್‌ಭಾಯ್, ಶಂಕರ್ ಧರ್ ಮತ್ತು ಶಲಭ್ ಅವರು ಈ ಅಧ್ಯಯನ ಕೈಗೊಂಡಿದ್ದರು. ಆರಂಭಿಕ ಕೋವಿಡ್-19 ಅಂಕಿ ಸಂಖ್ಯೆಗಳು ಲಭ್ಯವಾದ 936 ದಿನಗಳ ಬಳಿಕ ಅಂದರೆ ಜೂನ್ 22ಕ್ಕೆ ನಾಲ್ಕನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಅಂದಾಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News