ಉಕ್ರೇನ್ ತೊರೆಯಲು ನಿರಾಕರಿಸಿದ ಹರ್ಯಾಣದ ವೈದ್ಯಕೀಯ ವಿದ್ಯಾರ್ಥಿನಿ; ಕಾರಣವೇನು ಗೊತ್ತೇ?
ಚಂಡಿಗಡ: ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಹರ್ಯಾಣದ ವಿದ್ಯಾರ್ಥಿನಿಯೊಬ್ಬಳು ಯುದ್ಧ ಪೀಡಿತ ದೇಶದಿಂದ ತೆರವುಗೊಳ್ಳುವ ಅವಕಾಶ ಸಿಕ್ಕರೂ ಆ ದೇಶವನ್ನು ತೊರೆಯಲು ನಿರಾಕರಿಸುವ ಮೂಲಕ ಯುದ್ದ ಕಾಲದಲ್ಲಿ ಮಾನವೀಯ ಮೌಲ್ಯಗಳು, ಸಹಾನುಭೂತಿ ಹಾಗೂ ಸಹೋದರಿಯತ್ವವನ್ನು ತೋರಿದ್ದಾರೆ ಎಂದು tribuneindia.com ವರದಿ ಮಾಡಿದೆ.
ವಿದ್ಯಾರ್ಥಿನಿಯು ಪೇಯಿಂಗ್ ಗೆಸ್ಟ್ ಆಗಿ ಉಳಿದುಕೊಂಡಿದ್ದ ಮನೆಯ ಮಾಲಕರು ರಶ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ತನ್ನ ದೇಶಕ್ಕೆ ಸೇವೆ ಸಲ್ಲಿಸಲು ಉಕ್ರೇನಿಯನ್ ಸೈನ್ಯಕ್ಕೆ ಸ್ವಯಂಪ್ರೇರಣೆಯಿಂದ ಸೇರಿದ್ದಾರೆ. ಭಾರತದ ವಿದ್ಯಾರ್ಥಿನಿ ತನ್ನ ಮೂರು ಸಣ್ಣ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಮನೆಯ ಮಾಲಕರ ಪತ್ನಿಗೆ ಬೆಂಬಲವಾಗಿ ನಿಲ್ಲಲು ನಿರ್ಧರಿಸಿದ್ದಾಳೆ ಎಂದು ವರದಿಯಾಗಿದೆ.
“ನಾನು ಬದುಕಬಹುದು ಅಥವಾ ಬದುಕದಿರಬಹುದು, ಆದರೆ ನಾನು ಈ ಮಕ್ಕಳನ್ನು ಹಾಗೂ ಅವರ ತಾಯಿಯನ್ನು ಇಂತಹ ಪರಿಸ್ಥಿತಿಯಲ್ಲಿ ಬಿಡುವುದಿಲ್ಲ” ಎಂದು ಹರ್ಯಾಣದ ಚಾರ್ಖಿ ದಾದ್ರಿ ಜಿಲ್ಲೆಯ ಮೂಲದ ನೇಹಾ ಶಿಕ್ಷಕಿಯಾಗಿರುವ ತನ್ನ ತಾಯಿಗೆ ಹೇಳಿದ್ದಾರೆ.
ಒಂದೆರಡು ವರ್ಷಗಳ ಹಿಂದೆ ಭಾರತೀಯ ಸೇನೆಯಲ್ಲಿದ್ದ ತಂದೆಯನ್ನು ನೇಹಾ ಕಳೆದುಕೊಂಡಿದ್ದರು. ಕಳೆದ ವರ್ಷ ಅವರು ಉಕ್ರೇನ್‌ನ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದರು.
ಸದ್ಯಕ್ಕೆ, ಹರ್ಯಾಣದ ವರ್ಷದ ವಿದ್ಯಾರ್ಥಿನಿಯು ಮನೆಯ ಮಾಲಿಕರ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಬಂಕರ್‌ನಲ್ಲಿ ವಾಸಿಸುತ್ತಿದ್ದಾರೆ.
"ನಾವು ಹೊರಗೆ ಆಗುತ್ತಿರುವ ಸ್ಫೋಟಗಳನ್ನು ಕೇಳುತ್ತಲೇ ಇದ್ದೇವೆ, ಆದರೆ ನಾವು ಇಲ್ಲಿಯವರೆಗೆ ಚೆನ್ನಾಗಿಯೇ ಇದ್ದೇವೆ" ಎಂದು ಅವರು ಇತ್ತೀಚೆಗೆ ಕುಟುಂಬದ ಸ್ನೇಹಿತರಿಗೆ ಹೇಳಿದ್ದರು.
ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ನೇಹಾ ಹಾಸ್ಟೆಲ್ ಸೌಕರ್ಯ ಸಿಗದ ಕಾರಣ ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ನಿರ್ಮಾಣ ಎಂಜಿನಿಯರ್ ವೊಬ್ಬರ ಮನೆಯಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು.
“ನೇಹಾ ಮನೆ ಮಾಲಕರ ಮಕ್ಕಳೊಂದಿಗೆ ನಿಕಟವಾಗಿದ್ದಾಳೆ. ಯುದ್ಧವು ಸನ್ನಿಹಿತವಾಗುತ್ತಿದ್ದಂತೆ ದೇಶವನ್ನು ತೊರೆಯಲು ಆಕೆಗೆ ತಿಳಿಸಲಾಗಿತ್ತು. ಆಕೆಯ ತಾಯಿ ತನ್ನ ಮಗಳ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲು ತೀವ್ರ ಪ್ರಯತ್ನಗಳನ್ನು ಮಾಡಿದ್ದರು. ಅಂತಿಮವಾಗಿ ಬಾಲಕಿಗೆ ರೊಮೇನಿಯಾಗೆ ಹೋಗಲು ಅವಕಾಶ ಸಿಕ್ಕಿತು. ಆದರೆ ಈ ನಿರ್ಣಾಯಕ ಹಂತದಲ್ಲಿ ತಾನು ವಾಸಿಸುತ್ತಿದ್ದ ಪ್ರೀತಿಯ ಕುಟುಂಬವನ್ನು ತ್ಯಜಿಸಲು ಆಕೆ ನಿರಾಕರಿಸಿದ್ದಳು’’ ಎಂದು ನೇಹಾ ಅವರ ತಾಯಿಯ ಆಪ್ತ ಸ್ನೇಹಿತೆ ಸವಿತಾ ಜಾಖರ್ ಹೇಳಿದ್ದಾರೆ ಎಂದು tribuneindia.com ವರದಿ ಮಾಡಿದೆ.