ಉಕ್ರೇನ್ ಮೇಲೆ ದಾಳಿ ಹಿನ್ನೆಲೆ: ಅಂತರಾಷ್ಟ್ರೀಯ ಜುಡೋ ಫೆಡೆರೇಷನ್ ಗೌರವಾಧ್ಯಕ್ಷ ಸ್ಥಾನದಿಂದ ಪುಟಿನ್ ಅಮಾನತು
ಪ್ಯಾರಿಸ್, ಫೆ.27: ರಶ್ಯಾವು ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಹಿನ್ನೆಲೆಯಲ್ಲಿ ಆ ದೇಶದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರನ್ನು ಅಂತರಾಷ್ಟ್ರೀಯ ಜುಡೊ ಫೆಡರೇಶನ್ನ ಗೌರವಾಧ್ಯಕ್ಷತೆಯಿಂದ ಅಮಾನತುಗೊಳಿಸಲಾಗಿದೆ ಎಂದು ಶನಿವಾರ ಘೋಷಿಸಲಾಗಿದೆ.
ಅತ್ಯುತ್ತಮ ಜುಡೊ ಪಟುವಾಗಿರುವ ಪುಟಿನ್ 2014ರಲ್ಲಿ ಜುಡೊ ಕ್ರೀಡೆಯ ಅತ್ಯುನ್ನತ 8ನೇ ಡ್ಯಾನ್ ಶ್ರೇಯಾಂಕ ಪಡೆದಿದ್ದರು. ಜುಡೋದ ಜತೆ ಐಸ್ ಹಾಕಿಯಲ್ಲೂ ಪುಟಿನ್ ನೈಪುಣ್ಯತೆ ಹೊಂದಿದ್ದಾರೆ. 2008ರಲ್ಲಿ ಅವರನ್ನು ಅಂತರಾಷ್ಟ್ರೀಯ ಜುಡೊ ಫೆಡರೇಶನ್ನ ಗೌರವಾಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು. ಈ ಹುದ್ದೆಗೆ ಪುಟಿನ್ ಅತ್ಯಂತ ಯೋಗ್ಯ ಮತ್ತು ಅರ್ಹ ಎಂದು ಫೆಡರೇಶನ್ನ ಅಧ್ಯಕ್ಷರು ಹೇಳಿದ್ದರು.
ಈಗ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ, ಪುಟಿನ್ ಅವರಿಗೆ ನೀಡಲಾಗಿದ್ದ ಅಂತರಾಷ್ಟ್ರೀಯ ಜುಡೊ ಫೆಡರೇಶನ್ನ ಗೌರವಾಧ್ಯಕ್ಷತೆ ಮತ್ತು ರಾಯಭಾರಿ ಸ್ಥಾನಮಾನವನ್ನು ಅಮಾನತುಗೊಳಿಸಿದ್ದೇವೆ ಎಂದು ಫೆಡರೇಶನ್ ಹೇಳಿದೆ
.
ರಶ್ಯಾದ ಸೈಂಟ್ ಪೀಟರ್ಸ್ಬರ್ಗ್ನಲ್ಲಿ ಮೇ 28ರಂದು ನಿಗದಿಯಾಗಿರುವ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯವನ್ನು ಸ್ಥಳಾಂತರಿಸಲಾಗಿದೆ ಎಂದು ಯುಇಎಫ್ಎ ಹೇಳಿದೆ. ಸೆಪ್ಟಂಬರ್ 25ರಂದು ನಡೆಯಬೇಕಿದ್ದ ರಶ್ಯನ್ ಗ್ರಾಂಡ್ಪ್ರಿಕ್ಸ್ ಫಾರ್ಮುಲಾ ಒನ್ ರೇಸ್ ರದ್ದಾಗಿದೆ. 2022ರ ವಿಶ್ವಕಪ್ ಪ್ಲೇ-ಆಫ್ ಹಂತದ ಸ್ಪರ್ಧೆಯಲ್ಲಿ ರಶ್ಯಾದ ವಿರುದ್ಧ ಆಡುವುದಿಲ್ಲ ಎಂದು ಪೋಲಂಡ್ ಮತ್ತು ಸ್ವೀಡನ್ ಘೋಷಿಸಿವೆ.