×
Ad

"ಜನಪ್ರಿಯ ಪ್ರಾದೇಶಿಕ ಹಾಡುಗಳಿಗೆ ತುಟಿಯಾಡಿಸುವ ಮೂಲಕ ʼಲಿಪ್‌ ಸಿಂಕ್ʼ ವೀಡಿಯೊ ಮಾಡಿ": ಪ್ರಧಾನಿ ಮೋದಿ ಸಲಹೆ

Update: 2022-02-27 19:58 IST

ಹೊಸದಿಲ್ಲಿ: ಭಾರತದ 75ನೇ ವರ್ಷದ ಸ್ವಾತಂತ್ರ್ಯದ ಆಚರಣೆಗಳ ಭಾಗವಾಗಿ ಜನಪ್ರಿಯ ಪ್ರಾದೇಶಿಕ ಹಾಡುಗಳಿಗೆ ಲಿಪ್ ಸಿಂಕ್ ವೀಡಿಯೊಗಳನ್ನು ಮಾಡಲು ಪ್ರಧಾನಿ ನರೇಂದ್ರ ಮೋದಿ ರವಿವಾರ ಭಾರತೀಯರಿಗೆ ಕರೆ ನೀಡಿದ್ದಾರೆ.

ತಮ್ಮ ʼಮನ್‌ ಕಿ ಬಾತ್‌ʼ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ಹಾಡುಗಳಿಗೆ ಲಿಪ್‌ ಸಿಂಕ್‌ ವಿಡಿಯೋಗಳನ್ನು ಮಾಡಿ ಜನಪ್ರಿಯರಾಗಿರುವ ತಾಂಜಾನಿಯಾದ ಕಿಲಿ ಪೌಲ್‌ ಹಾಗೂ ಅವರ ಸಹೋದರಿ ನೀಮಾ ಅವರನ್ನು ಉಲ್ಲೇಖಿಸಿದ್ದಾರೆ. ಅವರಿಗೆ ಭಾರತೀಯ ಸಂಗೀತದೆಡೆಗೆ ಇರುವ ಒಲವನ್ನು ಪ್ರಧಾನಮಂತ್ರಿ ಕೊಂಡಾಡಿದ್ದಾರೆ. 
 
“ನಾನು ಅವರಿಗೆ (ಪೌಲ್‌ ಹಾಗೂ ನೀಮಾ) ಋಣಿಯಾಗಿದ್ದೇನೆ. ಅವರಂತೆಯೇ ನಮ್ಮ ಮಕ್ಕಳೂ ಮಾಡಿದರೆ ಹೇಗೆ?.. ಉದಾಹರಣೆಗೆ, ಕನ್ನಡದ ವಿದ್ಯಾರ್ಥಿಗಳು ಕಾಶ್ಮೀರಿ ಭಾಷೆ ಹಾಡುಗಳಿಗೆ ಲಿಪ್‌ ಸಿಂಕ್‌ ಮಾಡಬಹದು. ಕೇರಳದವರು ಇನ್ನೊಂದು ಭಾಷೆಯಲ್ಲಿ ಲಿಪ್ ಸಿಂಕ್ ಮಾಡಲಿ... ʼಸ್ವಾತಂತ್ರ್ಯದ ಅಮೃತ್ ಮಹೋತ್ಸವದ ಭಾಗವಾಗಿ, ಯುವಕರು ತಮ್ಮದೇ ಆದ ರೀತಿಯಲ್ಲಿ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಜನಪ್ರಿಯವಾಗಿರುವ ಹಾಡುಗಳಿಗೆ ಲಿಪ್‌ ಸಿಂಕ್‌ ವಿಡಿಯೊಗಳನ್ನು ಮಾಡಬಹುದು.” ಎಂದು ಪ್ರಧಾನಿ ಸಲಹೆ ನೀಡಿದ್ದಾರೆ. 

ನಾನು ಎಲ್ಲರಿಗೂ (ಲಿಪ್‌ ಸಿಂಕ್‌ ವಿಡಿಯೋ ಮಾಡಲು) ಒತ್ತಾಯಿಸುತ್ತೇನೆ. ವಿಶೇಷವಾಗಿ, ಮಕ್ಕಳು ಇತರೆ ರಾಜ್ಯದ ಜನಪ್ರಿಯ ಹಾಡುಗಳಿಗೆ ಲಿಪ್‌ ಸಿಂಕ್‌ ಮಾಡಲಿ. ನಾವು ʼಒಂದು ಭಾರತ-ಶ್ರೇಷ್ಟ ಭಾರತʼವನ್ನು ಮರು ವ್ಯಾಖ್ಯಾನ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ. 
ಭಾರತೀಯ ಸಂಗೀತ ಎಲ್ಲರನ್ನೂ ಆಕರ್ಷಿಸುತ್ತದೆ. ಕೆಲವು ವರ್ಷಗಳ ಹಿಂದೆ 150 ಕ್ಕೂ ಹೆಚ್ಚು ದೇಶಗಳ ಗಾಯಕರು-ಸಂಗೀತಗಾರರು, ಆಯಾ ದೇಶಗಳು ಮತ್ತು ವೇಷಭೂಷಣಗಳಲ್ಲಿ, ಮಹಾತ್ಮ ಗಾಂಧಿಯವರ ಇಷ್ಟದ ಭಜನೆಯಾದ ‘ವೈಷ್ಣವ ಜಾನತೊ’ ಅನ್ನು ಸುಂದರವಾಗಿ ಪ್ರಸ್ತುತ ಪಡಿಸಿದರು ಎಂಬುದನ್ನು ನಾನು ಇಲ್ಲಿ ನೆನಪಿಸಲು ಬಯಸುತ್ತೇನೆ.

ಭಾರತವು ಭಾಷೆಗಳ ವಿಷಯದಲ್ಲಿ ತುಂಬಾ ಶ್ರೀಮಂತವಾಗಿದೆ. ಅದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ, ನಮ್ಮ ವೈವಿಧ್ಯಮಯ ಭಾಷೆಗಳ ಬಗ್ಗೆ ನಾವು ಹೆಮ್ಮೆಪಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಕಳೆದ ವರ್ಷ 'ರತನ್ ಲಂಬಿಯಾನ್' ಹಾಡಿನ ಲಿಪ್ ಸಿಂಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಪೌಲ್ ಮತ್ತು ಅವರ ಸಹೋದರಿ ನೀಮಾ ಭಾರತದಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿದ್ದಾರೆ. ಅಂದಿನಿಂದ, ಇವರಿಬ್ಬರು ಹಿಂದಿ, ಹರಿಯಾಣ ಮತ್ತು ಪಂಜಾಬಿ ಸೇರಿದಂತೆ ವಿವಿಧ ಭಾರತೀಯ ಭಾಷೆಗಳ ಹಾಡುಗಳಲ್ಲಿ ಹಲವಾರು ಲಿಪ್-ಸಿಂಕ್ಸಿಂಗ್ ವೀಡಿಯೊಗಳನ್ನು ಮಾಡಿದ್ದಾರೆ.

ದಿವಂಗತ ಲತಾ ಮಂಗೇಶ್ಕರ್ ಅವರ ಗೌರವಾರ್ಥವಾಗಿ ‘ಜಾನೆ ಕ್ಯಾ ಬಾತ್ ಹೈ’ ಹಾಡಿನಲ್ಲಿ ಲಿಪ್ ಸಿಂಕ್ ವೀಡಿಯೊವನ್ನು ಸಹ ಮಾಡಿದ್ದಾರೆ. ಈ ವಿಡಿಯೋ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ತಿಂಗಳ ಆರಂಭದಲ್ಲಿ, ತಾಂಝಾನಿಯಾದಲ್ಲಿನ ಭಾರತೀಯ ಹೈಕಮಿಷನ್ ಕೂಡ ಪೌಲ್‌ ಅವರ ವೀಡಿಯೊಗಳಿಗಾಗಿ ಅವರನ್ನು ಗೌರವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News