ಸೆಕ್ಯುಲರ್‌ವಾದಿಗಳು ಹಿಂದೂ ಧರ್ಮವನ್ನು ‘ಸಾಂಸ್ಕೃತಿಕ’ ಮತ್ತು ಇಸ್ಲಾಮನ್ನು ‘ಧಾರ್ಮಿಕ’ ಎಂದೇಕೆ ನೋಡುತ್ತಾರೆ?
ಜಾತ್ಯತೀತ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶವಿಲ್ಲದ ‘ಧಾರ್ಮಿಕ ಉಡುಗೆ’ಯಾಗಿರುವುದಕ್ಕಾಗಿ ಶಾಲೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸುವ ಕುರಿತು ಚರ್ಚೆಗಳು ಧಾರ್ಮಿಕತೆಯ ಬಗ್ಗೆ ಮೂಲಭೂತ ಶಂಕೆಯನ್ನು ಹೊಂದಿರುವ ಮತ್ತು ‘ಜಾತ್ಯತೀತವಾದಿಗಳು ’ ಎಂದು ಗುರುತಿಸಿಕೊಂಡಿರುವವರಿಗೆ ತಮ್ಮ ಧರ್ಮನಿಷ್ಠೆಯನ್ನು ವಿವರಿಸುವ ಹೊಣೆಯನ್ನು ಹಿಜಾಬ್ ಧರಿಸುವ ಮುಸ್ಲಿಂ ಮಹಿಳೆಯರ ಮೇಲೆ ಹೊರಿಸಿವೆ.
ಮುಸ್ಲಿಂ ಮಹಿಳೆಯರು ಹಿಜಾಬ್ (ದಬ್ಬಾಳಿಕೆಯ ಪರಾಕಾಷ್ಠೆಯ ಸಂಕೇತ) ಧರಿಸುವ ಮೂಲಕ ಪರಾಧೀನತೆಗೆ ಒಳಪಡುವುದನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದಕ್ಕಾಗಿ ಹೆಚ್ಚಿನ ಜಾತ್ಯತೀತವಾದಿಗಳು ಅಚ್ಚರಿಯನ್ನು ಹೊಂದಿದ್ದಾರೆ. ಶಾಲೆಗಳಲ್ಲಿ ಹೆಚ್ಚುಕಡಿಮೆ ಎಲ್ಲ ಕಾರ್ಯಕ್ರಮಗಳು ಅಜ್ಞಾನದ ಅಂಧಕಾರವನ್ನು ತೊಲಗಿಸಲು ಜ್ಯೋತಿಯನ್ನು ಬೆಳಗುವ ಮೂಲಕ ಮತ್ತು ಜ್ಞಾನವನ್ನು ಬರಮಾಡಿಕೊಳ್ಳಲು ಸರಸ್ವತಿ ದೇವಿಯ ಆರಾಧನೆಯೊಂದಿಗೆ ಆರಂಭಗೊಳ್ಳುತ್ತವೆ, ಶಾಂತಿ ಮತ್ತು ಸೌಹಾರ್ದಕ್ಕಾಗಿ ಗಾಯತ್ರಿ ಮಂತ್ರವನ್ನೂ ಪಠಿಸಲಾಗುತ್ತದೆ.
ಭಾರತವನ್ನು ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯರ ಶಕ್ತಿಯನ್ನು ಹೊರಸೂಸುವ ಮಾತೃಭೂಮಿಯಾಗಿ ಬಿಂಬಿಸುವ ಬಂಕಿಮಚಂದ್ರರ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯು ಶಾಲಾ ಸಮಾರಂಭಗಳಲ್ಲಿ ಜನಪ್ರಿಯವಾಗಿದೆ. ಇದೇ ಶಾಲಾ ವ್ಯವಸ್ಥೆಯಲ್ಲಿ ಮುಸ್ಲಿಂ ಮಹಿಳೆಯರು ಹಿಜಾಬ್ ಅನ್ನು ಧರಿಸುವಂತಿಲ್ಲ,ಏಕೆಂದರೆ ಶಾಲೆಗಳಲ್ಲಿ ‘ಧರ್ಮ’ಕ್ಕೆ ಅವಕಾಶವಿಲ್ಲ!
ಒಂದು ಧರ್ಮಕ್ಕಿಂತ ಇನ್ನೊಂದು ಧರ್ಮಕ್ಕೆ ಹೆಚ್ಚಿನ ಗೌರವವನ್ನು ನೀಡುವ ಶಾಲೆಗಳ ಬೂಟಾಟಿಕೆಯನ್ನು ಎತ್ತಿ ತೋರಿಸುವುದು ಇಲ್ಲಿ ಉದ್ದೇಶವಲ್ಲ. ಯಾವುದನ್ನು ಧರ್ಮ ಎಂದು ಕರೆಯಲಾಗುತ್ತದೆ ಮತ್ತು ಭಾರತೀಯ ಜಾತ್ಯತೀತವಾದದ ವ್ಯಾಖ್ಯಾನದಲ್ಲಿ ಯಾರು ಧಾರ್ಮಿಕರು ಎನ್ನುವುದು ಪ್ರಶ್ನೆಯಾಗಿದೆ. ಭಾರತೀಯ ಜಾತ್ಯತೀತ ವಾದವು ಮೇಲ್ಜಾತಿಯ ಹಿಂದು ಧರ್ಮವನ್ನು ನಿರಾಕರಿಸುತ್ತದೆ ಮತ್ತು ತನ್ನನ್ನು ‘ಭಾರತೀಯ ಸಂಸ್ಕೃತಿ’ಎಂದು ಹೇಳಿಕೊಳ್ಳುತ್ತದೆ. ಒಂದು ರಾಷ್ಟ್ರವಾಗಿ ಭಾರತದ ಪ್ರತಿಪಾದನೆಗಳಲ್ಲಿ ಧರ್ಮವಿಲ್ಲ, ಇರುವುದು ‘ಭಾರತೀಯ ಸಂಸ್ಕೃತಿ ’ಮಾತ್ರ.
ಹಿಂದು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ತಿಲಕ,ಕುಂಕುಮ,ಬಿಂದಿ, ಸಿಂದೂರವನ್ನು ಧರಿಸುವುದನ್ನು ನಿಲ್ಲಿಸಿದ್ದ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆಯನ್ನು ನೀಡಿರುವ ಕರ್ನಾಟಕದ ಶಿಕ್ಷಣ ಸಚಿವರು, ಇವು ಹಿಂದುಗಳ ‘ಸಾಂಸ್ಕೃತಿಕ ಸಂಕೇತ’ಗಳಾಗಿವೆ ಎಂದು ವಿವರಿಸಿರುವಾಗ ಅವರನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಅವರು ಹಿಂದು ಧರ್ಮ ಪರಮೋಚ್ಚ ಎಂಬ ಬಲಪಂಥೀಯ ವಾದವನ್ನು ಪ್ರತಿಧ್ವನಿಸುತ್ತಿಲ್ಲ,ಇವು ‘ಧಾರ್ಮಿಕ ಚಿಹ್ನೆಗಳು’ಎಂದು ಅವರು ಹೇಳುತ್ತಿಲ್ಲ, ಆದರೆ ‘ಅದು ಧರ್ಮವಲ್ಲ, ಸಂಸ್ಕೃತಿ‘ಎಂಬ ಜಾತ್ಯತೀತವಾದವನ್ನು ಸಮರ್ಥಿಸುತ್ತಾರೆ.
‘ಸಾಂಸ್ಕೃತಿಕ ಉತ್ಸವ’ವನ್ನಾಗಿ ದುರ್ಗಾಪೂಜೆಯನ್ನು ಆಚರಿಸುವ, ಹಿಂದು ಸಂಪ್ರದಾಯಗಳು ಮತ್ತು ವಿಧಿಗಳನ್ನು ‘ಭಾರತೀಯ’ ಎಂದು ನಿರಂತರವಾಗಿ ಪ್ರತಿಪಾದಿಸುವ, ಉತ್ತರ ಭಾರತದಲ್ಲಿ ಮೇಲ್ವರ್ಗಗಳ, ಹೆಚ್ಚಾಗಿ ಮೇಲ್ಜಾತಿಗಳ ಹಿಂದುಗಳು ಮತ್ತು ಮುಸ್ಲಿಮರು ಅನುಸರಿಸುವ ಗಂಗಾ-ಜಮುನಿ ತೆಹ್ಝೀಬ್ ನ ‘ಮಿಶ್ರ ಸಂಸ್ಕೃತಿ ’ಯ ನಷ್ಟಕ್ಕಾಗಿ ಪ್ರಲಾಪಿಸುವ, ತಮ್ಮನ್ನು ಜಾತ್ಯತೀತ-ಉದಾರವಾದಿಗಳೆಂದು ಗುರುತಿಸಿಕೊಳ್ಳುವ ಹೆಚ್ಚಿನ ಬುದ್ಧಿಜೀವಿಗಳ ಭಾಷೆಯಲ್ಲಿ ಸಚಿವರು ಮಾತನಾಡುತ್ತಿದ್ದಾರೆ.
ಬಹುಸಂಖ್ಯಾತರ ಧರ್ಮವನ್ನು ‘ರಾಷ್ಟ್ರೀಯ’ ಎಂದು ಪರಿಗಣಿಸಲಾಗಿರುವುದರಿಂದ ಧಾರ್ಮಿಕ ಅಲ್ಪಸಂಖ್ಯಾತರನ್ನು ಮಾತ್ರ ‘ಧಾರ್ಮಿಕ’ರೆಂದು ಗುರುತಿಸಲಾಗುತ್ತಿದೆ. ಪ್ರಸಕ್ತ ರಾಜಕೀಯ ಆಡಳಿತದ ಅತಿರೇಕದ ಹಿಂಸಾಚಾರವನ್ನು ಕಡೆಗಣಿಸುವಂತಿಲ್ಲ,ಅದರೆ ರಾಷ್ಟ್ರ ಮತ್ತು ಧರ್ಮದ ಸ್ಪರ್ಧೆಯಲ್ಲಿ ಮುಸ್ಲಿಮರನ್ನು ಅಮಾನವೀಯಗೊಳಿಸುವ ಈ ಅತಿರೇಕದ, ಅಸಂಬದ್ಧ ಯೋಜನೆಯು ಏನನ್ನು ಪ್ರತಿಪಾದಿಸುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಮುಸ್ಲಿಮರು ಒಂದು ಸಮುದಾಯವಾಗಿ ದಲಿತರು,ಆದಿವಾಸಿಗಳು ಮತ್ತು ಮಹಿಳೆಯರಂತೆ ರಾಷ್ಟ್ರಿಯ ಪರಿಕಲ್ಪನೆಯ ಭಾಗವಾಗಲು ವಿಫಲರಾಗುವಂತೆ ನೋಡಿಕೊಳ್ಳಲಾಗುತ್ತಿದೆ.
ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭ ಹಿಜಾಬ್ ಧಾರಿ ಮಹಿಳೆಯರು ರಾಷ್ಟ್ರಧ್ವಜವನ್ನು ಎತ್ತಿ ಹಿಡಿದುಕೊಂಡಿದ್ದಾಗ, ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾಗ, ಸಂವಿಧಾನವನ್ನು ಪ್ರಮಾಣವನ್ನಾಗಿಸಿಕೊಂಡಿದ್ದಾಗ ಅವರನ್ನು ‘ಭಾರತೀಯ ಜಾತ್ಯತೀತವಾದದ ಸಾಯುತ್ತಿರುವ ಚೈತನ್ಯದ ರಕ್ಷಕರು ’ಎಂದು ಪ್ರಶಂಸಿಸಲಾಗಿತ್ತು. ಈಗ ರಾಷ್ಟ್ರೀಯ ಘೋಷಣೆಗಳ ಅನುಪಸ್ಥಿತಿಯಲ್ಲಿ ಅದೇ ಹಿಜಾಬ್ಧಾರಿ ಮಹಿಳೆಯರನ್ನು ಭಾರತೀಯ ಜಾತ್ಯತೀತವಾದಕ್ಕೆ ಅಪಾಯವನ್ನುಂಟು ಮಾಡುವವರು ಎಂದು ಬಿಂಬಿಸಲಾಗುತ್ತಿದೆ.
ಜಾತ್ಯತೀತತೆಯ ಪರಿಕಲ್ಪನೆಯ ಹೊರಗೆ ಹಿಜಾಬಿ ಮಹಿಳೆಯರು ಹಿಂದು ಧರ್ಮವನ್ನು ಸಂಸ್ಕೃತಿಯನ್ನಾಗಿ ರಾಷ್ಟ್ರೀಕರಿಸುವ, ಆದರೆ ಇಸ್ಲಾಮೊಫೋಬಿಯಾವನ್ನು ಬೆಟ್ಟು ಮಾಡುತ್ತಿರುವ ಜಾತ್ಯತೀತವಾದದ ವ್ಯಾಖ್ಯೆಯಲ್ಲಿ ಸೇರಿಸಲಾಗದ ಧಾರ್ಮಿಕ ವಿಷಯಗಳಾಗಿ ಕಾಣಿಸುತ್ತಾರೆ.
ಹಿಜಾಬ್ ಧರಿಸುವುದು ಮುಸ್ಲಿಂ ಮಹಿಳೆಯರ ಪಾಲಿಗೆ ಏನು ಎಂದು ಪ್ರಶ್ನಿಸುವ ಮತ್ತು ಧರ್ಮದ ಬಗ್ಗೆ ಶಂಕೆಯನ್ನು ಹೊಂದಿರುವ ಜಾತ್ಯತೀತವಾದಿಗಳಿಗೆ ತಮ್ಮ ಧರ್ಮನಿಷ್ಠೆಯನ್ನು ವಿವರಿಸುವ ಹೊಣೆಯನ್ನು ಅವರ ಮೇಲೆ ಹೊರಿಸುವ ಬದಲು ಜಾತ್ಯತೀತವಾದವು ತನ್ನದೇ ರಚನೆಯನ್ನು ಪ್ರತಿಬಿಂಬಿಸುವ ಮತ್ತು ತನ್ನ ಧಾರ್ಮಿಕ ನಿರಾಕರಣೆಯನ್ನು ಕಂಡುಕೊಳ್ಳುವ ಅಗತ್ಯವಿದೆ.
ಜಾತ್ಯತೀತವಾದದ ವ್ಯಾಖ್ಯಾನದಲ್ಲಿಯ ತೀವ್ರ ವಿಪರ್ಯಾಸವೆಂದರೆ ಅದು ತನ್ನನ್ನು ಸದಾ ಧಾರ್ಮಿಕ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದ ಗಾಂಧೀಜಿಯವರಲ್ಲಿ ತನ್ನ ಆದರ್ಶವನ್ನು ಕಂಡುಕೊಳ್ಳುತ್ತದೆ. ಸಾವಿನ ಎದುರಿನಲ್ಲಿ ಗಾಂಧೀಜಿಯವರು ಉದ್ಗರಿಸಿದ್ದ ‘ಹೇ ರಾಮ್ ’ಅನ್ನು ಅಮರವಾಗಿಸಲಾಗಿದೆ. ಆದರೆ ‘ಜೈ ಶ್ರೀರಾಮ’ಎಂಬ ಘೋಷಣೆಗಳನ್ನು ಕೂಗುತ್ತಿದ್ದ ಗುಂಪಿನಿಂದ ಬೆನ್ನಟ್ಟಲ್ಪಟ್ಟಿದ್ದ ಹಿಜಾಬ್ ಧಾರಿ ವಿದ್ಯಾರ್ಥಿನಿ ಮುಸ್ಕಾನ್ ‘ಅಲ್ಲಾಹು ಅಕ್ಬರ್’ ಘೋಷಣೆಯೊಂದಿಗೆ ಉತ್ತರಿಸುವಂತಿಲ್ಲ. ಜೈ ಹಿಂದ್ ಎಂದು ಕೂಗಬೇಕಿತ್ತು ಎಂದು ಅವಳಿಗೆ ಸಲಹೆ ನೀಡಲಾಗುತ್ತಿದೆ, ಏಕೆಂದರೆ ಹಾಗೆ ಕೂಗುವುದು ಮುಸ್ಲಿಮರನ್ನು ಕಡಿಮೆ ಧಾರ್ಮಿಕರು ಮತ್ತು ಹೆಚ್ಚು ಜಾತ್ಯತೀತ (ರಾಷ್ಟ್ರೀಯ) ರನ್ನಾಗಿಸುತ್ತದೆ! ಆದರೆ ಗಾಂಧೀಜಿಯವರು ಗುಂಡೇಟಿಗೆ ತುತ್ತಾಗಿದ್ದಾಗ ‘ಹಿಂದ್’ ಜೀವಂತವಾಗಿ ಮಿಡಿಯುತ್ತಿದ್ದ ಶಬ್ದವಾಗಿರಲಿಲ್ಲವೇ? ಆದರೂ ಗಾಂಧೀಜಿಯವರ ‘ಹೇ ರಾಮ್ ’ನ್ನು ಯಾರೂ ಆಕ್ಷೇಪಿಸುತ್ತಿಲ್ಲ.
ಅಂತಿಮವಾಗಿ ಜಾತ್ಯತೀತವಾದವು ಧರ್ಮವನ್ನು ಸಹಿಸಿಕೊಳ್ಳುವುದಿಲ್ಲ ಎಂದಾದರೆ ಯಾರ ಧರ್ಮವನ್ನು ಅದು ‘ಧರ್ಮ’ಎಂದು ಸಹಿಸಿಕೊಳ್ಳಲು ಸಿದ್ಧವಾಗಿದೆ? ಜಾತ್ಯತೀತ ದೇಶದ ಹೆಸರಿನಲ್ಲಿ ಗಾಂಧೀಜಿಯವರ ಧಾರ್ಮಿಕತೆಯನ್ನು ಸಹಿಸಿಕೊಳ್ಳಲಾಗುತ್ತಿದ್ದರೆ ಮುಸ್ಕಾನ್ ಧರ್ಮನಿಷ್ಠೆಯನ್ನು ಅದೇ ಜಾತ್ಯತೀತ ದೇಶದ ಹೆಸರಿನಲ್ಲಿ ಪ್ರಶ್ನಿಸಲಾಗುತ್ತಿದೆ ಎನ್ನುವುದನ್ನು ಹಿಜಾಬ್ ಧಾರಿ ಮಹಿಳೆಯರಿಗೆ ನೀಡಲಾಗುತ್ತಿರುವ ಕಿರುಕುಳವು ನಮಗೆ ಹೇಳುತ್ತಿದೆ.
ಕೃಪೆ: Thewire.in