ಶ್ರೇಯಸ್ ಸತತ 3ನೇ ಅರ್ಧಶತಕ, ಶ್ರೀಲಂಕಾ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ

Update: 2022-02-27 17:05 GMT
Photo:BCCI

  ಧರ್ಮಶಾಲಾ, ಫೆ. 27: ಸರಣಿಯಲ್ಲಿ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಶ್ರೇಯಸ್ ಅಯ್ಯರ್ ನೆರವಿನಿಂದ ಭಾರತವು ಶ್ರೀಲಂಕಾ ವಿರುದ್ಧ ರವಿವಾರ ನಡೆದ 3ನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆರು ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಸರಣಿಯನ್ನು 3-0 ಅಂತರದಿಂದ ಜಯಿಸುವುದರೊಂದಿಗೆ ಕ್ಲೀನ್‌ಸ್ವೀಪ್ ಸಾಧಿಸಿದೆ.

ರೋಹಿತ್ ಶರ್ಮಾ ಬಳಗ ಸತತ 12ನೇ ಟ್ವೆಂಟಿ-20 ಪಂದ್ಯವನ್ನು ಜಯಿಸಿ ದಾಖಲೆ ಬರೆಯಿತು. ಗೆಲ್ಲಲು 147 ರನ್ ಗುರಿ ಪಡೆದ ಭಾರತವು 16.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ಶ್ರೇಯಸ್ ಅಯ್ಯರ್(ಔಟಾಗದೆ 73, 45 ಎಸೆತ, 9 ಬೌಂಡರಿ, 1 ಸಿಕ್ಸರ್)ಹಾಗೂ ರವೀಂದ್ರ ಜಡೇಜ(ಔಟಾಗದೆ 22, 15 ಎಸೆತ, 3 ಬೌಂಡರಿ)5ನೇ ವಿಕೆಟಿಗೆ 45 ರನ್ ಜೊತೆಯಾಟ ನಡೆಸಿ ಸತತ ಎರಡನೇ ಬಾರಿ ಭಾರತವನ್ನು ಗೆಲುವಿನ ದಡ ಸೇರಿಸಿದರು.

  ಭಾರತವು 2ನೇ ಪಂದ್ಯದಂತೆಯೇ ನಾಯಕ ರೋಹಿತ್ ಶರ್ಮಾ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 18 ರನ್ ಗಳಿಸಿ ಔಟಾದರು. ಆಗ ಶ್ರೇಯಸ್ ಸರಣಿಯಲ್ಲಿ ಸತತ 3ನೇ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಜೆಫ್ರಿ ವಾಂಡರ್ಸೆ ಎಸೆತವನ್ನು ಬೌಂಡರಿ ಗೆರೆ ದಾಟಿಸಿ ಕೇವಲ 29 ಎಸೆತಗಳಲ್ಲಿ ಆರನೇ ಅರ್ಧಶತಕ ಪೂರೈಸಿದರು.
  
ಸ್ಯಾಮ್ಸನ್‌ರೊಂದಿಗೆ 2ನೇ ವಿಕೆಟಿಗೆ 45 ರನ್ ಹಾಗೂ ದೀಪಕ್ ಹೂಡ ಜೊತೆಗೆ 3ನೇ ವಿಕೆಟಿಗೆ 38 ರನ್ ಜೊತೆಯಾಟ ನಡೆಸಿದ ಶ್ರೇಯಸ್ ಮತ್ತೊಮ್ಮೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಭಾರತಕ್ಕೆ ಗೆಲುವಿಗೆ 147 ರನ್ ಸವಾಲು : ನಾಯಕ ದಸುನ್ ಶನಕ(ಔಟಾಗದೆ 74, 38 ಎಸೆತ)ಕೆಳ ಕ್ರಮಾಂಕದಲ್ಲಿ ಗಳಿಸಿದ ಅರ್ಧಶತಕದ ನೆರವಿನಿಂದ ಶ್ರೀಲಂಕಾ ತಂಡ ಭಾರತ ತಂಡಕ್ಕೆ ಗೆಲುವಿಗೆ 147 ರನ್ ಗುರಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News