ಚತ್ತೀಸ್ಗಢ: ಎನ್ ಕೌಂಟರ್ ನಲ್ಲಿ ಇಬ್ಬರು ಶಂಕಿತ ಮಹಿಳಾ ನಕ್ಸಲೀಯರ ಹತ್ಯೆ
ರಾಯಪುರ, ಫೆ. 27: ಚತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ರವಿವಾರ ಬೆಳಗ್ಗೆ ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಶಂಕಿತ ಮಹಿಳಾ ನಕ್ಸಲೀಯರು ಮೃತಪಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ವಿವಿಧ ಭದ್ರತಾ ಪಡೆಗಳ ಜಂಟಿ ತಂಡ ನೈಮೇಡ್ ಪೊಲೀಸ್ ಠಾಣಾ ವ್ಯಾಪ್ತಿಯ ಜಬೇಲಿ ಗ್ರಾಮ ಸಮೀಪದ ಅರಣ್ಯದಲ್ಲಿ ಬೆಳಗ್ಗೆ ಸುಮಾರು 6 ಗಂಟೆಗೆ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿದ ಸಂದರ್ಭ ಈ ಗುಂಡಿನ ಚಕಮಕಿ ನಡೆದಿದೆ ಎಂದು ಬಸ್ತಾರ್ ವಲಯದ ಐಜಿಪಿ ಸುಂದರ್ರಾಜ್ ಪಿ. ತಿಳಿಸಿದ್ದಾರೆ.
ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಡಿಆರ್‌ಐ ಹಾಗೂ ಸಿಆರ್‌ಪಿಎಫ್‌ನ ನ ಸಿಬ್ಬಂದಿ ರಾಯಪುರದಿಂದ 450 ಕಿ.ಮೀ.ಗೂ ಅಧಿಕ ದೂರವಿರುವ ಜಬೇಲಿ, ದುರ್ಧಾ ಹಾಗೂ ಮೊಸ್ಲಾ ಗ್ರಾಮಗಳಲ್ಲಿ ಶನಿವಾರ ಶೋಧ ಕಾರ್ಯಾಚರಣೆ ನಡೆಸಿದರು ಎಂದು ಅವರು ತಿಳಿಸಿದ್ದಾರೆ. ರವಿವಾರ ಬೆಳಗ್ಗೆ ಶಂಕಿತ ನಕ್ಸಲೀಯರ ತಂಡ ಹಾಗೂ ಭದ್ರತಾ ಪಡೆಗಳ ಯೋಧರು ಮುಖಾಮುಖಿಯಾದರು. ಈ ಸಂದರ್ಭ ಗುಂಡಿನ ಕಾಳಗ ನಡೆಯಿತು ಎಂದು ಅವರು ತಿಳಿಸಿದ್ದಾರೆ. ಗುಂಡಿನ ಚಕಮಕಿ ನಿಂತ ಬಳಿಕ ಘಟನಾ ಸ್ಥಳದಲ್ಲಿ ಇಬ್ಬರು ಶಂಕಿತ ಮಹಿಳಾ ನಕ್ಸಲೀಯರ ಮೃತದೇಹ ಪತ್ತೆಯಾಯಿತು. ಅಲ್ಲದೆ, 12 ಬೋರ್ ಗನ್, 9 ಎಂಎಂ ಪಿಸ್ತೂಲ್, ಕಾರ್ಡೆಕ್ಸ್ ವಯರ್, ಸ್ಪೋಟಕ ವಸ್ತು ಹಾಗೂ ಇತರ ವಸ್ತುಗಳು ಪತ್ತೆಯಾದವು ಎಂದು ಅವರು ತಿಳಿಸಿದ್ದಾರೆ.