ಬಿಸಿಲಿನ ತಾಪಕ್ಕೆ ತತ್ತರಿಸುತ್ತಿರುವ ರಾಜ್ಯದ ಜನತೆ

Update: 2022-03-01 02:28 GMT

ಬೆಂಗಳೂರು : ಮಾರ್ಚ್ ತಿಂಗಳ ಆರಂಭಕ್ಕೂ ಮೊದಲೇ ರಾಜ್ಯಾದ್ಯಂತ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದು, ಮನೆಯಿಂದ ಹೊರಬರಲು ಜನರು ಹೆದರುವಂತಾಗಿದೆ.

ಇದು ಪ್ರಾರಂಭವಷ್ಟೇ, ಮಾರ್ಚ್ ಮೊದಲ ವಾರದಿಂದ ಬಿಸಿಲ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತದೆ ಹವಾಮಾನ ಇಲಾಖೆ. ಚಳಿಗಾಲ ಮುಗಿದು ಬೇಸಿಗೆ ಶುರುವಾಗಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಈ ವರ್ಷ ಫೆಬ್ರವರಿ ಕೊನೆಗೆ 36 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ಪ್ರಖರತೆ ಇದೆ.

ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ಗಾಳಿಯ ವೇಗ ಕಡಿಮೆ ಇರುತ್ತದೆ. ತೇವಾಂಶವೂ ಇಲ್ಲ. ಸಣ್ಣ ಮೋಡವೂ ಕಂಡುಬರುತ್ತಿಲ್ಲ. ಇದು ಸುಡು ಬಿಸಿಲಿನ ಅನುಭವ ತರಿಸಿದೆ.

ಸನ್ ಸ್ಟ್ರೋಕ್ ಆಗಬಹುದು, ಎಚ್ಚರ: ಈ ಬಿಸಿಲು ಜನರಲ್ಲಿ ಬಳಲಿಕೆ ತರಿಸುತ್ತದೆ. ಸುಸ್ತು ಅದಂತಾಗುತ್ತದೆ. ಕೆಲವರಿಗೆ ಸನ್‍ಸ್ಟ್ರೋಕ್ ಆಗಬಹುದು. ನಿರಂತರವಾಗಿ ನೀರು ಕುಡಿಯಬೇಕು. ಊಟ ಕಡಿಮೆ ಮಾಡಬೇಕು. ಬಿಸಿಲಿನ ಝಳ ಹೆಚ್ಚುತ್ತಿದ್ದಂತೆ ಮನೆಯಿಂದ ಹೊರಗಡೆ ಬರಬಾರದು. ಮಕ್ಕಳು, ಗರ್ಭಿಣಿಯರು, ಹಿರಿಯ ನಾಗರಿಕರು ಆದಷ್ಟು ಬಿಸಿಲಿನಿಂದ ದೂರ ಇರಬೇಕು.

ಉತ್ತರ ಕರ್ನಾಟಕದಲ್ಲಿ ತಾಪಮಾನ ಹೆಚ್ಚಳ: ರಾಯಚೂರು, ಕಲಬುರಗಿ, ಬೀದರ್, ವಿಜಯಪುರ ಸೇರಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರುತ್ತದೆ. ಆದರೆ, ಈ ಬಾರಿ ಅದು 45-46 ಡಿಗ್ರಿವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸರಾಸರಿ ತಾಪಮಾನ 1-2 ಡಿಗ್ರಿ ಏರಿಕೆಯಾಗುವ ಸಾಧ್ಯತೆಯೂ ಇದೆ.

ಸಂಜೀವಿನಿಯಾದ ಎಳನೀರು: ರಾಜ್ಯಾದ್ಯಂತ ಬಿಸಿಲಿನ ಪ್ರಮಾಣ ಅಧಿಕವಾಗಿರುವುದರಿಂದ ಎಲ್ಲರೂ ಎಳನೀರಿಗೆ ಮುಗಿಬೀಳುತ್ತಿದ್ದಾರೆ. ಬಯಲು ಸೀಮೆ ಜಿಲ್ಲೆಗಳಲ್ಲಿ ನೀರಿಲ್ಲದೆ ತೆಂಗಿನ ಮರಗಳು ಒಣಗಿ ಹೋಗಿವೆ. ಇದರಿಂದ, ಬೇರೆ ಜಿಲ್ಲೆಗಳಿಂದ ತಂದು ಮಾರಾಟ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ 20 ರಿಂದ 40 ರೂ.ವರೆಗೂ ಒಂದು ಎಳನೀರು ಮಾರಾಟವಾಗುತ್ತಿದೆ.

ಪ್ರವಾಸಿಗರ ಕುಸಿತ: ರಾಜ್ಯಾದ್ಯಂತ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಕುಸಿತಗೊಂಡಿದೆ. ಬಿಸಿಲಿನ ಪ್ರಮಾಣ ಅತ್ಯಧಿಕವಾಗಿರುವುದರಿಂದ ಎಲ್ಲರೂ ತಂಪಾದ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ, ಪ್ರವಾಸಿ ತಾಣಗಳು ಬಣಗುಡುತ್ತಿವೆ.

ಮಾರ್ಚ್‍ನಿಂದ ಇನ್ನೂ ಅಧಿಕವಾಗಿ ಬಿಸಿಲು ಹೆಚ್ಚಳವಾಗುತ್ತಿರುವುದರಿಂದ ಇನ್ನು ಮೂರು ತಿಂಗಳು ಪ್ರವಾಸಿಗರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆಯಿದೆ.

Writer - ಪ್ರಕಾಶ್ ಅವರಡ್ಡಿ

contributor

Editor - ಪ್ರಕಾಶ್ ಅವರಡ್ಡಿ

contributor

Similar News