ಕರ್ನಾಟಕದ ಬಜೆಟ್ ಕ್ಷುದ್ರತನ

Update: 2022-03-02 04:26 GMT

ಭಾಜಪ ಸರಕಾರ ಮಂಡಿಸಿದ ಕರ್ನಾಟಕದ ಬಜೆಟ್ ಕ್ಷುದ್ರತನವನ್ನು ಮೂರು ಸೂಚಿಗಳಲ್ಲಿ ನೋಡಬಹುದು.

1. ಬಜೆಟ್‌ನಲ್ಲಿ ಘೋಷಣೆ ಮಾಡಿ ಆಮೇಲೆ ಸದ್ದಿಲ್ಲದೆ ಕೈ ಬಿಡುವ ನಡೆ.

2. ಗಂಭೀರ ಅಗತ್ಯಗಳೆಂದು ಉಲ್ಲೇಖಿಸಿ ಕ್ಷುಲ್ಲಕ ಮೊತ್ತ ನಿಗದಿ ಮಾಡುವುದು.

3. ಹಾರು ಹೇಳಿಕೆ ನೀಡಿ ಇತ್ತ ಜಾತಿ ನಿಗಮಗಳಿಗೆ, ಪ್ರತಿಮೆಗಳಿಗೆ ಹಣ ಸುರಿಯುವುದು.

* ಬಜೆಟ್ಟಿನ ಘೋಷಣೆ ಅಂದರೆ ಸರಕಾರವೊಂದು ಎಲ್ಲಾ ಬಗೆಯ ಚಿಂತನೆ ನಡೆಸಿ ಕೈಗೊಳ್ಳುವ ಕಾರ್ಯ ಕ್ರಮಗಳ ಅಧಿಕೃತ ಘೋಷಣೆ. ಆದ್ದರಿಂದ ಕಾರ್ಯಕ್ರಮ ಕೈ ಬಿಡುವುದೆಂದರೆ ಜನರನ್ನು ರೈಲು ಹತ್ತಿಸುವುದೆಂರ್ಥ. 20-21ರ ಸಾಲಿನಲ್ಲಿ ಇಂತಹ ಬಜೆಟ್ ಶಿಸ್ತಿಗೆ ದ್ರೋಹ ಬಗೆದ ಉದಾಹರಣೆಗಳು ನೋಡಿ. ಬಜೆಟ್‌ನಲ್ಲಿ ಘೋಷಿಸಿ ಬಳಿಕ ಕೈ ಬಿಟ್ಟ ಕೆಲವು ಕಾರ್ಯಕ್ರಮಗಳು ಹೀಗಿವೆ:

ಬಜೆಟ್ ಕ್ರಮಾಂಕ 33. ರಾಸಾಯನಿಕ ಆಧಾರಿತ ಕೃಷಿಯ ಅನನುಕೂಲತೆ ಮತ್ತು ಅಪಾಯವು ವಿಜ್ಞಾನಿಗಳಿಗೆ ಗೋಚರ ವಾಗಿದೆ. ಸಾವಯವ ಕೃಷಿ ಇದಕ್ಕೆ ಪರಿಹಾರವಾಗಿದೆ. ರಾಸಾಯನಿಕಗಳ ಮೂಲಕ ದೊರೆಯುವಂತಹ ಅದೇ ಪೌಷ್ಟಿಕತೆಯನ್ನು ಸಾವಯವ ಆಕರಗಳಿಂದ ಪಡೆದುಕೊಳ್ಳಬಹುದಾಗಿದೆ. ಈ ಉದ್ದೇಶಕ್ಕಾಗಿ ನೀರಿನಲ್ಲಿ ಕರಗುವಂತಹ ಗೊಬ್ಬರಗಳು, ಸೂಕ್ಷ್ಮ ಪೌಷ್ಟಿಕಾಂಶಗಳು, ಹೈಡ್ರೋಜೆಲ್ ಇತ್ಯಾದಿಗಳನ್ನು ಬಳಸಲು ನೆರವು ನೀಡಲಾಗುವುದು. ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವುದಕ್ಕಾಗಿ 200 ಕೋಟಿ ರೂ.ಗಳನ್ನು ಒದಗಿಸಲಾಗುವುದು. (ಯೋಜನೆಯನ್ನು ಕೈ ಬಿಡಲಾಗಿದೆ)

ಬಜೆಟ್ ಕ್ರಮಾಂಕ 35. ನೀರು ಮತ್ತು ಗೊಬ್ಬರಗಳ ಬಳಕೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸಾಮರ್ಥ್ಯಾಭಿವೃದ್ಧಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ 40 ಪ್ರಾತ್ಯಕ್ಷಿಕೆ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿ, ಉತ್ತಮ ಕೃಷಿ ಪದ್ಧತಿಗಳು, ನೂತನ ತಂತ್ರಜ್ಞಾನಗಳು ಮತ್ತು ಕೊಯ್ಲೋತ್ತರ ನಿರ್ವಹಣೆ ಇತ್ಯಾದಿಗಳ ಬಗ್ಗೆ ಕೃಷಿಕರಿಗೆ ಪ್ರಾತ್ಯಕ್ಷಿಕೆ ನೀಡಲಾಗುವುದು. (ಯೋಜನೆಯನ್ನು ಕೈ ಬಿಡಲಾಗಿದೆ)

ಬ.ಕ್ರ. 43.   ಕರ್ನಾಟಕದಲ್ಲಿ ಶೇ.75ರಷ್ಟು ಸಣ್ಣ ಹಾಗೂ ಅತೀ ಸಣ್ಣ ರೈತರಿದ್ದಾರೆ. ರಾಜ್ಯದ ಕೃಷಿ ಪದ್ಧತಿಯು ಬಹುತೇಕ ಮಳೆಯಾಧಾರಿತ ಆಗಿರುವುದರಿಂದ ತೋಟಗಾರಿಕಾ ಬೆಳೆಗಳ ಪ್ರದೇಶವನ್ನು ವಿಸ್ತರಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳಲು ಸಣ್ಣ ಮತ್ತು ಅತೀ ಸಣ್ಣ ರೈತರು ಇಚ್ಛಿಸಿದಲ್ಲಿ ಅವರಿಗೆ ಬೀಜ, ರಸಗೊಬ್ಬರ ಖರೀದಿ, ಕೃಷಿ ಕಾರ್ಮಿಕರ ವೆಚ್ಚ ಭರಿಸಲು ಅನುಕೂಲವಾಗುವಂತೆ ಒಂದು ಸಮಗ್ರ ಯೋಜನೆಯನ್ನು ರೂಪಿಸಲಾಗುವುದು. ಈ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರು ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಂಡಲ್ಲಿ ಪ್ರತಿ ಹೆಕ್ಟೇರಿಗೆ 5,000 ರೂ.ಗಳಂತೆ ಗರಿಷ್ಠ 10,000 ರೂ.ಗಳ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. (ಯೋಜನೆಯನ್ನು ಕೈ ಬಿಡಲಾಗಿದೆ)

ಬ.ಕ್ರ. 44. ಹಾಪ್‌ಕಾಮ್ಸ್ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಪಡೆದ ಸಹಕಾರಿ ಸಂಘವಾಗಿದ್ದು, ರಾಜ್ಯದ ತೋಟಗಾರಿಕಾ ಬೆಳೆಗಾರರ ಬೆನ್ನೆಲುಬಾಗಿದೆ. ಹಾಪ್‌ಕಾಮ್ಸ್‌ಗಳಲ್ಲಿ ಉತ್ತಮ ಸೇವೆಗಳನ್ನು ಒದಗಿಸುವ ಹಾಗೂ ವಿಸ್ತರಿಸುವ ಉದ್ದೇಶದಿಂದ ಹಾಪ್‌ಕಾಮ್ಸ್ ಸಂಸ್ಥೆಯನ್ನು ಬಲಪಡಿಸಲಾಗುವುದು. (ಯೋಜನೆಯನ್ನು ಕೈ ಬಿಡಲಾಗಿದೆ)

ಬ.ಕ್ರ. 59.   ರಾಜ್ಯದಲ್ಲಿ ಹಂದಿಗಳ ಸಾಕಾಣೆ ಮತ್ತು ಉತ್ಪಾದನೆ ಗುಣಮಟ್ಟದಲ್ಲಿ ಸುಧಾರಣೆಯನ್ನು ತರಲು ವಿದೇಶಿ ತಳಿಯ ಹಂದಿಗಳನ್ನು ಆಮದು ಮಾಡಿಕೊಳ್ಳಲು ಸಮಗ್ರ ವರಾಹ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗುವುದು. ಈ ಯೋಜನೆಯನ್ನು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು.. (ಯೋಜನೆಯನ್ನು ಕೈ ಬಿಡಲಾಗಿದೆ)

ಬ.ಕ್ರ.63.  ಮೀನುಗಾರ ಮಹಿಳೆಯರು ಮೀನು ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಮೀನುಗಾರ ಮಹಿಳೆಯರು ಮೀನು ಇಳಿದಾಣದಿಂದ ಮಾರುಕಟ್ಟೆಗೆ ತ್ವರಿತವಾಗಿ ಮೀನು ಸಾಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ 1,000 ಮೀನುಗಾರ ಮಹಿಳೆಯರಿಗೆ ಮಹಿಳಾ ಮೀನುಗಾರ ಸಬಲೀಕರಣ ಯೋಜನೆಯ ಮೂಲಕ ದ್ವಿಚಕ್ರ ವಾಹನಗಳನ್ನು ನೀಡಲು ಉದ್ದೇಶಿಸಲಾಗಿದೆ. ಈ ಯೋಜನೆಯನ್ನು ಐದು ಕೋಟಿ ರೂ..ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.. (ಯೋಜನೆಯನ್ನು ಕೈ ಬಿಡಲಾಗಿದೆ)

ಬ.ಕ್ರ.67.  ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರನ್ನು 130 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.. (ಯೋಜನೆಯನ್ನು ಕೈ ಬಿಡಲಾಗಿದೆ)

ಬ.ಕ್ರ.110. ಕರ್ನಾಟಕವನ್ನು ಶ್ರವಣ ದೋಷ ಮುಕ್ತ ಮಾಡಲು ಆರು ರ್ಷದೊಳಗಿನ ಮಕ್ಕಳಲ್ಲಿ ಜನ್ಮಜಾತ ಕಿವುಡುತನವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸಿ, ಶ್ರವಣಯಂತ್ರ ಒದಗಿಸಿ ಗುಣಪಡಿಸುವ ಯೋಜನೆ ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ಯೋಜನೆಗೆ 2020-21ನೇ ಸಾಲಿನಲ್ಲಿ 28 ಕೋಟಿ ರೂ.ಗಳನ್ನು ಒದಗಿಸಲಾಗುವುದು. (ಯೋಜನೆಯನ್ನು ಕೈ ಬಿಡಲಾಗಿದೆ)

ಬ.ಕ್ರ.111.  ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲಾಗಿದ್ದು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸದರಿ ತೀವ್ರ ನಿಗಾ ಘಟಕಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಉದ್ದೇಶಿಸಲಾಗಿದೆ. 2020-21ನೇ ಸಾಲಿನಲ್ಲಿ ಈ ಘಟಕಗಳನ್ನು ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು. (ಯೋಜನೆಯನ್ನು ಕೈ ಬಿಡಲಾಗಿದೆ)

ಬ.ಕ್ರ.152.  ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ 20 ಕೋಟಿ ರೂ. ಮೊತ್ತದಲ್ಲಿ ಶುದ್ಧೀಕರಿಸಿದ ನೀರನ್ನು ಗೃಹೇತರ ಉದ್ದೇಶಕ್ಕೆ ಮರುಬಳಕೆ ಮಾಡುವ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು. (ಯೋಜನೆಯನ್ನು ಕೈ ಬಿಡಲಾಗಿದೆ)

ಬ.ಕ್ರ. 244.  ಖ್ಯಾತ ಸಾಹಿತಿಗಳಾದ ಶ್ರೀ ಎಸ್. ಎಲ್. ಭೈರಪ್ಪನವರ ಹುಟ್ಟೂರಾದ ಹಾಸನ ಜಿಲ್ಲೆಯ ಸಂತೆಶಿವರ ಗ್ರಾಮದ ಅಭಿವೃದ್ಧಿಗಾಗಿ ಐದು ಕೋಟಿ ರೂ.ಗಳನ್ನು ನೀಡಲಾಗುವುದು. (ಯೋಜನೆಯನ್ನು ಕೈ ಬಿಡಲಾಗಿದೆ)

Writer - ಕೆ.ಪಿ. ಸುರೇಶ

contributor

Editor - ಕೆ.ಪಿ. ಸುರೇಶ

contributor

Similar News