×
Ad

ಪ್ರಧಾನಿ ಮೋದಿ ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಅಖಿಲೇಶ್, ಮಮತಾರಿಂದ ಬೃಹತ್ ರ‍್ಯಾಲಿ

Update: 2022-03-02 12:04 IST

ಲಕ್ನೊ: ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ಲೋಕಸಭಾ  ಕ್ಷೇತ್ರ ವಾರಣಾಸಿಯಲ್ಲಿ ಪ್ರತಿಪಕ್ಷಗಳ ಬೃಹತ್ ಶಕ್ತಿ ಪ್ರದರ್ಶನ ಎಂದು ಹೇಳಲಾಗುತ್ತಿರುವ ಜಂಟಿ ರ‍್ಯಾಲಿಯು ಮಾರ್ಚ್ 3ರಂದು ಗುರುವಾರ ನಡೆಯಲಿದ್ದು, ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಾಗಿ ನಡೆಯುತ್ತಿರುವ ಈ ರ್ಯಾಲಿಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ  ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಅಧ್ಯಕ್ಷ ಜಯಂತ್ ಚೌಧರಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಫೆಬ್ರವರಿ 8 ರಂದು ಮಮತಾ ಲಕ್ನೋಗೆ ಭೇಟಿ ನೀಡಿದ್ದರು ಹಾಗೂ  ಸಮಾಜವಾದಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ತಾನು ಕಾಶಿಯಲ್ಲಿ ನಡೆಯುವ ರ್ಯಾಲಿಯಲ್ಲಿ ಅಖಿಲೇಶ್ ಅವರೊಂದಿಗೆ ಸೇರಿಕೊಳ್ಳುವುದಾಗಿ ಘೋಷಿಸಿದ್ದರು.

ಎಸ್‌ಪಿಯ ಮಿತ್ರಪಕ್ಷಗಳಾದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಓಂ ಪ್ರಕಾಶ್ ರಾಜ್‌ಭರ್ ಹಾಗೂ  ಅಪ್ನಾ ದಳ (ಕೆ) ಕೃಷ್ಣ ಪಟೇಲ್ ಕೂಡ ಕಾಶಿಯಲ್ಲಿ ಮಮತಾ ಬ್ಯಾನರ್ಜಿ ಹಾಗೂ  ಅಖಿಲೇಶ್ ಯಾದವ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಬುಧವಾರ ಸಂಜೆಯೊಳಗೆ ಮಮತಾ ವಾರಣಾಸಿ ತಲುಪಲಿದ್ದಾರೆ.

ಕಾಶಿಯ ಎಂಟು ಕ್ಷೇತ್ರಗಳು ಸೇರಿದಂತೆ ಒಟ್ಟು 54 ಕ್ಷೇತ್ರಗಳಿಗೆ ಮಾರ್ಚ್ 7 ರಂದು ಕೊನೆಯ ಹಂತದಲ್ಲಿ ಮತದಾನ ನಡೆಯಲಿದೆ.

ಎಸ್ಪಿ ಮೂಲಗಳ ಪ್ರಕಾರ, ಮಾರ್ಚ್ 3 ರಂದು ವಿಜಯ ರಥ ರೋಡ್ ಶೋ ಕೂಡ ನಡೆಸುವ ಸಾಧ್ಯತೆಯಿದೆ. ಮಮತಾ ಅವರು ಕಾಶಿ ವಿಶ್ವನಾಥ ಧಾಮಕ್ಕೆ ಭೇಟಿ ನೀಡಿ ಗಂಗಾ ಆರತಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.  ಬಿಜೆಪಿ ಭದ್ರಕೋಟೆಯಲ್ಲಿ ಬಿಜೆಪಿ ಸರಕಾರದ ಮಾಜಿ ಸಚಿವ, ಪ್ರಮುಖ ಒಬಿಸಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಕೂಡ ಮೆಗಾ ಶೋವನ್ನು  ಸೇರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News