ಅರ್ನಬ್‌ ಗೋಸ್ವಾಮಿಗೆ ಲೈವ್‌ ಚರ್ಚೆಯಲ್ಲೇ ಮಾತಿನ 'ಚಾಟಿಯೇಟು' ನೀಡಿದ ವಿದೇಶಿ ಪ್ಯಾನಲಿಸ್ಟ್‌

Update: 2022-03-02 08:34 GMT

ಹೊಸದಿಲ್ಲಿ: ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಉಕ್ರೇನ್ ವಿಚಾರದಲ್ಲಿ ಪಾಶ್ಚಿಮಾತ್ಯ ದೇಶಗಳ ನಿಲುವೇನು ಎಂದು ಪ್ರಶ್ನೆಯನ್ನು ಕೇಳಿದ ನಂತರ ಅವರಿಗೆ ಲಿಸ್ಬನ್‍ನ ಅಂತಾರಾಷ್ಟ್ರೀಯ ತಜ್ಷ ಹಾಗೂ ಟಿವಿ ಶೋ ಪ್ಯಾನೆಲಿಸ್ಟ್ ಒಬ್ಬರು ಅರ್ನಬ್‌ ಚರ್ಚೆಯ ವೈಖರಿ ಕುರಿತು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. 

ತನ್ನನ್ನು ಕೇವಲ ಮೂಕಪ್ರೇಕ್ಷಕನಾಗಲು ಟಿವಿ ಚರ್ಚೆಗೆ ಆಹ್ವಾನಿಸಲಾಗಿತ್ತೇ ಅಥವಾ ಮಾತನಾಡಲು ಅವಕಾಶ ನೀಡಲಾಗುವುದೇ ಎಂದು ಮೊದಲು ಪ್ರಶ್ನಿಸಿದ ಆತ ನಂತರ ಅರ್ನಬ್ ಅವರನ್ನು ಮತ್ತೆ ಉದ್ದೇಶಿಸಿ ಅವರು ತಮ್ಮ ಭಾಷೆಯ ತೀವ್ರತೆಯನ್ನು ತಗ್ಗಿಸಬೇಕು ಎಂದರಲ್ಲದೆ ಅರ್ನಬ್ ಬಳಸುವ ಪದಗಳು ಈ ಚರ್ಚೆಗೆ ಸೂಕ್ತವಲ್ಲ ಎಂದೂ ಹೇಳಿದರು.

"ನಿಮ್ಮ ಕಾರ್ಯಕ್ರಮ ನಿಮ್ಮದೇ ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ" ಎಂದು ರಿಪಬ್ಲಿಕ್ ಟಿವಿಯಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ವ್ಯವಹಾರಗಳ ತಜ್ಞರಾದ ಗಿಲ್ಬರ್ಟ್ ಡಾಕ್ಟೊರೊವ್ ಅರ್ನಬ್ ಗೋಸ್ವಾಮಿಗೆ ಹೇಳಿದ್ದಾರೆ. 'ನೀವು ಕಾಂಗರೂ ನ್ಯಾಯಾಲಯವನ್ನು ಸ್ಥಾಪಿಸಿದ್ದೀರಿ' ಎಂದು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಕುರಿತು ರಿಪಬ್ಲಿಕ್ ಟಿವಿಯಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಅವರು ಆಕ್ರೋಶ ವ್ಯಕ್ತಪಡಿದ್ದಾರೆ.

ಅರ್ನಬ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚೀನಾದ ಪ್ಯಾನೆಲಿಸ್ಟ್ ಅವರ ಜತೆ ಅವರು ಚೆನ್ನಾಗಿ ನಡೆದುಕೊಂಡಿಲ್ಲ, ಸರಿಯಾದ ಪದಬಳಕೆ ಮಾಡಿಲ್ಲ. ಹೀಗೆ ಮಾಡಿದರೆ ಅಭಿಪ್ರಾಯಗಳ ವಿನಿಮಯ ಸಾಧ್ಯವಿಲ್ಲ ಎಂದೂ ಅವರು ಹೇಳಿದರು. ಈ ಶೋ ನಡೆದ ಬೆನ್ನಲ್ಲೇ ಅದರ ಕೆಲವು ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿತಲ್ಲದೆ, ಅರ್ನಬ್ ಅವರನ್ನು ಅವರ ವಾಹಿನಿಯೇ ದೇಶ ವಿರೋಧಿ ಎಂದು ಹೇಳಿದೆ ಎಂದು Altnews.in ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಈ ನಿರ್ದಿಷ್ಟ ಕಾರ್ಯಕ್ರಮದ ತುಣುಕುಗಳು ಇಲ್ಲಿಯ ತನಕ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ರಿಟ್ವೀಟ್‍ಗಳನ್ನು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News