ಭಾರತೀಯ ವೈದ್ಯಕೀಯ ವಿದ್ಯಾರ್ಥಿಯ ಸಾವು ಪ್ರಕರಣದ ತನಿಖೆಯನ್ನು ರಷ್ಯಾ ನಡೆಸಲಿದೆ ಎಂದ ರಾಯಭಾರಿ

Update: 2022-03-02 14:56 GMT

ಹೊಸದಿಲ್ಲಿ: ಉಕ್ರೇನ್‍ನ ಖಾರ್ಖೀವ್‍ನಲ್ಲಿ ರಷ್ಯಾದ ದಾಳಿ ವೇಳೆ 21 ವರ್ಷದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಯ ಸಾವು ಪ್ರಕರಣವನ್ನು ರಷ್ಯಾ ತನಿಖೆ ನಡೆಸಲಿದೆ ಎಂದು ರಷ್ಯಾದ ನಿಯೋಜಿತ ರಾಯಭಾರಿ ಡೆನಿಸ್ ಅಲಿಪೋವ್ ಹೇಳಿದ್ದಾರೆ.

ಮಂಗಳವಾರ ಆಹಾರ ತರಲೆಂದು ತಾನಿದ್ದ ಸ್ಥಳದಿಂದ ಹೊರಹೋಗಿದ್ದ ವೇಳೆ ಕರ್ನಾಟಕದ ನವೀನ್ ಶೇಖರಪ್ಪ ಗ್ಯಾನ್‍ಗೌಡರ್ ರಷ್ಯಾದ ಶೆಲ್ ದಾಳಿಗೆ ಮೃತಪಟ್ಟಿದ್ದರು. ಈ ವೇಳೆ ನವೀನ್ ಅವರು ಆಹಾರ ವಸ್ತು ತರಲೆಂದು ಅಂಗಡಿಯೊಂದರ ಎದುರು ಸರತಿ ಸಾಲಿನಲ್ಲಿ ನಿಂತಿದ್ದರು.

"ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಮತ್ತು ಇಡೀ ಭಾರತ ದೇಶಕ್ಕೆ ಈ ಘಟನೆ ಕುರಿತು ಸಂತಾಪ ವ್ಯಕ್ತಪಡಿಸುತ್ತಿದ್ದೇನೆ" ಎಂದು ಅಲಿಪೋವ್ ಹೇಳಿದರು.

"ಸಂಘರ್ಷಗಳು ತೀವ್ರವಾಗಿರುವ ಸ್ಥಳಗಳಲ್ಲಿ ಭಾರತೀಯ ನಾಗರಿಕರ ಸುರಕ್ಷತೆಗೆ ರಷ್ಯಾ ತನ್ನಿಂದ ಸಾಧ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಹಾಗೂ ಈಗಾಗಲೇ ನಡೆದಿರುವ ದುರಾದೃಷ್ಟಕರ ಘಟನೆ ಕುರಿತು ತನಿಖೆ ನಡೆಸಲಿದೆ" ಎಂದು ಅವರು ಹೇಳಿದ್ದಾರೆ.

► ಕೀವ್ ನಿಂದ ಎಲ್ಲ ಭಾರತೀಯರ ನಿರ್ಗಮನ: ವಿದೇಶಾಂಗ ಕಾರ್ಯದರ್ಶಿ

ಯುದ್ಧಗ್ರಸ್ತ ಉಕ್ರೇನ್ ರಾಜಧಾನಿ ಕೀವ್ನಲ್ಲಿದ್ದ ಎಲ್ಲ ಭಾರತೀಯರು ಅಲ್ಲಿಂದ ನಿರ್ಗಮಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಅವರು ತಿಳಿಸಿದ್ದಾರೆ.

ಖಾರ್ಕಿವ್ ಮತ್ತು ಇತರ ಸಂಘರ್ಷ ವಲಯಗಳಲ್ಲಿ ಸಿಕ್ಕಿಕೊಂಡಿರುವ ಎಲ್ಲ ಭಾರತೀಯ ಪ್ರಜೆಗಳ ಸುರಕ್ಷಿತ ತೆರವಿಗಾಗಿ ಭಾರತದ ಬೇಡಿಕೆಯನ್ನು ತಾನು ರಷ್ಯ ಮತ್ತು ಉಕ್ರೇನ್ ರಾಯಭಾರಿಗಳಿಗೆ ತಿಳಿಸಿರುವುದಾಗಿ ಶ್ರಿಂಗ್ಲಾ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಉಕ್ರೇನ್ ಬಿಕ್ಕಟ್ಟು ಕುರಿತು ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಖಾರ್ಕಿವ್ನಲ್ಲಿ ಭಾರತೀಯ ವಿದ್ಯಾರ್ಥಿಯ ಸಾವಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದರು ಎಂದು ತಿಳಿಸಿದ ಶ್ರಿಂಗ್ಲಾ, ಖಾರ್ಕಿವ್, ಸಮಿ ಮತ್ತು ಇತರ ಸಂಘರ್ಷ ಪೀಡಿತ ವಲಯಗಳಲ್ಲಿಯ ಸ್ಥಿತಿಯ ಬಗ್ಗೆ ನಾವು ತೀವ್ರ ಕಳವಳಗೊಂಡಿದ್ದೇವೆ. ಮುಂದಿನ ಮೂರು ದಿನಗಳಲ್ಲಿ 26 ವಿಮಾನಗಳು ಭಾರತೀಯ ಪ್ರಜೆಗಳನ್ನು ಸ್ವದೇಶಕ್ಕೆ ಕರೆತರಲಿವೆ ಎಂದರು.

ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರು ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಮೋದಿಯವರೂ ಪೋಲಂಡ್ ಅಧ್ಯಕ್ಷರೊಂದಿಗೆ ಮಾತನಾಡಿದ್ದಾರೆ ಎಂದ ಶ್ರಿಂಗ್ಲಾ, ಭಾರತೀಯರ ತೆರವು ಕಾರ್ಯಾಚರಣೆಗಳಿಗೆ ಬುಕಾರೆಸ್ಟ್ ಮತ್ತು ಬುಡಾಪೆಸ್ಟ್ಗಳ ಜೊತೆಗೆ ಸ್ಲೋವಾಕ್ ರಿಪಬ್ಲಿಕ್ ಮತ್ತು ಪೋಲಂಡ್ನಲ್ಲಿಯ ವಿಮಾನ ನಿಲ್ದಾಣಗಳನ್ನೂ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News