ಭಾರತದಲ್ಲಿ ಮುಸ್ಲಿಮರ ನರಮೇಧದ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ: ಅಂತಾರಾಷ್ಟ್ರೀಯ ಸಭೆಯಲ್ಲಿ ತಜ್ಞರ ಕಳವಳ

Update: 2022-03-02 15:32 GMT

ಹೊಸದಿಲ್ಲಿ: ಧ್ವೇಷ ಭಾಷಣ ಮತ್ತು ನರಮೇಧದ ವಿರುದ್ಧ ಕಾರ್ಯಾಚರಿಸುವ ತಜ್ಞರು ನಡೆಸಿದ ಮೂರು ದಿನಗಳ ಜಾಗತಿಕ (ವರ್ಚುವಲ್) ಸಮಾವೇಶದಲ್ಲಿ, ʼನರಮೇಧವು ಒಂದು ನಿರ್ದಿಷ್ಟ ಘಟನೆಯಲ್ಲ, ಬದಲಾಗಿ ಒಂದು ಪ್ರಕ್ರಿಯೆʼ ಆಗಿರುವುದರಿಂದ ಭಾರತದಲ್ಲಿ ಮುಸ್ಲಿಮರ ನರಮೇಧ ಈಗಾಗಲೇ ಪ್ರಾರಂಭವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಫೆಬ್ರವರಿ 26 ರಿಂದ 28 ರವರೆಗೆ ನಡೆದ ‘India on the Brink: Preventing Genocideʼ ಆನ್‌ಲೈನ್‌ ಸಭೆಯಲ್ಲಿ ಭಾಗವಹಿಸಿದ ನಾಗರಿಕ ಸಮಾಜದ ನಾಯಕರು, ತಜ್ಞರು ಭಾರತದಲ್ಲಿ ಈಗಾಗಲೇ ʼಮುಸ್ಲಿಮರ ನರಮೇಧದ ಪ್ರಕ್ರಿಯೆ ಆರಂಭವಾಗಿದೆʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ರುವಾಂಡಾದ ಅಂತರರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್‌ನ ಮಾಜಿ ವಕೀಲ ಗ್ರೆಗ್ ಗಾರ್ಡನ್  "ಇತ್ತೀಚೆಗೆ ಭಾರತದಲ್ಲಿ (ಜನಾಂಗೀಯ ಹತ್ಯೆಗೆ) ನೇರ ಕರೆ ನೀಡಲಾಗುತ್ತಿದೆ. ʼಅವರು (ಮುಸ್ಲಿಮರು) ಹೀಗೆ ಮಾಡಿದರೆ ನಾವು ಹಾಗೆ ಮಾಡುತ್ತೇವೆ ಎಂಬಂತಹ (ಹಿಂದುತ್ವವಾದಿಗಳ) ಬೆದರಿಕೆಯ ಕರೆಗಳೂ ಪ್ರಚೋದನೆಗಳೇ" ಎಂದು ಹೇಳಿದ್ದಾರೆ.

ಕಾಂಬೋಡಿಯಾದ ಜೆನಾಸೈಡ್ ಡಾಕ್ಯುಮೆಂಟೇಶನ್ ಸೆಂಟರ್‌ (Genocide Documentation Center)ನ ಸಂಶೋಧಕ ಮೌಂಗ್ ಜರ್ನಿ ಮಾತನಾಡಿ, “ಭಾರತವು ಅಂಚಿನಲ್ಲಿದೆ ಎಂದು ಮಾತ್ರವಲ್ಲ ಈಗಾಗಲೇ ನರಮೇಧದ ಪ್ರಕ್ರಿಯೆಯಲ್ಲಿದೆ ಎಂದು ನಾನು ನಂಬುತ್ತೇನೆ. ಕೊಲೆಗಾರರು ದುರ್ಬಲ ಜನಸಂಖ್ಯೆಯನ್ನು ತಮ್ಮ ಧರ್ಮಕ್ಕೆ ಭದ್ರತಾ ಬೆದರಿಕೆ ಎಂದು ಚಿತ್ರಿಸುತ್ತಾರೆ. ಈ ಅಮಾನವೀಯತೆ ಪ್ರಾರಂಭವಾಗಿರುವುದರಿಂದ, ಹತ್ಯಾಕಾಂಡ ನಡೆಯದಿದ್ದರೂ ದೇಶದಲ್ಲಿ ಈಗಾಗಲೇ ನರಮೇಧದ ಪ್ರಕ್ರಿಯೆ ಆಳದಲ್ಲಿ ಬೇರು ಬಿಟ್ಟಿದೆ” ಎಂದು ಹೇಳಿದ್ದಾರೆ.

ಮಾನವ ಹಕ್ಕುಗಳ ವಕೀಲರಾದ ಮಿಥಾಲಿ ಜೈನ್ ಅವರು ಭಾರತದಲ್ಲಿ ಹೆಚ್ಚುತ್ತಿರುವ ದ್ವೇಷದ ಭಾಷಣ ಮತ್ತು (ಮುಸ್ಲಿಮರ ವಿರುದ್ಧ) ತಪ್ಪು ಮಾಹಿತಿಯ ಹರಡುವುದ ಹಾಗೂ ಮ್ಯಾನ್ಮಾರ್, ಇಥಿಯೋಪಿಯಾದಲ್ಲಿ ಕಂಡುಬರುವ "ಜನಾಂಗೀಯ ಹತ್ಯೆ" ನಡುವಿನ ಸಾಮ್ಯತೆಯ ಬಗ್ಗೆ ಗಮನ ಸೆಳೆದಿದ್ದಾರೆ. 

ಧ್ವೇಷ ಭಾಷಣಗಳ ಸೂಕ್ಷ್ಮ ಗುಣವನ್ನು ಅರ್ಥ ಮಾಡಿಕೊಳ್ಳುವ ತಜ್ಞ ಸಿಬ್ಬಂದಿಗಳು ಸಾಮಾಜಿಕ ಮಾಧ್ಯಮ ಸಂಸ್ಥೆಗಳಲ್ಲಿರಬೇಕು. ಧ್ವೇಷ ಭಾಷಣಗಳೆಂದು ಮೇಲ್ನೋಟಕ್ಕೆ ಕಾಣದಿದ್ದರೂ, ಜನರನ್ನು ಹಿಂಸೆಗೆ ಇಳಿಯಲು ಪ್ರಚೋದಿಸುವಂತಹ ಭಾಷಣಗಳನ್ನು ಗುರುತಿಸುವಂತಹ ತಜ್ಞ ಸಿಬ್ಬಂದಿಗಳು (ಸಾಮಾಜಿಕ ಮಾಧ್ಯಮಗಳಲ್ಲಿ) ಬೇಕು ಎಂದು ಜೈನ್‌ ಅಭಿಪ್ರಾಯಿಸಿದ್ದಾರೆ. 

ಸಭೆಯಲ್ಲಿ ಪಾಲ್ಗೊಂಡಿದ್ದ ಭಾರತೀಯ ಪತ್ರಕರ್ತರಾದ ಕೌಶಿಕ್‌ ರಾಜ್‌ ಹಾಗೂ ಅಲಿಶಾನ್‌ ಜಾಫ್ರಿ, ʼನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಿ ಮುಸ್ಲಿಮರ ವಿರುದ್ಧದ ಹಿಂಸಾಚಾರಗಳು ಹೇಗೆ ಹೆಚ್ಚಿತು. ಕೇಂದ್ರ ಹಾಗೂ ಆಡಳಿತರೂಢ ಪಕ್ಷದ ಸಚಿವರು ಜನಾಂಗೀಯ ಹಿಂಸಾಚಾರಕ್ಕೆ ಬಹಿರಂಗವಾಗಿ ಕರೆ ನೀಡಿಯೂ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. 

ಜನಾಂಗೀಯ ಧ್ವೇಷಗಳನ್ನು ಹರಡುತ್ತಿರುವವರನ್ನು ರಕ್ಷಿಸುತ್ತಿರುವ ಸರ್ಕಾರವೇ ಅಪರಾಧಿ,  ಭಾರತದಲ್ಲಿ ನರಮೇಧವನ್ನು ತಡೆಯುವುದು ಕಷ್ಟಕರವಾಗಿದೆ ಎಂದು ಕೆನಡಾದ ಮೂಲದ ಸೆಂಟಿನೆಲ್ ಪ್ರಾಜೆಕ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕ್ರಿಸ್ಟೋಫರ್ ಟಕ್‌ವುಡ್ ಹೇಳಿದ್ದಾರೆ. 

ಬಳಿಕ ಮಾತನಾಡಿದ, ಯೇಲ್ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರದ ಪ್ರಾಧ್ಯಾಪಕ ಮತ್ತು “ಹೌ ಫ್ಯಾಸಿಸಂ ವರ್ಕ್ಸ್ - How Fascism Works” ಕೃತಿ ಲೇಖಕ ಜೇಸನ್ ಸ್ಟಾನ್ಲಿ, ಭಾರತದಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ನಾಜಿ ಜರ್ಮನಿಗೆ ಹೋಲಿಸಿದ್ದಾರೆ. 
ಆರ್‌ಎಸ್‌ಎಸ್‌ನ ಆರಂಭಿಕ ಚಿಂತಕರು ಭಾರತವು ನಾಜಿ ಮಾದರಿಯನ್ನು ಅನುಸರಿಸಬೇಕು ಎಂದು ಸ್ಪಷ್ಟ ಸಲಹೆಗಳನ್ನು ನೀಡಿದರು ಎಂದು ತಿಳಿಸಿದ ಸ್ಟಾನ್ಲಿ, ಸಿಎಎ ನ್ಯೂರೆಂಬರ್ಗ್ ಕಾನೂನುಗಳಂತೆ ಭಯಾನಕವಾಗಿ ಕಾಣುತ್ತದೆ. (ಮೂಲಭೂತ) ಹಕ್ಕುಗಳನ್ನು ಮುಸ್ಲಿಮರಿಂದ ಕಸಿದುಕೊಳ್ಳುವ ಅಭಿಯಾನ ನಡೆಯುತ್ತಿದೆ. ಗುರಿಯು ಅತ್ಯಂತ ಸ್ಪಷ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಭಾರತದಲ್ಲಿ ನರಮೇಧದ ಕರೆಗಳು ಇತ್ತೀಚಿಗೆ ತೀವ್ರವಾಗಿ ಹೆಚ್ಚುತ್ತಿದೆ. ಹಿಜಾಬ್‌ ನಿಷೇಧಿಸಲು ಆಗ್ರಹಿಸಿದ ಭಜರಂದಳದ ಕಾರ್ಯಕರ್ತೆಯೊಬ್ಬಳು ಹಿಜಾಬ್‌ ಪರ ಪ್ರಚಾರ ಮಾಡುವವರನ್ನು ಶಿವಾಜಿ ಖಡ್ಗದಿಂದ ಕತ್ತರಿಸಿ ಹಾಕಲಾಗುವುದು ಎಂದು ಹೇಳಿರುವುದು ಹಾಗೂ ಅದಕ್ಕೂ ಮುನ್ನ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ಸಾಮೂಹಿಕ ನರಮೇಧಕ್ಕೆ ಕರೆ ನೀಡಿರುವುದನ್ನು ಇಲ್ಲಿ ನೆನಪಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News