ಬಾಯಿಮಾತಿನ ಕಸರತ್ತು ಸಾಕು, ಸರಕಾರವು ಬಾಂಬ್ ದಾಳಿ ನಿಲ್ಲಿಸುವಂತೆ ರಷ್ಯಕ್ಕೆ ಸೂಚಿಸಬೇಕು: ಕಾಂಗ್ರೆಸ್
ಹೊಸದಿಲ್ಲಿ, ಮಾ.2: ಸರಕಾರವು ಸಮತೋಲನವನ್ನು ಕಾಯ್ದುಕೊಳ್ಳುವ ತನ್ನ ಬಾಯಿಮಾತಿನ ಕಸರತ್ತನ್ನು ನಿಲ್ಲಿಸಬೇಕು ಮತ್ತು ಉಕ್ರೇನ್ನಲ್ಲಿ ಭಾರತೀಯರ ಜೀವಗಳನ್ನೂ ಅಪಾಯಕ್ಕೆ ತಳ್ಳಿರುವ ಬಾಂಬ್ ದಾಳಿಗಳನ್ನು ತಕ್ಷಣ ನಿಲ್ಲಿಸುವಂತೆ ಗಟ್ಟಿಯಾದ ಧ್ವನಿಯಲ್ಲಿ ಧೈರ್ಯದಿಂದ ರಷ್ಯಕ್ಕೆ ತಿಳಿಸಬೇಕು ಎಂದು ಹಿರಿಯ ಕಾಂಗ್ರಸ್ ನಾಯಕ ಪಿ.ಚಿದಂಬರಂ ಅವರು ಆಗ್ರಹಿಸಿದ್ದಾರೆ.
ಯುದ್ಧಗ್ರಸ್ತ ಉಕ್ರೇನ್ನಲ್ಲಿ ಅತಂತ್ರರಾಗಿರುವ ಸಾವಿರಾರು ಭಾರತೀಯರನ್ನು ತೆರವುಗೊಳಿಸುವ ಪ್ರಯತ್ನಗಳಲ್ಲಿ ಲೋಪಗಳನ್ನು ಬೆಟ್ಟು ಮಾಡಿ ಕಾಂಗ್ರೆಸ್ ಸರಕಾರದ ವಿರುದ್ಧ ತನ್ನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ.
ಕಾಂಗ್ರೆಸ್ ಕೂಡ ರಷ್ಯದ ಮಿಲಿಟರಿ ಕಾರ್ಯಾಚರಣೆಯ ಕುರಿತು ಸರಕಾರದಂತೆ ಸಮತೋಲನ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಚಿದಂಬರಂ ಅವರ ಹೇಳಿಕೆ ಕುತೂಹಲವನ್ನು ಮೂಡಿಸಿದೆ.
ಸಶಸ್ತ್ರ ಸಂಘರ್ಷವನ್ನು ಅಂತ್ಯಗೊಳಿಸಲು ಮತ್ತು ಶೀಘ್ರ ಶಾಂತಿಯ ಮರುಸ್ಥಾಪನೆಗೆ ಅಂತರಾಷ್ಟ್ರೀಯ ಸಮುದಾಯವು ಜೊತೆಯಾಗಿ ಶ್ರಮಿಸಬೇಕು. ಮಿನ್ಸ್ಕ್ ಮತ್ತು ರಷ್ಯ,ನ್ಯಾಟೊ ಒಪ್ಪಂದಗಳು ಮತ್ತು ಹಿಂದಿನ ಒಡಂಬಡಿಕೆಗಳನ್ನು ಗೌರವಿಸಿ ರಷ್ಯ ಮತ್ತು ಉಕ್ರೇನ್ ನಡುವಿನ ಎಲ್ಲ ಬಿಕ್ಕಟ್ಟುಗಳನ್ನು ಬಗೆಹರಿಸಲು ನಿಷ್ಠೆಯಿಂದ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷದ ವಿದೇಶಾಂಗ ವ್ಯವಹಾರಗಳ ವಿಭಾಗದ ಅಧ್ಯಕ್ಷ ಆನಂದ್ ಶರ್ಮಾ ಅವರು ಕಳೆದ ವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದರು.
ಸರಣಿ ಟ್ವೀಟ್ಗಳನ್ನು ಮಾಡಿರುವ ಚಿದಂಬರಂ,ಬಾಂಬ್ ದಾಳಿಗಳನ್ನು ನಿಲ್ಲಿಸಿದರೆ ಅಥವಾ ವಿರಾಮ ನೀಡಿದರೆ ಉಕ್ರೇನ್ನಲ್ಲಿ ಸಿಕ್ಕಿಹಾಕಿಕೊಂಡಿರುವ ವಿದೇಶಿಯರು ದೇಶವನ್ನು ತೊರೆಯಲು ಸಾಧ್ಯವಾಗಬಹುದು. ತೆರವು ಕಾರ್ಯಾಚರಣೆಗೆ ಆದೇಶಿಸಲು ಸರಕಾರವು ವಿಳಂಬಿಸಿತ್ತು. ಉಕ್ರೇನ್ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ್ಲ ಎಂದು ನಂಬುವಂತೆ ಭಾರತೀಯರನ್ನು ಉತ್ತೇಜಿಸುವ ಮೂಲಕ ಸರಕಾರವೂ ತಪ್ಪು ಮಾಡಿದೆ ಎಂದಿದ್ದಾರೆ.
ವಿದ್ಯಾರ್ಥಿಗಳು ಸೇರಿದಂತೆ ಉಕ್ರೇನ್ನಲ್ಲಿರುವ ಸಾವಿರಾರು ಭಾರತೀಯರ ಜೀವಗಳು ಅಪಾಯದಲ್ಲಿವೆ ಎಂದು ಅವರು ಬೆಟ್ಟು ಮಾಡಿದ್ದಾರೆ.