ರಾಷ್ಟ್ರೀಯತೆಗೆ ಮಾರಕ ಆಗುತ್ತಿದೆ ಸಾಮಾಜಿಕ ಅನ್ಯಾಯ
ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಯ ಅವಕಾಶಗಳ ಹಂಚಿಕೆ ಭಾರತದ ಭಿನ್ನ ಜನಾಂಗಗಳ ಸಂಖ್ಯೆಯ ಆಧಾರದಲ್ಲಾಗಬೇಕೆಂಬ ಬೇಡಿಕೆ ಈಗ ಚಿಗುರೊಡೆಯುತ್ತಿದೆ. ದೇಶದ ರಾಜ್ಯಾಂಗದ 5(4) ಮತ್ತು 16(4)ನೇ ವಿಧಿಗಳಲ್ಲಿ ನಿರೂಪಿತವಾದ ಸಮಾನ ಅವಕಾಶಗಳು ಮತ್ತು ಸಾಮಾಜಿಕ ನ್ಯಾಯದ ಸಿದ್ಧಾಂತ ಅರ್ಥವತ್ತಾಗಬೇಕಾದರೆ ಉತ್ತಮ ಬದುಕಿನ ಅವಕಾಶಗಳನ್ನು ಪ್ರತಿ ಜಾತಿ ಮತ್ತು ಕೋಮಿನ ಜನಸಂಖ್ಯೆಯ ಆಧಾರದ ಮೇಲೆ ಹಂಚುವುದೊಂದೇ ದಾರಿಯೆಂಬ ತೀರ್ಮಾನಕ್ಕೆ ಅನೇಕರು ಬರುತ್ತಿದ್ದಾರೆ.
ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಹಿಂದುಳಿದ ಜಾತಿಗಳ ಪ್ರತಿನಿಧಿಗಳ ಸಮಾವೇಶವೊಂದರಲ್ಲಿ ಈ ಮಾತು ಜೋರಾಗಿ ಕೇಳಿ ಬಂತು. ಸಮಾವೇಶದಲ್ಲಿ ಸೇರಿದ ಪ್ರತಿನಿಧಿಗಳ ಮನ ಮುಟ್ಟುವ ರೀತಿಯಲ್ಲಿ ಈ ಸಿದ್ಧಾಂತದ ವಿಶ್ಲೇಷಣೆ ಮಾಡಿದವರು ಪ್ರೊ. ಧರ್ಮಲಿಂಗಂ ಎನ್ನುವ ಒಬ್ಬ ವಿಚಾರವಾದಿ ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಆರ್ಥಿಕ ಉತ್ಕರ್ಷದ ವಿಧಿ-ವಿಧಾನಗಳ ಗಾಢ ಅಧ್ಯಯನದಲ್ಲೇ ಹಣ್ಣು ಮುದುಕನಾಗಿರುವ ಈ ಮೇಧಾವಿ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ದುರ್ಬಲರಿಗೆ ಆಗುತ್ತಿರುವ ಅನ್ಯಾಯಗಳ ಪಟ್ಟಿ ಬಿಚ್ಚಿದಾಗ ಅನೇಕರು ದಿಗಿಲುಗೊಂಡಿರಬೇಕು.
ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಿದ್ಧಾಂತಗಳನ್ನು ರಾಜ್ಯಾಂಗದ ನಿರ್ದೇಶಕ ತತ್ವಗಳನ್ನಾಗಿ ಅಂಗೀಕರಿಸಿದ ಸ್ವತಂತ್ರ ಭಾರತ ಆಚರಣೆಯಲ್ಲಿ ಈ ತತ್ವಗಳನ್ನು ಅದೆಷ್ಟು ಅರ್ಥಹೀನವಾಗಿ ಮಾಡಿದೆಯೆಂಬುದರ ಚಿತ್ರವನ್ನವರು ಬಿಡಿಸಿದರು. ಉದ್ಯೋಗ ಮತ್ತಿತರ ಆರ್ಥಿಕ ಅಭಿವೃದ್ಧಿಯ ಅವಕಾಶಗಳಲ್ಲಿ ಮುಂದುವರಿದ ವರ್ಗಗಳಿಗೆ ಹೇಗೆ ಸಿಂಹಪಾಲು ಸಿಗುತ್ತಿದೆಯೆಂಬುದಕ್ಕೆ ಅವರು ಮಂಡಲ್ ಆಯೋಗದ ವರದಿಯಲ್ಲಡಕವಾಗಿರುವ ಅಂಕಿ-ಅಂಶಗಳನ್ನು ಪ್ರಸ್ತಾಪಿಸಿದರು.
ಪ್ರೊ. ಧರ್ಮಲಿಂಗಂ ಅವರ ವಿಶ್ಲೇಷಣೆಯನ್ನು ಕೇಳುತ್ತಿದ್ದ ನನಗೆ ಒಬ್ಬ ಸಮರ್ಥ ಸಹ ಚಿಂತಕ ಸಿಕ್ಕಿದರೆಂದು ಸಂತೋಷವಾಯಿತು. ಉದ್ಯೋಗ ಅವಕಾಶಗಳ ಹಂಚಿಕೆ ಭಿನ್ನಜಾತಿಗಳ ಸಂಖ್ಯೆಯ ಆಧಾರದಲ್ಲಿ ನಡೆಯಬೇಕೆಂಬ ವಾದವನ್ನು ನಾನು ಬಹುವಾಗಿ ಮೆಚ್ಚಿದವನು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಈ ವಿಚಾರವನ್ನು ನನ್ನ ಓದುಗರೊಡನೆಯೂ ಹಂಚಿಕೊಂಡಿದ್ದೆ. ಇದು ಅನೇಕರ ಮನಸ್ಸಿಗೆ ಹಿಡಿಸದ ವಿಚಾರವೆಂಬುದರ ಅರಿವೂ ನನಗಿದೆ.
ಜಾತಿ ಆಧರಿತವಾದ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಯ ಸ್ಥಿತಿ-ಗತಿಯ ಮೇಲೆ ಆತನ ಜಾತಿ ನಿರ್ಣಾಯಕ ಪಾತ್ರ ವಹಿಸುತ್ತದೆಯೆಂಬುದನ್ನು ಯಾರೂ ಅಲ್ಲಗಳೆಯಲಾರರು. ಪ್ರತಿಯೊಂದು ಜಾತಿಗೂ ಅದರದೇ ಆದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚೌಕಟ್ಟಿದೆಯೆಂಬುದೂ ಯಾರಿಂದಲೂ ನಿರಾಕರಿಸಲಾಗದ ಸತ್ಯ. ಜಾತಿಯನ್ನು ನಾವು ಮನ್ನಿಸುತ್ತೇವೆ. ಜಾತಿ ಸಂಘಟನೆಗಳನ್ನು ಕಟ್ಟಿಕೊಂಡು ಜಾತಿ ಹಿತದ ಪ್ರಶ್ನೆಗಳನ್ನು ಚರ್ಚಿಸುತ್ತೇವೆ. ಆದರೂ ನಾವು ಜಾತಿಯ ವಿಷಯವನ್ನು ಸಾರ್ವಜನಿಕ ಜಿಜ್ಞಾಸೆಗೆ ಒಳಪಡಿಸಲು ಹಿಂದೇಟು ಹಾಕುತ್ತೇವೆ. ಸಾರ್ವಜನಿಕ ವೇದಿಕೆಗಳಲ್ಲಿ ‘ಜಾತಿ ಭೇದವಿಲ್ಲ-ನಾವೆಲ್ಲ ಒಂದೇ’ ಎನ್ನುವ ಬೊಗಳೆ ಬಿಡುತ್ತೇವೆ. ನಾವು ನಿತ್ಯ ಜೀವನದಲ್ಲಿ ಆಚರಿಸುತ್ತಿರುವ ಜಾತಿ ವ್ಯವಸ್ಥೆಯ ಬಗ್ಗೆ ಬಹಿರಂಗ ಚರ್ಚೆ ಸಮಾಜದ ಒಡಕಿಗೆ ಕಾರಣವಾಗುವುದೆಂಬ ದ್ವಂದ್ವವನ್ನು ಮೆರೆದಾಡಿಸುತ್ತೇವೆ.
ವಾಸ್ತವವನ್ನು ಅಂಗೀಕರಿಸಲು ನಿರಾಕರಿಸುತ್ತಿರುವ ಭಾರತೀಯ ಮನಸ್ಸು ಮೊದಲಿನಿಂದಲೂ ಈ ದೇಶಕ್ಕೆ ಅಪಾರ ಹಾನಿಮಾಡಿದೆ. ಸ್ವಾತಂತ್ರ್ಯ ಕಾಲದಲ್ಲಿ ಈ ದೇಶದ ಒಡಕಿಗೆ ಕಾರಣವಾದುದು ಈ ಭಾರತೀಯ ಮನಸ್ಸಿನ ದ್ವಂದ್ವ; ಪಾಕಿಸ್ತಾನದ ರಚನೆಗೆ ಕಾರಣವಾದುದು ಭಾರತೀಯರ ಇದೇ ಮನೋಧರ್ಮ, ದೇಶದ ಇತ್ತೀಚಿನ ಇತಿಹಾಸವನ್ನು ನಾವು ತೆರೆದ ಮನಸ್ಸಿನಿಂದ ಓದಿದರೆ ನಮಗಿದು ಅರ್ಥವಾಗುತ್ತದೆ.
1930ರ ದಶಕದಲ್ಲಿ ವಿಶೇಷ ಜಿಜ್ಞಾಸೆಯ ವಿಷಯವಾಗಿ ಎದ್ದು ಬಂದ ಕೋಮು ಪ್ರಾತಿನಿಧ್ಯದ ವಿಚಾರಕ್ಕೆ ಭಾರತೀಯರು ತೋರಿಸಿದ ಅಸಹನೆಯೇ ಪಾಕಿಸ್ತಾನದ ಕಲ್ಪನೆಗೆ ಒಂದು ಪ್ರೇರಕ ಶಕ್ತಿಯಾಯಿತು, ಆಗಿನ ಅವಿಭಜಿತ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಶೇಕಡಾ 25ರಷ್ಟಿತ್ತು. ಆದರೆ ಆಡಳಿತ ಯಂತ್ರದಲ್ಲಿ ಮತ್ತು ಸಾರ್ವಜನಿಕ ಜೀವನದಲ್ಲಿ ಮುಸ್ಲಿಮರಿಗೆ ಶೇಕಡಾ 5ರಷ್ಟೂ ಪ್ರಾತಿನಿಧ್ಯವಿರಲಿಲ್ಲ. ಮುಹಮ್ಮದ್ ಅಲಿ ಜಿನ್ನಾ ಅವರು 1931ರಲ್ಲಿ ಈ ಪ್ರಶ್ನೆಯನ್ನೆತ್ತಿ ದೇಶದ ಆಡಳಿತದ ಎಲ್ಲ ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಅವರ ಸಂಖ್ಯೆಗನುಸರಿಸಿ ಶೇಕಡಾ 25ರಷ್ಟು ಪ್ರಾತಿನಿಧ್ಯ ಸಿಗಬೇಕೆಂಬ ಬೇಡಿಕೆಯನ್ನು ಮುಂದಿಟ್ಟರು. ಮಹಾತ್ಮಾ ಗಾಂಧಿಯವರ ಸಹಿತ ಭಾರತದ ಎಲ್ಲ ಮುಖಂಡರೂ ಇದನ್ನು ತೀವ್ರವಾಗಿ ವಿರೋಧಿಸಿದರು.
ಜನಸಂಖ್ಯೆಯ ಆಧಾರದಲ್ಲಿ ಮುಸ್ಲಿಮರಿಗೆ ಆಡಳಿತದಲ್ಲಿ ಪ್ರಾತಿನಿಧ್ಯ ಬೇಕೆಂದು ಕೇಳುವ ಬದಲು ‘‘ನೀವೇ ಸ್ವತಂತ್ರ ಭಾರತದ ಪ್ರಧಾನಿಯಾಗಿ ನಿಮಗೆ ಬೇಕಾದವರನ್ನು ಸೇರಿಸಿಕೊಂಡು ಮಂತ್ರಿಮಂಡಲ ರಚಿಸಿ’’ ಎಂದು ಮಹಾತ್ಮಾಗಾಂಧಿ ಜಿನ್ನಾರನ್ನು ಆಗ ವಿನಂತಿಸಿಕೊಂಡಿದ್ದರು.
ಮಹಾತ್ಮಾ ಗಾಂಧಿಯವರ ಈ ಕೊಡುಗೆಗೆ ಮುಹಮ್ಮದ್ ಅಲಿ ಜಿನ್ನಾ ಕೊಟ್ಟ ಉತ್ತರ ಬಹಳ ಮಾರ್ಮಿಕವಾದುದು. ‘‘ನೀವು ಹೇಳಿದಂತೆ ನಾನೇ ಸ್ವತಂತ್ರ ಭಾರತದ ಪ್ರಧಾನಿಯಾಗಿ ಹೆಚ್ಚು ಮಂದಿ ಮುಸ್ಲಿಮರನ್ನೇ ಸೇರಿಸಿಕೊಂಡು ಸಂಪುಟ ರಚಿಸಿದರೂ ಆಡಳಿತ ಯಂತ್ರದಲ್ಲಿ ಮುಸ್ಲಿಮರಿಗೆ ಯೋಗ್ಯ ಪ್ರಾತಿನಿಧ್ಯ ಕೊಡಲು ಸಾಧ್ಯವಾಗದು. ಆಡಳಿತ ಯಂತ್ರ ಹಿಂದೂ ಮೇಲ್ಜಾತಿಯ ಜನರ ಸ್ವಾಮ್ಯದಲ್ಲೇ ಉಳಿಯುತ್ತದೆ. ಆಡಳಿತದಲ್ಲಿ ಮುಸ್ಲಿಮರಿಗೆ ಅವರ ಸಂಖ್ಯೆಯ ಆಧಾರದಲ್ಲಿ ಪ್ರಾತಿನಿಧ್ಯದ ಮೀಸಲಾತಿಯೊಂದೇ ಈ ದೇಶದಲ್ಲಿ ಮುಸ್ಲಿಮರಿಗೆ ಸಾಮಾಜಿಕ ನ್ಯಾಯ ಒದಗಿಸಲು ಇರುವ ಮಾರ್ಗ’’ ಎಂದಿದ್ದರು ಜಿನ್ನಾ.
ಜಿನ್ನಾ ಅವರು ಅಂದು ಮುಂದಿಟ್ಟಿದ್ದ ಮುಸ್ಲಿಮರಿಗೆ ಮೀಸಲಾತಿಯ ಬೇಡಿಕೆಯ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಹಿಂದೂಗಳು ಒಪ್ಪಿಕೊಂಡಿದ್ದರೆ ಪಾಕಿಸ್ತಾನದ ನಿರ್ಮಾಣದ ಬೇಡಿಕೆ ಮುಂದೆ ಬರುತ್ತಿರಲಿಲ್ಲ. 1935ರಲ್ಲಿ ಬ್ರಿಟಿಷ್ ಸರಕಾರ ನೌಕರಿಯಲ್ಲಿ ಮುಸ್ಲಿಮರಿಗೆ ಶೇಕಡಾ 25ರಷ್ಟು ಸ್ಥಾನಗಳನ್ನು ಮೀಸಲಿರಿಸುವ ಆಜ್ಞೆ ಹೊರಡಿಸಿದಾಗ ಭಾರತದ ಹಿಂದೂಗಳು ತೋರಿಸಿದ ಅಸಹನೆಯೇ ಪಾಕಿಸ್ತಾನದ ಬೇಡಿಕೆಯನ್ನು ಹುಟ್ಟುಹಾಕಿತೆಂಬುದು ಐತಿಹಾಸಿಕವಾದ ಸತ್ಯ
ಭಿನ್ನಜಾತಿ-ಮತಗಳ ಹಾಗೂ ವರ್ಣೀಯವಾಗಿ ಹಲವಾರು ಬುಡಕಟ್ಟುಗಳಿಂದ ಕೂಡಿರುವ ಒಂದು ವಿಶಿಷ್ಟ ಮಿಶ್ರಣವಾಗಿರುವ ಭಾರತದಲ್ಲಿ ಜಾತಿ-ಮತ ಮತ್ತು ಜನಾಂಗೀಯ ಆಶೋತ್ತರಗಳಿರುವುದು ಸಹಜ.
ಇಂದು ಪಂಜಾಬ್, ಅಸ್ಸಾಂ, ಗೂರ್ಖಾಲ್ಯಾಂಡ್, ಜಾರ್ಖಂಡ್, ಬೋಡೋಲ್ಯಾಂಡ್, ಉತ್ತರಾಖಂಡ ಮೊದಲಾದೆಡೆಗಳಲ್ಲಿ ಜನರ ಪ್ರಾದೇಶಿಕ ಆಶೋತ್ತರಗಳು ಸಿಡಿಯುತ್ತಿರುವುದಕ್ಕೆ ಮೂಲಕಾರಣ ನಮ್ಮ ರಾಷ್ಟ್ರೀಯ ಜೀವನದಲ್ಲಿ ಎಲ್ಲ ಜನಾಂಗಗಳಿಗೂ ಸಮಾನ ಅವಕಾಶ ಕಲ್ಪಿಸದಿರುವುದೇ ಆಗಿದೆ.
ಪಂಜಾಬಿನ ಇಂದಿನ ಕ್ಷೋಭೆಗೆ ದಾರಿ ಮಾಡಿದ ಆನಂದಪುರ ಸಾಹಿಬ್ ನಿರ್ಣಯವನ್ನು ನಾವು ಸರಿಯಾಗಿ ಅವಲೋಕಿಸಿದರೆ ಸಿಖ್ಖರಿಗೆ ಕೇಂದ್ರ ಸರಕಾರದ ನೌಕರಿಯಲ್ಲಿ ಯೋಗ್ಯ ಪ್ರಾತಿನಿಧ್ಯ ಸಿಗುತ್ತಿಲ್ಲವೆಂಬ ದೂರು ಎದ್ದು ಕಾಣುತ್ತದೆ. ಪಂಜಾಬಿನ ಸಿಖ್ಖರು ಸಾಧಿಸಿದ ಹಸಿರುಕ್ರಾಂತಿಯ ಫಲವನ್ನು ಹಿಂದೂ ಮೇಲ್ವಾತಿಯ ಜನ ದೋಚಿಕೊಳ್ಳುತ್ತಿರುವುದನ್ನು ತಡೆಗಟ್ಟಲು ಪಂಜಾಬಿಗೆ ಪ್ರಾದೇಶಿಕ ಸ್ವಾಯತ್ತೆ ಬೇಕೆಂದೂ ಪಂಜಾಬಿನ ಅಕಾಲಿಗಳು ಕೇಳಿದ್ದರು. ರಾಷ್ಟ್ರೀಯ ಜೀವನದಲ್ಲಿ ತಮಗೆ ನ್ಯಾಯ ಸಿಗಬೇಕೆನ್ನುವ ಸಿಖ್ಖರ ಬೇಡಿಕೆಯಲ್ಲಿ ಒಡಕಿನ ಚಿಹ್ನೆಯನ್ನು ಕಂಡ ಭಾರತೀಯ ಮನೋಧರ್ಮವೇ ಪಂಜಾಬಿನ ಕ್ಷೋಭೆಗೆ ಕಾರಣವಾಗಿದೆ.
ಮುನ್ನಡೆಯ ಎಲ್ಲ ಅವಕಾಶಗಳನ್ನೂ ಮೇಲ್ಜಾತಿಯ ಜನರು ದೋಚಿಕೊಳ್ಳಲು ಹೊರಟಾಗ ಕೆಳಜಾತಿಯ ಜನರ ಮನಸ್ಸು ಹೇಗೆ ಸ್ಫೋಟಗೊಳ್ಳುವುದೆಂಬುದಕ್ಕೆ ನಾವೀಗ ಹಲವಾರು ನಿದರ್ಶನಗಳನ್ನು ಕಾಣಬಹುದು. ನೇಪಾಳಿ ಮೂಲದ ಗೂರ್ಖಾ ಜನರು ತೀರಾ ಮುಗ್ಧರು, ಶೂದ್ರ ಸಮುದಾಯಕ್ಕೆ ಸೇರಿದ ಈ ಜನ ಸ್ವತಂತ್ರ ಭಾರತದಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗಿಯೇ ಬದುಕಿದ್ದಾರೆ. ಡಾರ್ಜಿಲಿಂಗ್ ಮತ್ತು ಸಿಲಿಗುರಿಯ ಬೆಟ್ಟ ಪ್ರದೇಶಗಳಲ್ಲಿ ಹುಟ್ಟಿ ಬೆಳೆದ ನೆಲದಲ್ಲೇ ಅನಾಥರಾಗಿ ಬೆಳೆದಿದ್ದಾರೆ. ಆ ಬೆಟ್ಟ ಪ್ರದೇಶಗಳ ಆಡಳಿತ, ಆರ್ಥಿಕ ಚಟುವಟಿಕೆ-ಎಲ್ಲದರಲ್ಲಿಯೂ ಬಂಗಾಳದ ಮೇಲ್ಜಾತಿಯ ಜನ ಸ್ವಾಮ್ಯ ಸ್ಥಾಪಿಸಿದರು. ಈ ಮುಗ್ಧ ಗೂರ್ಖಾ ಜನರಲ್ಲಿ ವಿದ್ಯಾಭ್ಯಾಸ ಹರಡಿದಂತೆ ಅವರಲ್ಲಿ ತಮ್ಮ ಹಿತದ ಪ್ರಜ್ಞೆ ಮೂಡಿ ಬಂಗಾಳಿ ಬಾಬುಗಳ ಸ್ವಾಮ್ಯದ ವಿರುದ್ಧ ಸಿಡಿದೆದ್ದರು.
ಇದೇ ರೀತಿ ಅಸ್ಸಾಮಿನ ಮುಗ್ಧರೂ ಬಂಗಾಳಿ ಬಾಬುಗಳ ಸ್ವಾಮ್ಯದ ವಿರುದ್ಧ ಸಿಡಿದೆದ್ದು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಇತ್ತೀಚಿನವರೆಗೆ ತೀರಾ ನೆಮ್ಮದಿಯ ಬೀಡಾಗಿದ್ದ ತ್ರಿಪುರ ರಾಜ್ಯದಲ್ಲೂ ಕೂಡಾ ಅಲ್ಲಿನ ಬುಡಕಟ್ಟು ಜನಾಂಗ ಬಂಗಾಳಿ ಬಾಬುಗಳ ಹತ್ಯೆ ಆರಂಭಿಸಿದ್ದಾರೆ. ಜಾರ್ಖಂಡ್ ರಾಜ್ಯ ರಚನೆಯ ಬೇಡಿಕೆಯ ಹಿಂದೆಯೂ ನಾವು ಬುಡಕಟ್ಟು ಜನಾಂಗಗಳ ಮೇಲೆ ಹಿಂದೂ ಮೇಲ್ಜಾತಿಯ ಜನರ ಸ್ವಾಮ್ಯದ ವಿರುದ್ಧ ಭಾವನೆಯನ್ನು ಕಾಣಬಹುದು.
ಇವೆಲ್ಲಾ ರಾಷ್ಟ್ರೀಯ ಸಮಗ್ರತೆಯ ಒಡಕಿನ ಚಿಹ್ನೆಗಳೆಂದು ಖಂಡಿಸುವುದು ಸುಲಭ, ಆದರೆ ಅಭಿವೃದ್ಧಿಯ ಅವಕಾಶಗಳಿಂದ ವಂಚಿತರಾದ ಈ ಹಿಂದುಳಿದ ಜನರ ಆಶೋತ್ತರಗಳನ್ನು ಅರ್ಥಮಾಡಿಕೊಳ್ಳುವುದು ನಮಗೀಗ ಕಷ್ಟವಾಗುತ್ತಿದೆ.
ನಮ್ಮ ಕಲ್ಪನೆಯ ರಾಷ್ಟ್ರೀಯತೆ ಯಾವುದು? ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗಗಳಿಗೆ ರಾಷ್ಟ್ರೀಯ ಜೀವನದಲ್ಲಿ ಅವಕಾಶಗಳನ್ನು ನಿರಾಕರಿಸಿ ಅವರ ಬಾಯಿ ಮುಚ್ಚಿಸುವುದು ರಾಷ್ಟ್ರೀಯತೆಯೆ? ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಯ ಎಲ್ಲ ಅವಕಾಶಗಳನ್ನೂ ಮೇಲ್ಜಾತಿಯವರು ಕಬಳಿಸಿಕೊಂಡು ಕೆಳ ಜಾತಿಯ ಜನರನ್ನು ಹೀಯಾಳಿಸುವುದು ರಾಷ್ಟ್ರೀಯತೆಯೆ? ನಮ್ಮದು ಜಾತಿ ಅತೀತವಾದ ರಾಜ್ಯ ವ್ಯವಸ್ಥೆಯೆಂದು ಹೇಳಿಕೊಳ್ಳುತ್ತಾ ಜಾತಿ ವ್ಯವಸ್ಥೆಯನ್ನು ಗಟ್ಟಿ ಮಾಡುವುದು ರಾಷ್ಟ್ರೀಯತೆಯೇ? ಇಂತಹ ದ್ವಂದ್ವ ನೀತಿಯಿಂದ ರಾಷ್ಟ್ರೀಯ ಸಮಗ್ರತೆಯನ್ನು ಉಳಿಸಿಕೊಳ್ಳಲು ಸಾಧ್ಯವೇ?
ಇದು ಸಾಧ್ಯವಿಲ್ಲವೆನ್ನುವುದು ನಾವು ಇತಿಹಾಸದಿಂದ ಕಲಿತುಕೊಳ್ಳಬೇಕಾದ ಪಾಠ. ಭಾರತದ ರಾಷ್ಟ್ರೀಯ ಸಮಗ್ರತೆಗೆ ಸಾಮಾಜಿಕ ನ್ಯಾಯ ಮೂಲಸೂತ್ರವಾಗಬೇಕು. ಭಾರತದ ಪ್ರಜೆಗಳೆಲ್ಲಾ ಸಮಾನರೆಂಬ ಮಾತು ಘೋಷಣೆಯಾಗಿ ಉಳಿಯದೆ ಆಚರಣೆಗೆ ಬರಬೇಕು. ರಾಷ್ಟ್ರ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಹಾಗೂ ಆಡಳಿತದಲ್ಲಿ ಸಮಪಾಲು ಪಡೆಯಲು ಎಲ್ಲ ಜಾತಿಯ ಜನರಿಗೆ ಅವಕಾಶ ಕಲ್ಪಿಸಬೇಕು.
ಸ್ವಾತಂತ್ರ್ಯ ಬಂದು 42 ವರ್ಷಗಳಾದರೂ ಈ ದಿಸೆಯಲ್ಲಿ ನಿಶ್ಚಿತ ಹೆಜ್ಜೆ ಇಡುವುದಿರಲಿ, ಯೋಚನೆ ಮಾಡಲೂ ನಮಗಿಂದು ಸಾಧ್ಯವಾಗಿಲ್ಲ. ಸಾಮಾಜಿಕ ದುರ್ಬಲರು ಮುನ್ನಡೆಯ ಎಲ್ಲ ಅವಕಾಶಗಳಿಂದಲೂ ವಂಚಿತರಾಗಿಯೇ ಇದ್ದಾರೆ.
ಇಂದು ಈ ದೇಶದ ಸಂಪತ್ತಿನಲ್ಲಿ ಶೇಕಡಾ 70ರಷ್ಟು ಪಾಲು ಬ್ರಾಹ್ಮಣರು, ವೈಶ್ಯರು ಮತ್ತು ಕ್ಷತ್ರಿಯ ಮೂಲದ ಮೇಲ್ಜಾತಿಯ ಜನರ ವಶವಾಗುತ್ತಿದೆ. ಶೇಕಡಾ 20ರಷ್ಟಿರುವ ಈ ಮೇಲ್ಜಾತಿಯ ಜನರ ಪಾಲಾಗುತ್ತಿರುವ ರಾಷ್ಟ್ರೀಯ ಸಂಪತ್ತು ಕೆಳ ಜಾತಿಯ ಜನರನ್ನು ದಲಿತರಾಗಿಯೇ ಉಳಿಸಿದೆ. ರಾಷ್ಟ್ರೀಯ ಸರಕಾರದ ನೌಕರಿಯಲ್ಲೂ ಇದೇ ಶೇಕಡಾ 20ರಷ್ಟಿರುವ ಮೇಲ್ಜಾತಿಯ ಜನ ಶೇಕಡಾ 80ರಷ್ಟು ಸ್ವಾಮ್ಯ ಪಡೆದಿದ್ದಾರೆ. ಭಾರತದಂತಹ ಒಂದು ಹಿಂದುಳಿದ ದೇಶದಲ್ಲಿ ಸರಕಾರಿ ನೌಕರಿ ಒಂದು ಮುನ್ನಡೆಯ ಅವಕಾಶವೆಂಬುದನ್ನು ನಾವು ಒಪ್ಪಿಕೊಳ್ಳುವುದಾದರೆ ಕೆಳಜಾತಿಯ ಜನರಿಗೆ ಈ ಅವಕಾಶ ಕಲ್ಪಿಸುವುದು ನಮ್ಮ ರಾಷ್ಟ್ರೀಯ ನೀತಿಯಾಗಬೇಕು. ಸರಕಾರಿ ನೌಕರಿಯಲ್ಲಿ ಅವರಿಗೆ ಸಮಪಾಲು ಸಿಗಬೇಕು.
ನಾವು ರಾಜ್ಯಾಂಗದಲ್ಲಿ ಈ ತತ್ವದ ನಿರೂಪಣೆ ಮಾಡಿದ್ದೇವೆ. ಆದರೆ ಅದನ್ನು ಆಚರಣೆಗೆ ತಾರದೆ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೇವೆ. ದಕ್ಷತೆ ಮತ್ತು ಪ್ರತಿಭೆಯ ಪ್ರಶ್ನೆಯನ್ನೆತ್ತಿ ಇದನ್ನು ಸಮರ್ಥಿಸಿಕೊಳ್ಳುತ್ತಿದ್ದೇವೆ. ಸರಕಾರಿ ನೌಕರಿಯಲ್ಲಿ ಮೇಲ್ಜಾತಿಯ ಜನರ ಸ್ವಾಮ್ಯಕ್ಕೆ ಒಂದು ನೆಪವಾಗಿರುವುದು ಪ್ರತಿಭೆ, ಉದ್ಯೋಗಾಕಾಂಕ್ಷಿ ಯುವಕರ ಪ್ರತಿಭೆಯನ್ನು ಅಥವಾ ದಕ್ಷತೆಯನ್ನು ಅಳೆಯಲು ನಾವು ಬಳಸುವ ಅಡಿಗೋಲಾದರೂ ಯಾವುದು! ದಕ್ಷತೆ ಮತ್ತು ಪ್ರತಿಭೆಗೆ ಸಂಬಂಧವಿಲ್ಲದ ಪರೀಕ್ಷಾ ವಿಧಾನ, ಭಾಷೆಯಲ್ಲಿ ಪರಿಣತಿ ಮತ್ತು ಜ್ಞಾಪಕ ಶಕ್ತಿ ಇರುವ ವಿದ್ಯಾರ್ಥಿಗಳೆಲ್ಲಾ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುತ್ತಾರೆ. ಇವರಲ್ಲಿ ನೂರಕ್ಕೆ 70 ಮಂದಿ ಮೇಲ್ಜಾತಿಯವರು. ಪರೀಕ್ಷೆಯಲ್ಲಿ ಅವರು ಗಳಿಸಿದ ಅಂಕಗಳೇ ಪ್ರತಿಭೆಯೆಂದು ಪರಿಗಣಿಸಿ ಭಾಷಾ ಪ್ರೌಢಿಮೆ ಇಲ್ಲದ ಹಿಂದುಳಿದ ಜಾತಿಯ ಜನರಿಗೆ ನೌಕರಿಯಲ್ಲಿ ಪ್ರಾತಿನಿಧ್ಯ ಕಲ್ಪಿಸದಿರುವುದು ನಮ್ಮಲ್ಲೀಗ ನಡೆಯುತ್ತಿರುವ ಮೋಸ, ಜಾಗೃತ ಜನ ಇದನ್ನು ಉದ್ದಕ್ಕೂ ಸಹಿಸಿಕೊಂಡು ಹೋಗುವರೆಂದು ನಾವು ಭ್ರಮಿಸಬಾರದು.
ಪರೀಕ್ಷೆಯಲ್ಲಿ ಗಳಿಸುವ ಅಂಕಗಳಿಗೂ ಪ್ರತಿಭೆಗೂ ಸಂಬಂಧವಿಲ್ಲವೆನ್ನುವುದಕ್ಕೆ ನಿದರ್ಶನವಾಗಿ ನಮ್ಮ ಓದುಗರಿಗೆ ಪರಿಚಿತವಿರುವ ಒಂದು ಸಂಸ್ಥೆಯನ್ನು ಉದಾಹರಿಸಬಯಸುತ್ತೇನೆ. ಆ ಸಂಸ್ಥೆ ವಿಜಯಾ ಬ್ಯಾಂಕ್. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ದಶಕಗಳ ಹಿಂದೆ ವಿದ್ಯೆಯಲ್ಲಿ ಸಾಕಷ್ಟು ಹಿಂದುಳಿದಿದ್ದ ರೈತ ಜನರು ಸ್ಥಾಪಿಸಿದ ಬ್ಯಾಂಕ್. ಆ ಬ್ಯಾಂಕಿನ ನೌಕರಿಯಲ್ಲೂ ಆ ಜಾತಿಯ ಜನರೇ ಶೇಕಡಾ 70ರಷ್ಟಿದ್ದರು. ಈ ಜನ ಭಾಷೆಯಲ್ಲಿ ಅಷ್ಟು ಪರಿಣತರಲ್ಲವಾದರೂ ವಿಜಯಾ ಬ್ಯಾಂಕನ್ನು ದೇಶದ ಒಂದು ದೊಡ್ಡ ಬ್ಯಾಂಕಿನ ಮಟ್ಟಕ್ಕೆ ಬೆಳೆಸಿದರು. ಅದರ ರಾಷ್ಟ್ರೀಕರಣವಾದ ಮೇಲೆ ಅದರ ಉದ್ಯೋಗಿಗಳ ಆಯ್ಕೆ, ರಾಷ್ಟ್ರೀಯ ಸೂತ್ರವಾದ ಅಂಕಗಳ ಮೇಲೆ ನಡೆಯುತ್ತಿದೆ. ಇದರಲ್ಲಿ ಬಂಟ ಸಮಾಜದ ಯುವಕರಿಗೆ ಈಗ ಶೇಕಡಾ 10ರಷ್ಟು ಪ್ರಾತಿನಿಧ್ಯವೂ ಸಿಗುತ್ತಿಲ್ಲ. ಇದು ಸಾಮಾಜಿಕ ನ್ಯಾಯವೇ? ಎಂದು ಪ್ರಶ್ನಿಸಬೇಕಾಗುತ್ತದೆ.
ಹೀಗೆ ಅವಕಾಶಗಳು ಮೇಲ್ಜಾತಿಯವರಿಗೆ ಮೀಸಲಾಗಿರುವ ಇಂದಿನ ಪರಿಸ್ಥಿತಿಯನ್ನು ಪರಿವರ್ತಿಸದಿದ್ದರೆ ಈ ದೇಶದಲ್ಲಿ ಜನತಂತ್ರವೂ ಬದುಕಲಾರದು-ಸಮಗ್ರತೆಯೂ ಉಳಿಯಲಾರದು. ಅವಕಾಶಗಳಲ್ಲಿ ಸಾಮಾಜಿಕ ದುರ್ಬಲರಿಗೆ ಸಮಪಾಲು ದೊರಕಿಸುವುದೊಂದೇ ಭಾರತದ ರಾಷ್ಟ್ರೀಯ ಸಮಗ್ರತೆಯ ರಕ್ಷಣೆಗಿರುವ ದಾರಿ.
ಈ ಸಂದರ್ಭದಲ್ಲಿ ನನಗೆ 1946ರಲ್ಲಿ ಬ್ರಿಟನ್‌ನ ಮಾಜಿ ಪ್ರಧಾನಿ ಸರ್ ವಿನ್‌ಸ್ಟನ್ ಚರ್ಚಿಲ್ ಹೇಳಿದ ಮಾತು ನೆನಪಾಗುತ್ತಿದೆ. ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಭಾರತದ ಸ್ವಾತಂತ್ರ್ಯ ಮಸೂದೆಯನ್ನು ವಿರೋಧಿಸಿ ಮಾತನಾಡಿದ ಚರ್ಚಿಲ್, ‘‘ಬಹು ಸಂಖ್ಯಾತರು ನಿರಕ್ಷರಿಗಳೂ, ಸಾಮಾಜಿಕವಾಗಿ ದುರ್ಬಲರೂ ಆಗಿರುವ ಭಾರತ ರಾಜಕೀಯ ಸ್ವಾತಂತ್ರ್ಯ ಗಳಿಕೆಗೆ ಇನ್ನೂ ಪಕ್ವವಾಗಿಲ್ಲ. ಈ ಹಂತದಲ್ಲಿ ಭಾರತಕ್ಕೆ ನೀಡುವ ರಾಜಕೀಯ ಸ್ವಾತಂತ್ರ್ಯ ತೀರಾ ಕುಟಿಲರೂ-ಜನವಿರೋಧಿಗಳೂ ಆದ ಮೇಲ್ಜಾತಿಯವರ ಸ್ವಾಮ್ಯಕ್ಕೆ ದಾರಿ ಮಾಡುತ್ತದೆ. ಇದರಿಂದ ಆ ದೇಶದಲ್ಲಿ ರಾಜಕೀಯ ಕ್ಷೋಭೆ ತಲೆದೋರುವ ಅಪಾಯವಿದೆ.’’ ಎಂದಿದ್ದರು.
ಅಂದು ಚರ್ಚಿಲ್ ನೀಡಿದ್ದ ಎಚ್ಚರಿಕೆಯ ಮಾತು ನಿಜವಾಗಬಾರದೆಂದು ನಾವು ಬಯಸುವುದಾದರೆ ಉದ್ಯೋಗ ಕ್ಷೇತ್ರದಲ್ಲಿ ಜನಸಂಖ್ಯೆಯ ಆಧಾರದಲ್ಲಿ ಜಾತಿವಾರು ಮೀಸಲಾತಿಯನ್ನು ಜಾರಿಗೆ ತರಬೇಕು. ದೇಶದ ಎಲ್ಲ ಪ್ರಜೆಗಳಿಗೂ ಸಾಮಾಜಿಕ ನ್ಯಾಯ ದೊರಕಿಸಲು ಇದೊಂದು ಯೋಗ್ಯ ಮಾರ್ಗ