100 ಟೆಸ್ಟ್ ಪಂದ್ಯಗಳನ್ನು ಆಡುವ ಹಂತಕ್ಕೆ ಬರುತ್ತೇನೆಂದು ಎಂದಿಗೂ ಯೋಚಿಸಿರಲಿಲ್ಲ: ವಿರಾಟ್ ಕೊಹ್ಲಿ

Update: 2022-03-04 05:59 GMT

ಮೊಹಾಲಿ, ಮಾ. 3: ‘‘ನಾನು ಈ ಮಹತ್ವದ ಪಂದ್ಯವನ್ನು ಆಡುವ ಹಂತಕ್ಕೆ ಬರುತ್ತೇನೆಂದು ಎಂದಿಗೂ ಯೋಚಿಸಿರಲಿಲ್ಲ’’ ಎಂದು ಶುಕ್ರವಾರ 100ನೇ ಟೆಸ್ಟ್ ಪಂದ್ಯವನ್ನಾಡಿದ ಭಾರತದ 12ನೇ ಬ್ಯಾಟರ್ ಎನಿಸಿಕೊಳ್ಳಲು ಸಜ್ಜಾ ಗಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೇಳಿದ್ದಾರೆ.

  2011ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದ ಕೊಹ್ಲಿ 11 ವರ್ಷಗಳ ಟೆಸ್ಟ್ ಕ್ರಿಕೆಟ್ ಪಯಣದಲ್ಲಿ 99 ಪಂದ್ಯಗಳಲ್ಲಿ 50.39ರ ಸರಾಸರಿಯಲ್ಲಿ 27 ಶತಕ ಹಾಗೂ 28 ಅರ್ಧಶತಕಗಳ ಸಹಿತ ಒಟ್ಟು 7,962 ರನ್ ಗಳಿಸಿದ್ದಾರೆ. 68 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿ 40ರಲ್ಲಿ ಜಯ ಸಾಧಿಸುವುದರೊಂದಿಗೆ ಭಾರತದ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.

ತನ್ನ 11 ವರ್ಷಗಳ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಪಾಕಿಸ್ತಾನ ವಿರುದ್ಧ ಮಾತ್ರ ಒಂದೂ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಈ ಎರಡು ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ಇಲ್ಲದ ಕಾರಣ ಕೊಹ್ಲಿಗೆ ಇದು ಸಾಧ್ಯವಾಗಿಲ್ಲ.

ಕೊಹ್ಲಿ ಶುಕ್ರವಾರ ಪಂಜಾಬ್‌ನ ಮೊಹಾಲಿಯಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ 100ನೇ ಪಂದ್ಯವನ್ನು ಆಡಲಿದ್ದಾರೆ.

 ‘‘ನಾನು 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ಇದು ಸುದೀರ್ಘ ಪ್ರಯಾಣವಾಗಿದೆ. ಆ 100 ಟೆಸ್ಟ್ ಪಂದ್ಯಗಳನ್ನು ಆಡುವ ಅವಧಿಯಲ್ಲಿ ನಾವು ಸಾಕಷ್ಟು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಡಿದ್ದೇವೆ. 100ನೇ ಪಂದ್ಯವನ್ನಾಡುವ ಹಂತಕ್ಕೆ ತಲುಪಲು ಸಾಧ್ಯವಾಗಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ’’ ಎಂದು ಬಿಸಿಸಿಐ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ 100ನೇ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಸುನೀಲ್ ಗವಾಸ್ಕರ್, ದಿಲಿಪ್ ವೆಂಗ್‌ಸರ್ಕಾರ್, ಕಪಿಲ್‌ದೇವ್, ಸಚಿನ್ ತೆಂಡುಲ್ಕರ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸೌರವ್ ಗಂಗುಲಿ, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್,ಹರ್ಭಜನ್ ಸಿಂಗ್ ಹಾಗೂ ಇಶಾಂತ್ ಶರ್ಮಾ ಅವರನ್ನೊಳಗೊಂಡ ಇಲೈಟ್ ಕ್ಲಬ್ ಅನ್ನು ಸೇರಲಿದ್ದಾರೆ.

‘‘ದೇವರು ದಯೆ ತೋರಿದ್ದಾರೆ. ನನ್ನ ಫಿಟ್‌ನೆಸ್‌ಗಾಗಿ ನಾನು ನಿಜವಾಗಿಯೂ ಕಷ್ಟಪಟ್ಟಿದ್ದೇನೆ. ಇದು ನನಗೆ, ನನ್ನ ಕುಟುಂಬಕ್ಕೆ, ನನ್ನ ಕೋಚ್‌ಗೆ ಸ್ಮರಣೀಯ ಕ್ಷಣವಾಗಿದೆ. ಅವರು ಕೂಡ ಈ ಟೆಸ್ಟ್ ಪಂದ್ಯದ ಬಗ್ಗೆ ತುಂಬಾ ಸಂತೋಷ ಹಾಗೂ ಹೆಮ್ಮೆಪಡುತ್ತಾರೆ’’ ಎಂದು ಕೊಹ್ಲಿ ಹೇಳಿದ್ದಾರೆ.

 ಕೊಹ್ಲಿ ಆಡಲಿರುವ 100ನೇ ಟೆಸ್ಟ್ ಪಂದ್ಯವನ್ನು ಪ್ರೇಕ್ಷಕರಿಗೆ ಮುಕ್ತವಾಗಿಸಲಾಗಿದ್ದು, ಕ್ರೀಡಾಂಗಣ ಸಾಮರ್ಥ್ಯದ ಶೇ.50ರಷ್ಟು ಪ್ರೇಕ್ಷಕರಿಗೆ ತೆರೆದಿಡಲು ಬಿಸಿಸಿಐ ಅವಕಾಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News